ಆತ ಹಲವು ಕನಸು ಕಂಡು ಮದುವೆ ಮಂಟಪವೇರಿದ್ದ. ಮದುಮಗಳನ್ನು ಕಂಡು ಖುಷಿಯಿಂದಲೇ ಆತ ತಾಳಿ ಕಟ್ಟಿದ್ದ. ಇಡೀ ನಂದೀಕೇಶ್ವರ ಕಲ್ಯಾಣ ಮಂಟಪದಲ್ಲಿ ಎರಡು ಕುಟುಂಬದವರ ಸಂಭ್ರಮವೋ ಸಂಭ್ರಮ. ಆದರೆ, ಈ ಸಂಭ್ರಮ ಬಹಳ ಕಾಲ ಉಳಿಯಲೇ ಇಲ್ಲ.
ತಾಳಿ ಕಟ್ಟಿ ಕೇವಲ 20 ನಿಮಿಷಗಳಾಗಿ ಇತರ ವಿಧಿವಿಧಾನಗಳು ನಡೆಯುತ್ತಿದ್ದವಷ್ಟೇ. ಈ ವೇಳೆ ವರನಿಗೆ ಹೃದಯಾಘಾತವಾಗಿದೆ. ಅಲ್ಲಿಯೇ ಕುಸಿದು ಬಿದ್ದಿ ಸಾವು ಕಂಡಿದ್ದಾನೆ. ಇದೆಲ್ಲವೂ ಎರಡೂ ಕುಟುಂಬಗಳು ಹಾಗೂ ಆಪ್ತರ ಸಮ್ಮುಖದಲ್ಲೇ ಆಗಿದೆ. ಒಂದೇ ಕ್ಷಣದಲ್ಲಿ ಮದುವೆ ಮನೆ ಸೂತಕದ ಮನೆಯಾಗಿ ಬದಲಾಗಿ ಹೋಯಿತು. ಖುಷಿಯಿಂದ ಮದುಮಗಳನ್ನು ಕಲ್ಯಾಣ ಮಂಟಪದಿಂದ ಕರೆದುಕೊಂಡು ಹೋಗಬೇಕು ಎನ್ನುವ ಆಸೆಯಲ್ಲಿದ್ದ ವರನ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ.
ತಾಳಿ ಕಟ್ಟಿ ಸಂಭ್ರಮದಲ್ಲಿರುವಾಗಲೇ ಹೃದಯಾಘಾತವಾಗಿ ವರ ಪ್ರವೀಣ ಮೃತಪಟ್ಟಿದ್ದಾನೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಘಟನೆ ನಡೆದಿದೆ. ತಾಳಿ ಕಟ್ಟಿ ಅಂದಾಜು 20 ನಿಮಿಷ ಆದ ಬಳಿಕ ವೇದಿಕೆಯಲ್ಲಿಯೇ ಮದುಮಗ ಏಕಾಏಕಿ ಕುಸಿದು ಬಿದ್ದಿದ್ದಾನೆ. ಜಮಖಂಡಿ ನಗರದ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿದೆ.
ಇದ್ದಕ್ಕಿದ್ದಂತೆ ಮದುಮಗ ಪ್ರವೀಣನಿಗೆ ಎದೆನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಿಸಬೇಕು ಎನ್ನುವಾಗಲೇ ಮದುವೆ ಮಂಟಪದಲ್ಲಿಯೇ ಆತ ಸಾವು ಕಂಡಿದ್ದಾನೆ. ಕುಸಿದು ಬಿದ್ದ ಬಳಿಕ ಮಾತನಾಡದೆ ಇರುವುದನ್ನ ಗಮನಿಸಿ ತಕ್ಷಣವೇ ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ವೈದ್ಯರು ಪರೀಕ್ಷೆ ನಡೆಸಿ ಪ್ರವೀಣ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಇದರ ಬೆನ್ನಲ್ಲಿಯೇ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಕೇವಲ 20 ನಿಮಿಷ ಮಾತ್ರವೇ ಮುತ್ತೈದೆಯಾಗಿದ್ದ ವಧುವಿನ ಬಗ್ಗೆಯೂ ಮರುಕಪಟ್ಟಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಯುವ ಜನಾಂಗದಲ್ಲಿ ಹಾರ್ಟ್ ಅಟ್ಯಾಕ್‌ನ ಪ್ರಕರಣಗಳು ವಿಪರೀತವಾಗಿ ಏರಿಕೆಯಾಗುತ್ತಿದೆ. ಕೆಲ ದಿನಗಳ ಹಿಂದೆ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನ ಕಲಾವಿದ ರಾಕೇಶ್ ಪೂಜಾರಿ ಕೂಡ ಹಠಾತ್ ಆಗಿ ಹೃದಯಾಘಾತದಿಂದ ಸಾವು ಕಂಡಿದ್ದರು. ಸ್ನೇಹಿತನ ಮದುವೆಯ ಮೆಹಂದಿ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡುವಾಗಲೇ ಅವರಿಗೆ ಹೃದಯಾಘಾತವಾಗಿ ಕುಸಿದು ಬಿದ್ದಿದ್ದರು. ಬಳಿಕ ಅಸ್ಪತ್ರೆಗೆ ದಾಖಲು ಮಾಡಿದರೂ ಅವರು ಬದುಕುಳಿದಿರಲಿಲ್ಲ. ಇದು ಇಡೀ ರಾಜ್ಯಕ್ಕೆ ಆಘಾತ ತಂದಿತ್ತು. ಈಗ ಅದೇ ರೀತಿಯ ಇನ್ನೊಂದು ಪ್ರಕರಣವಾಗಿದ್ದು, ರಾಜ್ಯ ಆರೋಗ್ಯ ಇಲಾಖೆ ಈ ನಿಟ್ಟಿನಲ್ಲಿ ಗಮನವಹಿಸಬೇಕಾಗಿದೆ.
ಯುವ ಜನಾಂಗದಲ್ಲಿ ಹಠಾತ್ ಆಗಿ ಹೃದಯಾಘಾತವಾಗಿರುವ ಬಗ್ಗೆ ಸರ್ಕಾರವೂ ಕೂಡ ಗಂಭೀರವಾಗಿ ಯೋಚನೆ ಮಾಡಬೇಕಾಗಿದೆ. ಅದರಲ್ಲೂ ಕೋವಿಡ್ ಹಾಗೂ ಕೋವಿಡ್ ಸಮಯದಲ್ಲಿ ಲಸಿಕೆ ಹಾಕಿಸಿಕೊಂಡ ಬಳಿಕ ಹೃದಯಾಘಾತದ ಪ್ರಮಾಣದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

ತಾಳಿ ಕಟ್ಟಿ 20 ನಿಮಿಷಕ್ಕೆ ಹೃದಯಾಘಾತದಿಂದ ವರ ಸಾವು, ಸೂತಕದ ಮನೆಯಾದ ಮದುವೆ ಮಂಟಪ!
WhatsApp Group
Join Now