ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಶಾಸಕ ಜಮೀರ್ ಅಹ್ಮದ್ ನಾನಾ ರೀತಿಯ ಸರ್ಕಸ್, ಕ್ಯಾರೆ ಎನ್ನದ ಸಿಎಂ ಡಿಕೆಶಿ

Spread the love

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಮಾಪ್ತ ಎಂಬ ಕಾರಣಕ್ಕಾಗಿ ಪದೇ ಪದೇ ಪಕ್ಷದ ಶಿಸ್ತು ಉಲ್ಲಂಘಿಸುತ್ತಿದ್ದ ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌, ಈಗ ಹಿರಿಯ ನಾಯಕರ ಮನೆ ಮನೆ ಸುತ್ತುವ ಪರಿಸ್ಥಿತಿ ಬಂದಿದೆ.

ಜೂನ್‌ 18ರ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂಬ ವದಂತಿಗಳಿವೆ.

ಅದರಲ್ಲಿ ಅವಕಾಶ ಗಿಟ್ಟಿಸಲು ಬಹಳಷ್ಟು ಶಾಸಕರು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿದ್ದವರ ಪೈಕಿ ಜಮೀರ್‌ ಅಹಮದ್‌ ಖಾನ್‌ ಮತ್ತು ಎಚ್‌.ಸಿ.ಮಹದೇವಪ್ಪ ಅವರಿಗೆ ಎರಡನೇ ಬಾರಿ ಅವಕಾಶ ದೊರೆಯುವ ಸಾಧ್ಯತೆಗಳು ಕ್ಷೀಣವಾಗಿವೆ.

ಎಚ್‌.ಸಿ.ಮಹದೇವಪ್ಪ ಅವರು ವಿವಿಧ ಸಂಘಟನೆಗಳನ್ನು ಬಳಸಿಕೊಂಡು ಪ್ರತಿಭಟನೆ ನಡೆಸುವ ಮೂಲಕ ಸಂಪುಟ ಸೇರಲು ಹರಸಾಹಸ ನಡೆಸುತ್ತಿದ್ದಾರೆ. ಆದರೆ ಅದಕ್ಕೆ ಡಿ.ಕೆ.ಶಿವಕುಮಾರ್‌ ಕ್ಯಾರೆ ಎನ್ನುತ್ತಿಲ್ಲ.

ಜಮೀರ್‌ ಅಹಮದ್‌ ಖಾನ್‌ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ವಿವಾದದ ಕೇಂದ್ರ ಬಿಂದುವಾಗಿದ್ದರು. ನಾಯಕತ್ವದ ವಿಚಾರವಾಗಿ ಪದೇ ಪದೇ ಸಿದ್ದರಾಮಯ್ಯ ಅವರ ಪರವಾಗಿ ಬ್ಯಾಟಿಂಗ್‌ ಮಾಡಿ ಗೊಂದಲ ಮೂಡಿಸುತ್ತಿದ್ದರು.

ಹೈಕಮಾಂಡ್‌ ಎಚ್ಚರಿಕೆ ನೀಡಿದ ಹೊರತಾಗಿಯೂ ಜಮೀರ್‌ ತಮ ವರಸೆಯನ್ನು ಬದಲಿಸಿಕೊಂಡಿರಲಿಲ್ಲ, ವಸತಿ ಇಲಾಖೆ ನಿರ್ವಹಣೆ ಮಾಡುತ್ತಿದ್ದ ಜಮೀರ್‌ ಅವರ ಆಪ್ತ ಸಹಾಯಕರ ಮೇಲೆ ಗಂಭೀರ ಆರೋಪವೊಂದು ಕೇಳಿ ಬಂದಿತು. ಬಡವರಿಗೆ ಮನೆ ಮಂಜೂರಾತಿ ಮಾಡಲು ಲಂಚ ಕೇಳಲಾಗುತ್ತಿದೆ ಎಂದು ಆಡಳಿತ ಪಕ್ಷದ ಶಾಸಕ ಹಾಗೂ ಸಿದ್ದರಾಮಯ್ಯ ಅವರ ಆಪ್ತ ಬಿ.ಆರ್‌.ಪಾಟೀಲ್‌ ಟೀಕೆ ಮಾಡಿದ್ದರು. ಸಂಧಾನ ಸಭೆ ಮೂಲಕ ಆರೋಪವನ್ನು ಮರೆಮಾಚಲಾಯಿತು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೂ ಮುನ್ನ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗೆ ಟಿಕೆಟ್‌ ನೀಡಬೇಕೆಂದು ಜಮೀರ್‌ ಪಟ್ಟುಹಿಡಿದಿದ್ದರು. ಹಾಲಿ ಶಾಸಕ ಶ್ಯಾಮನೂರು ಶಿವಶಂಕರಪ್ಪ ಅವರು ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್‌ ನೀಡಬೇಕೆಂಬ ಕಾರಣಕ್ಕಾಗಿ ಹೈಕಮಾಂಡ್‌, ಸಮರ್ಥ ಶ್ಯಾಮನೂರ್‌ಗೆ ಸ್ಪರ್ಧೆ ಮಾಡಲು ಅವಕಾಶ ಕಲ್ಪಿಸಿತು. ಆದರೆ ಚುನಾವಣೆ ಸಂದರ್ಭದಲ್ಲಿ ಜಮೀರ್‌ ಅಹಮದ್‌ ಖಾನ್‌ ಕ್ಷೇತ್ರದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಮುಸ್ಲಿಮರಿಗೆ ಕಾಂಗ್ರೆಸ್‌‍ಗೆ ವಿರುದ್ಧವಾಗಿ ಮತ ಚಲಾಯಿಸುವಂತೆ ಕರೆ ನೀಡಿದ್ದರು ಎಂಬ ಆರೋಪಗಳಿವೆ. ಈ ಕುರಿತ ಆಡಿಯೋ ಒಂದು ಭಾರೀ ವೈರಲ್‌ ಆಗಿತ್ತು.

ನಾಯಕತ್ವದ ಬದಲಾವಣೆ ಬಳಿಕ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗುವ ಸಂದರ್ಭದಲ್ಲಿ ಹೊಸ ಸರ್ಕಾರ ರಚನೆಯ ವೇಳೆ ಈ ಆಡಿಯೋ ಪ್ರಕರಣ ಜಮೀರ್‌ ಅವರನ್ನು ಸಂಪುಟದಿಂದ ದೂರ ಇಡುವಂತೆ ಮಾಡಿತು. ತಾವು ಅಲ್ಪಸಂಖ್ಯಾತ ಸಮುದಾಯದ ಪರಮೋಚ್ಚ ನಾಯಕರಾಗಿದ್ದು ತಮನ್ನು ಬಿಟ್ಟು ಸರ್ಕಾರ ರಚನೆ ಸಾಧ್ಯವಿಲ್ಲ ಎಂಬ ಲೆಕ್ಕಾಚಾರದಲ್ಲಿದ್ದ ಜಮೀರ್‌ಗೆ, ಡಿ.ಕೆ.ಶಿವಕುಮಾರ್‌ ಮರ್ಮಾಘಾತ ನೀಡಿದ್ದರು.

ವಿಧಾನಸಭಾಧ್ಯಕ್ಷರಾಗಿದ್ದ ಯು.ಟಿ.ಖಾದರ್‌ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಜಮೀರ್‌ ಅವರಿಗೆ ತ್ರಿಶಂಕು ಸ್ಥಿತಿ ಕಾಣಿಸಿದ್ದರು. ಇತ್ತೀಚೆಗೆ ಸಿದ್ದರಾಮಯ್ಯ ಅವರು ಜಮೀರ್‌ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದರಿಂದಾಗಿ ರಾಜಕೀಯವಾಗಿ ತೀವ್ರ ಹಿನ್ನಡೆ ಅನುಭವಿಸುವಂತಾಗಿದೆ. ಹೀಗಾಗಿ ತಾವು ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ ಎಂದು ಸಾಬೀತು ಪಡಿಸಲು ಜಮೀರ್‌ ನಾಯಕರ ಮನೆಮನೆ ಸುತ್ತುತ್ತಿದ್ದಾರೆ.

ಮೂರು ದಿನಗಳಲ್ಲಿ ಎರಡನೇ ಬಾರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಅವರ ಸೂಚನೆ ಮೇರೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಆದರೆ ಎಲ್ಲಾ ಕಡೆಯಲ್ಲೂ ನಕಾರಾತಕ ಉತ್ತರ ಬಂದಿದ್ದರಿಂದ ಈಗ ಕೊನೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನೇ ಭೇಟಿ ಮಾಡಿದ್ದಾರೆ. ಎಲ್ಲರ ಬಳಿಯೂ ಮಂತ್ರಿಸ್ಥಾನ ನೀಡುವಂತೆ ದುಂಬಾಲು ಬಿದ್ದಿದ್ದಾರೆ.

ಕೆಳ ದಿನಗಳ ಹಿಂದಷ್ಟೆ ಜಮೀರ್‌ ಅವರು ಯಾರ ಮಾತಿಗೂ ಕವಡೆ ಕಾಸಿನ ಕಿಮತ್ತು ನೀಡದೆ, ಪದೇ ಪದೇ ವಿವಾದಾತಕ ಹೇಳಿಕೆಗಳನ್ನು ನೀಡಿ ಗೊಂದಲ ಮೂಡಿಸುತ್ತಿದ್ದರು. ಈಗ ಅದೇ ಜಮೀರ್‌ ಅಹಮದ್‌ ಖಾನ್‌ ಸಚಿವ ಸ್ಥಾನಕ್ಕಾಗಿ ಬೆಂಬಲಿಗರ ಮೂಲಕ ಪ್ರತಿಭಟನೆ ನಡೆಸುವುದು, ಹಿರಿಯ ನಾಯಕರ ಮನೆ ಬಾಗಿಲಿಗೆ ಹೋಗಿ ಅಂಗಲಾಚುವ ಪರಿಸ್ಥಿತಿಗೆ ತಲುಪಿದ್ದಾರೆ.

ಜೂನ್‌ 18ರ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂಬ ವದಂತಿಗಳಿವೆ. ಅದರಲ್ಲಿ ಅವಕಾಶ ಗಿಟ್ಟಿಸಲು ಬಹಳಷ್ಟು ಶಾಸಕರು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿದ್ದವರ ಪೈಕಿ ಜಮೀರ್‌ ಅಹಮದ್‌ ಖಾನ್‌ ಮತ್ತು ಎಚ್‌.ಸಿ.ಮಹದೇವಪ್ಪ ಅವರಿಗೆ ಎರಡನೇ ಬಾರಿ ಅವಕಾಶ ದೊರೆಯುವ ಸಾಧ್ಯತೆಗಳು ಕ್ಷೀಣವಾಗಿವೆ.

WhatsApp Group Join Now

Spread the love

Leave a Reply