ಎರಡೂ ಕಡೆ ‘ಕೈ’ ಹಿಡಿದ ಗ್ಯಾರಂಟಿ : ಪಂಚರಾಜ್ಯ ಚುನಾವಣೆ ಫಲಿತಾಂಶದಿಂದ ನಮ್ಮ ರಾಜ್ಯಕ್ಕೆ ಏನೂ ಆಗುವುದಿಲ್ಲ : ಡಿ.ಕೆ. ಶಿವಕುಮಾರ್

Spread the love

‘ಗ್ಯಾರಂಟಿ ಯೋಜನೆಗಳು ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ನಮ್ಮ ಕೈ ಹಿಡಿದಿವೆ. ತಮಿಳುನಾಡಿನದ್ದು ಅಚ್ಚರಿಯ ಫಲಿತಾಂಶವಾಗಿದ್ದು, ಅಲ್ಲಿನ ಜನರ ನಾಡಿಮಿಡಿತ ಗ್ರಹಿಸಲು ಆಗಲಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚುನಾವಣಾ ಫಲಿತಾಂಶದ ಕುರಿತು ವಿಶ್ಲೇಷಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕೇರಳದ ಫಲಿತಾಂಶ ನಿರೀಕ್ಷಿತ. ಅಸ್ಸಾಂನಲ್ಲಿ ಕ್ಷೇತ್ರ ಮರುವಿಂಗಡಣೆ ವೇಳೆಯಲ್ಲಿ ಅಲ್ಪಸಂಖ್ಯಾತರು ಒಂದೇ ಕಡೆ ಬರುವಂತೆ ಉಪಾಯವಾಗಿ ಮಾಡಿದ್ದರಿಂದ ನಿರೀಕ್ಷೆಯ ಫಲಿತಾಂಶ ಬಂದಿಲ್ಲ’ ಎಂದು ದೂರಿದರು.

‌’ಚುನಾವಣೆ ಫಲಿತಾಂಶವು ರಾಜ್ಯದಲ್ಲಿ ಏನಾದರೂ ಬದಲಾವಣೆ ತರಲಿದೆಯೇ’ ಎಂಬ ಪ್ರಶ್ನೆಗೆ, ‘ನಮ್ಮ ರಾಜ್ಯಕ್ಕೆ ಏನೂ ಆಗುವುದಿಲ್ಲ. ಒಂದಷ್ಟು ಜನಕ್ಕೆ ಸಂತೋಷ, ಒಂದಷ್ಟು ಜನಕ್ಕೆ ಬೇಜಾರು ಆಗಬಹುದು. ಡಬಲ್ ಎಂಜಿನ್ ಸರ್ಕಾರ ಇದ್ದಾಗಲೇ ಅವರಿಗೆ ಏನೂ ಮಾಡಲು ಸಾಧ್ಯ ಆಗಿರಲಿಲ್ಲ’ ಎಂದರು.

‘ತಮಿಳುನಾಡಿನಲ್ಲಿ ಸ್ಟಾಲಿನ್ ಜೊತೆ ರಾಹುಲ್ ಗಾಂಧಿ ಪ್ರಚಾರದಲ್ಲಿ ಕಾಣಿಸಿಕೊಂಡಿರಲಿಲ್ಲವಲ್ಲ’ ಎಂಬ ಪ್ರಶ್ನೆಗೆ, ‘ಆ ಬಗ್ಗೆ ಮಾತನಾಡಲು ನಾನು ಹೋಗುವುದಿಲ್ಲ. ಹೈಕಮಾಂಡ್ ತೀರ್ಮಾನ ಮಾಡಿದಂತೆ ನಾವೆಲ್ಲರೂ ಅಲ್ಲಿಗೆ ಪ್ರಚಾರಕ್ಕೆ ಹೋಗಿದ್ದೇವಲ್ಲ’ ಎಂದರು.

‘ಪಶ್ಚಿಮ ಬಂಗಾಳದಲ್ಲಿ ವ್ಯವಸ್ಥಿತವಾಗಿ ಅಧಿಕಾರ ದುರುಪಯೋಗವಾಗಿದೆ. ಚುನಾವಣಾ ಆಯೋಗವನ್ನು ವ್ಯಾಪಕವಾಗಿ ದುರುಪಯೋಗ ಮಾಡಿಕೊಂಡಿದ್ದಾರೆ. ಈ ಹಿಂದೆ ಬಹಳ ಪ್ರಯತ್ನ ಮಾಡಿದರು. ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಿ ಹಾಕಿದ ಕಾರಣಕ್ಕೆ ಬದಲಾವಣೆಯಾಗಿದೆ’ ಎಂದರು

‘ಪಕ್ಷಕ್ಕೆ ಎಸ್‌ಡಿಪಿಐ ಅಪಾಯ’

‘ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಎಸ್‌ಡಿಪಿಐನಿಂದ ನಮಗೆ (ಪಕ್ಷಕ್ಕೆ) ಅಪಾಯ ಆಗಿದೆ. ಎಸ್‌ಡಿಪಿಐ ಅಭ್ಯರ್ಥಿ ಅಲ್ಪಸಂಖ್ಯಾತರ ಮತ ಬುಟ್ಟಿಗೆ ಕೈಹಾಕಿದ್ದರಿಂದ ನಮ್ಮ ಅಭ್ಯರ್ಥಿಯ ಗೆಲುವಿನ ಅಂತರ ಕಡಿಮೆ ಆಯಿತು’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

‘ಇಲ್ಲಿ ಹಲವು ಗೊಂದಲಗಳ ಕಾರಣಕ್ಕೆ 25 ಸಾವಿರದಿಂದ 30 ಸಾವಿರ ಅಂತರದ ಗೆಲುವು ಸಿಗುವುದಿಲ್ಲ ಎಂಬುದು ಗೊತ್ತಿತ್ತು. ಆದರೆ ಆರಾಮವಾಗಿ ಗೆಲ್ಲುತೇವೆ ಎಂಬ ವಿಶ್ವಾಸ ಇತ್ತು. ಹಾಗೆಂದು ಎಸ್‌ಡಿಪಿಐ ಅನ್ನು ನಾವು ಹಗುರವಾಗಿ ಪರಿಗಣಿಸಿರಲಿಲ್ಲ. ಜನರ ಕಷ್ಟಕ್ಕೆ ನಮ್ಮ ಸರ್ಕಾರ ಸ್ಪಂದಿಸಿದ್ದರಿಂದಾಗಿ ಚುನಾವಣೆ ಗೆಲ್ಲಲು ಸಾಧ್ಯವಾಯಿತು’ ಎಂದರು.

WhatsApp Group Join Now

Spread the love

Leave a Reply