ಸಾವರ್ಕರ್ ಮುಖವಾಡದ ಜೊತೆಯಲ್ಲೇ ಸಂಘಪರಿವಾರ, ಬಿಜೆಪಿಯ ಮುಖವಾಡವೂ ಕಳಚುತ್ತದೆ: ಬಿ.ಕೆ.ಹರಿಪ್ರಸಾದ್

Spread the love

‘ಸಾವರ್ಕರ್ ಮುಖವಾಡದ ಜೊತೆಯಲ್ಲೇ ಸಂಘಪರಿವಾರ ಹಾಗೂ ಬಿಜೆಪಿಯ ಮುಖವಾಡವೂ ಕಳಚುತ್ತದೆ. ‘ಇತಿಹಾಸವನ್ನು ಮರೆತವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ’. ಇತಿಹಾಸ ತಿರುಚುವ ಕೈಗಳು ಯಾವಾಗಲೂ ನಡುಗುತ್ತವೆ. ಆದರೆ ಸತ್ಯವನ್ನು ಹಿಡಿದ ಕೈಗಳು ಎಂದಿಗೂ ತಲೆಬಾಗುವುದಿಲ್ಲ ಎಂಬುದನ್ನು ಬಿಜೆಪಿ ನಾಯಕರುಗಳು, ವಾಟ್ಸ್‌ಅಪ್ ಯೂನಿವರ್ಸಿಟಿಯ ಮಬ್ಭಕ್ತರು ಅರ್ಥಮಾಡಿಕೊಳ್ಳಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.

ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಸಾವರ್ಕರ್ ವೀರನೂ ಅಲ್ಲ, ಶೂರನೂ ಅಲ್ಲ, ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದವರು’ ಎಂದು ಸ್ವತಃ ಸಾವರ್ಕರ್ ಮರಿಮೊಮ್ಮಗನೇ ಕೋರ್ಟ್‍ನಲ್ಲಿ ಹೇಳಿಕೆ ನೀಡಿದ್ದಾರೆ. ಇತಿಹಾಸವನ್ನು ತಿರುಚುವ ಕೈಗಳಿಗೆ ಸತ್ಯದ ಬೆಂಕಿ ತಗುಲಿದೆ. ಇತಿಹಾಸವನ್ನು ಮಸುಕುಗೊಳಿಸಬಹುದು, ಆದರೆ ಸತ್ಯದ ಬೆಳಕನ್ನು ನಂದಿಸಲು ಯಾರಿಗೂ ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ’ ಎಂದು ಉಲ್ಲೇಖಿಸಿದ್ದಾರೆ.

‘ಸಾವರ್ಕರ್ ಬಗ್ಗೆ ದಶಕಗಳಿಂದಲೂ ಸುಳ್ಳಿನ ಕತೆಗಳನ್ನು ಕಟ್ಟುತ್ತಲೇ ಇರುವವರಿಗೆ ಕೋರ್ಟಿನ ಕಟೆಕಟೆಯಲ್ಲಿ ನಿಂತ ಸಾವರ್ಕರ್ ಮರಿಮೊಮ್ಮಗ ಕಪಾಳಮೋಕ್ಷ ಮಾಡಿದಂತಿದೆ. ಸಾವರ್ಕರ್ ಒಬ್ಬ ‘ಅಜೇಯ ವೀರ, ಅಪ್ರತಿಮ ದೇಶಭಕ್ತ, ರಾಷ್ಟ್ರದ ಚಿಂತಕ’ ಎಂದು ಎದೆಯುಬ್ಬಿಸಿ ಹಾದಿ-ಬೀದಿಯಲ್ಲಿ ಬಿರುದು-ಬಾವಲಿಗಳನ್ನು ಕೊಟ್ಟವರಿಗೆ ಸಾವರ್ಕರ್ ಮರಿಮೊಮ್ಮಗ ದಾಖಲೆ ಸಮೇತ ಸತ್ಯವನ್ನು ಅನಾವರಣಗೊಳಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

‘ಬ್ರಿಟಿಷರಿಗೆ ಸಾವರ್ಕರ್ ಐದು ಬಾರಿ ಕ್ಷಮಾಪಣೆ ಅರ್ಜಿಗಳು ಬರೆದಿದ್ದು ನಿಜಾ.! ‘ಹಸು ದೇವರಲ್ಲ, ಉಪಯುಕ್ತ ಪ್ರಾಣಿ’ ಎಂದು ಸಾವರ್ಕರ್ ಹೇಳಿದ್ದು ಸತ್ಯ.. ‘ಸ್ವಾತಂತ್ರ್ಯವೀರ’ ಎಂಬ ಬಿರುದು ಸರಕಾರದ ಮುದ್ರೆ ಅಲ್ಲ, ಒಬ್ಬ ಲೇಖಕರ ಕಲ್ಪಿತ ಪದ. ಈ ಮಾತುಗಳನ್ನು ಕೋರ್ಟ್‍ನಲ್ಲಿ ನಿಂತು ಇತಿಹಾಸದ ದಾಖಲೆ ಸಮೇತ ಹೇಳಿಕೆ ನೀಡಿರುವುದು ಸಾವರ್ಕರ್ ಮರಿಮೊಮ್ಮಗ ಸತ್ಯಕಿ ಸಾವರ್ಕರ್’ ಎಂದು ಅವರು ವಿವರಿಸಿದ್ದಾರೆ.

‘ಇತಿಹಾಸವನ್ನು ಪ್ರಚಾರ ಸಾಮಾಗ್ರಿಯಾಗಿ ಬಳಸುವ ರಾಜಕೀಯ ವ್ಯಸನಕ್ಕೆ ಬಿಜೆಪಿ ನಾಯಕರುಗಳು ನಿಸ್ಸೀಮರು. ಪಠ್ಯಪುಸ್ತಕಗಳಲ್ಲಿ ಪುಟಗಳನ್ನು ಕತ್ತರಿಸಿ, ಹೊಸ ಕಥೆಗಳನ್ನು ಸೇರಿಸಿ, ಹೇಡಿಗಳನ್ನು ‘ವೀರ’ರನ್ನಾಗಿಸಿ ತಯಾರಿಸುವ ಕಾರ್ಖಾನೆಗಳನ್ನು ಸೃಷ್ಟಿಮಾಡಿದ್ದೇ ಬಿಜೆಪಿ ಪಕ್ಷ. ಪ್ರಶ್ನೆ ಕೇಳಿದರೆ ದೇಶದ್ರೋಹಿ, ದಾಖಲೆ ತೋರಿಸಿದರೆ ವಿರೋಧಿ, ಇತಿಹಾಸ ಹೇಳಿದರೆ ಅಪರಾಧಿ. ಇದು ಬಿಜೆಪಿ ಸೃಷ್ಟಿಸಿದ ವರ್ತಮಾನದ ದೇಶಭಕ್ತಿಯ ಪರಾಕಾಷ್ಟೆಯ ನಿದರ್ಶನಗಳು. ಸಾವರ್ಕರ್ ಬಗ್ಗೆ ಇರುವ ಚರ್ಚೆ ವ್ಯಕ್ತಿಗತವಲ್ಲ, ಅದು ಬಿಜೆಪಿ ಪಕ್ಷದ ರಾಜಕೀಯ ಸಂಸ್ಕೃತಿಯ ಕನ್ನಡಕ’ ಎಂದು ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

WhatsApp Group Join Now

Spread the love

Leave a Reply