ಹುಬ್ಬಳ್ಳಿ ನಗರದ ತಾರಿಹಾಳದ ವಾಜಪೇಯಿ ನಗರದಲ್ಲಿ ಭೀಕರ ಘಟನೆಯೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಶುರುವಾದ ಕೌಟುಂಬಿಕ ಜಗಳ ವಿಕೋಪಕ್ಕೆ ಹೋಗಿದ್ದು, ಪತಿಯೇ ತನ್ನ ಪತ್ನಿ ಹಾಗೂ ಆರು ತಿಂಗಳ ಹಸುಗೂಸು ಸೇರಿದಂತೆ ಒಂದೇ ಕುಟುಂಬದ ಐವರ ಮೇಲೆ ಆಯಸಿಡ್ ದಾಳಿ ಮಾಡಿದ್ದಾನೆ.
ಫೋಟೋ ವಿಚಾರಕ್ಕೆ ಶುರುವಾದ ಕಿರಿಕ್
ಆರೋಪಿ ಸುರೇಶ್ ಬೈಲ್ ಪತ್ತಾರ ವೃತ್ತಿಯಲ್ಲಿ ತಾಮ್ರ ಮತ್ತು ಹಿತ್ತಾಳೆ ಕೆಲಸ ಮಾಡುತ್ತಿದ್ದನು. ಮನೆಯಲ್ಲಿ ತನ್ನ ನಾದಿನಿಯರ ಫೋಟೋ ತೆಗೆಯುವ ವಿಚಾರವಾಗಿ ಸುರೇಶ್ ಹಾಗೂ ಆತನ ಪತ್ನಿ ರಾಜೇಶ್ವರಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು.
ನಾದಿನಿಯರ ಫೋಟೋ ತೆಗೆಯಬೇಡ ಎಂದು ಪತ್ನಿ ರಾಜೇಶ್ವರಿ ಹಲವಾರು ಬಾರಿ ತಾಕೀತು ಮಾಡಿದ್ದರೂ, ಸುರೇಶ್ ತನ್ನ ಚಾಳಿ ಮುಂದುವರಿಸಿದ್ದನು. ಇದೇ ವಿಷಯವಾಗಿ ಗಂಡ-ಹೆಂಡತಿ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಕೈಮೀರಿದೆ.
ಜಗಳದ ಭರದಲ್ಲಿ ವಿವೇಚನೆ ಕಳೆದುಕೊಂಡ ಸುರೇಶ್, ತಾಮ್ರ ಮತ್ತು ಹಿತ್ತಾಳೆ ವಸ್ತುಗಳನ್ನು ತೊಳೆಯಲು ಬಳಸುತ್ತಿದ್ದ ಪ್ರಬಲ ಕೆಮಿಕಲ್ (ಆಯಸಿಡ್) ಅನ್ನು ಪತ್ನಿ ರಾಜೇಶ್ವರಿ ಮೇಲೆ ಎರಚಿದ್ದಾನೆ. ಈ ವೇಳೆ ಅಡ್ಡ ಬಂದ ಕುಟುಂಬದ ಇತರ ಸದಸ್ಯರ ಮೇಲೆಯೂ ಆಯಸಿಡ್ ಬಿದ್ದಿದೆ. ಈ ಭೀಕರ ದಾಳಿಯಲ್ಲಿ ಆರು ತಿಂಗಳ ಪುಟ್ಟ ಕಂದಮ್ಮನ ಮುಖ ಹಾಗೂ ಬಾಯಿಗೆ ಆಯಸಿಡ್ ಬಿದ್ದಿರುವುದು ಎದೆ ನಡುಗಿಸುವಂತಿದೆ.
ದಾಳಿಯಲ್ಲಿ 24 ವರ್ಷದ ಪತ್ನಿ ರಾಜೇಶ್ವರಿ ಅವರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ ಶೃತಿ ಮತ್ತು ರೇಷ್ಮಾ ಎಂಬುವವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಇತ್ತ ಆಯಸಿಡ್ ಎರಚುವ ಬರದಲ್ಲಿ ಆರೋಪಿ ಸುರೇಶ್ ಮೇಲೆಯೂ ಕೆಮಿಕಲ್ ಬಿದ್ದು ಆತನಿಗೂ ಗಾಯಗಳಾಗಿವೆ. ಸದ್ಯ ಗಾಯಾಳುಗಳನ್ನೆಲ್ಲಾ ತಕ್ಷಣವೇ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಸುರೇಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಶಾಂತಿಯುತವಾಗಿದ್ದ ವಸತಿ ಪ್ರದೇಶದಲ್ಲಿ ನಡೆದ ಈ ಆಯಸಿಡ್ ದಾಳಿ ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.
ನಾದಿನಿಯ ಫೋಟೋ ತೆಗೆದಿದ್ದಕ್ಕೆ “ಬಾವ” ನೆಗೆ ಧಕ್ಕೆ – ಐವರ ಮೇಲೆ ಆಸಿಡ್ ದಾಳಿ.!
WhatsApp Group
Join Now