ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ಸಾವು: Viral Video ಬಳಿಕ ಪ್ರೊಫೆಸರ್ ಸೇರಿ ನಾಲ್ವರ ವಿರುದ್ಧ ಪ್ರಕರಣ!

Spread the love

ಇತ್ತೀಚೆಗಷ್ಟೇ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾದ ಧರ್ಮಶಾಲಾದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿನಿ ಪಲ್ಲವಿ (19) ಸಾವಿನ ಪ್ರಕರಣದಲ್ಲಿ ನಾಲ್ವರ ವಿರುದ್ಧ ಕೇಸ್ ದಾಖಲಾಗಿದೆ. ಹಿಮಾಚಲ ಪ್ರದೇಶ ಪೊಲೀಸರು ಕಾಲೇಜಿನ ಪ್ರಾಧ್ಯಾಪಕ ಮತ್ತು ಮೂವರು ವಿದ್ಯಾರ್ಥಿನಿಯರ ವಿರುದ್ಧ ರ‍್ಯಾಗಿಂಗ್, ದೈಹಿಕ ಹಲ್ಲೆ ಮತ್ತು ಲೈಂಗಿಕ ಕಿರುಕುಳದ ಆರೋಪದಡಿ ಪ್ರಕರಣ ದಾಖಲಿಸಿ, ತನಿಖೆಗೆ ಒಳಪಡಿಸಿದ್ದಾರೆ.

ಮೃತ ಪಲ್ಲವಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದಳು. ಕಳೆದ ವರ್ಷ ಸೆಪ್ಟೆಂಬರ್ 18ರಂದು ಅದೇ ಕಾಲೇಜಿನ ಮೂವರು ವಿದ್ಯಾರ್ಥಿಗಳಾದ ಹರ್ಷಿತಾ, ಆಕೃತಿ ಮತ್ತು ಕೊಮೊಲಿಕಾ ಎಂಬುವವರು ತಮ್ಮ ಮಗಳನ್ನು ಬೆದರಿಸಿ, ಮಾನಸಿಕವಾಗಿ ಕಿರುಕುಳ ನೀಡಿ, ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಯುವತಿಯ ತಂದೆ ವಿಕ್ರಮ್ ಕುಮಾರ್, ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಾಧ್ಯಾಪಕ ಅಶೋಕ್ ಕುಮಾರ್ ಪಲ್ಲವಿಯನ್ನು ಅಶ್ಲೀಲ ಕೃತ್ಯಗಳಿಗೆ ಬಲವಂತ ಮಾಡಿದ್ದ ಎಂದು ಗಂಭೀರ ಆರೋಪ ಎಸಗಿದ್ದಾರೆ.

ತಂದೆ ಕಣ್ಣೀರು

“ಈ ಕಿರುಕುಳ ಮತ್ತು ಬೆದರಿಕೆಯಿಂದ ನನ್ನ ಮಗಳು ಮಾನಸಿಕವಾಗಿ ಅಸ್ವಸ್ಥಳಾದಳು. ದಿನ ಕಳೆದಂತೆ ಆಕೆಯ ಆರೋಗ್ಯ ತೀವ್ರವಾಗಿ ಹದಗೆಟ್ಟಿತು. ಆರಂಭದಲ್ಲಿ ಆಕೆಗೆ ರಾಜ್ಯದ ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದೆವು. ಆದರೆ, ಮಗಳ ಸ್ಥಿತಿ ಅದಾಗಲೇ ತೀವ್ರ ಹದಗೆಟ್ಟಿ ಹೋಗಿತ್ತು. ಡಿ.26ರಂದು ಲುಧಿಯಾನದ ದಯಾನಂದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ವರ್ಗಾಯಿಸಲಾಯಿತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಮಗಳ ಸಾವನ್ನಪ್ಪಿದಳು” ಎಂದು ತಂದೆ ಪೊಲೀಸರ ಬಳಿ ಕಣ್ಣೀರಿಟ್ಟಿದ್ದಾರೆ.

ಮೊದಲೇ ಕೇಸ್ ಏಕೆ ದಾಖಲಿಸಲಿಲ್ಲ?

ಮಗಳು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಮತ್ತು ಮಾನಸಿಕ ಸಮಸ್ಯೆಗಳಿಂದ ಒದ್ದಾಡುತ್ತಿದ್ದರಿಂದ ನಮಗೆ ಮೊದಲೇ ದೂರು ದಾಖಲಿಸಲು ಸಾಧ್ಯವಾಗಲಿಲ್ಲ. ಅವಳನ್ನು ಉಳಿಸಿಕೊಳ್ಳುವುದು ನಮ್ಮ ಆಲೋಚನೆ ಆಗಿತ್ತು. ಈಗ ಆಕೆಯ ಸಾವಿನ ನಂತರ ನಮ್ಮ ಇಡೀ ಕುಟುಂಬವೇ ಕಂಗಾಲಾಗಿದೆ ಎಂದು ಕುಮಾರ್ ಖಾಕಿ ಬಳಿ ಹೇಳಿಕೊಂಡಿದ್ದಾಗಿ ಮೂಲಗಳು ತಿಳಿಸಿವೆ.

ಧರ್ಮಶಾಲಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 75, 115(2) ಮತ್ತು 3(5) ರ ಅಡಿಯಲ್ಲಿ ಪ್ರೊಫೆಸರ್ ಅಶೋಕ್ ಕುಮಾರ್ ಮತ್ತು ಮೂವರು ವಿದ್ಯಾರ್ಥಿನಿಯರ ವಿರುದ್ಧ ಹಿಮಾಚಲ ಪ್ರದೇಶ ಶಿಕ್ಷಣ ಸಂಸ್ಥೆಗಳು (ರ‍್ಯಾಗಿಂಗ್ ನಿಷೇಧ) ಕಾಯ್ದೆ, 2009ರ ಸೆಕ್ಷನ್ 3ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ದೂರನ್ನು ಪರಿಶೀಲಿಸಿ, ಪ್ರಾಥಮಿಕ ತನಿಖೆ ಕೈಗೊಂಡ ಬಳಿಕ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

WhatsApp Group Join Now

Spread the love

Leave a Reply