ಗೃಹಜ್ಯೋತಿ ಫಲಾನುಭವಿಗಳೇ ಎಚ್ಚರ: ಜುಲೈ ವಿದ್ಯುತ್ ಬಿಲ್ ಬಗ್ಗೆ ಬೆಸ್ಕಾಂನಿಂದ ಹೊಸ ಪ್ರಕಟಣೆ!

Spread the love

ಗೃಹಜ್ಯೋತಿ ಯೋಜನೆಯ ಫಲಾನುಭವಿಗಳು ಸೇರಿದಂತೆ ಗೃಹ ಬಳಕೆದಾರರಿಗೆ ಬೆಸ್ಕಾಂ ಮಹತ್ವದ ಮಾಹಿತಿ ನೀಡಿದೆ. ಮನೆ-ಮನೆ ಮಾಹಿತಿ ಪರಿಶೀಲನೆಗಾಗಿ ಮೀಟರ್ ರೀಡರ್‌ಗಳನ್ನು ನಿಯೋಜಿಸಿರುವ ಹಿನ್ನೆಲೆಯಲ್ಲಿ, ಜುಲೈ ತಿಂಗಳಲ್ಲಿ ಗ್ರಾಹಕರಿಗೆ ನೈಜ ಮೀಟರ್ ರೀಡಿಂಗ್ ಬದಲಾಗಿ ಕಳೆದ ಮೂರು ತಿಂಗಳ ವಿದ್ಯುತ್ ಬಳಕೆಯ ಸರಾಸರಿ ಆಧಾರದ ಮೇಲೆ ಬಿಲ್ ನೀಡಲಾಗಿದೆ.

ಈ ಬಾರಿ ಗ್ರಾಹಕರಿಗೆ ಭೌತಿಕ ವಿದ್ಯುತ್ ಬಿಲ್ ವಿತರಿಸದೇ, ಬಿಲ್ ಮೊತ್ತವನ್ನು ಎಸ್‌ಎಂಎಸ್ ಹಾಗೂ ಇಮೇಲ್ ಮೂಲಕ ಕಳುಹಿಸಲಾಗಿದೆ. ಮೀಟರ್ ರೀಡರ್ ಮನೆಗೆ ಬಂದಿಲ್ಲ ಎಂದು ಆತಂಕ ಪಡುವ ಅಗತ್ಯವಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

ಬೆಸ್ಕಾಂ ಪ್ರಕಾರ, ಜುಲೈ ತಿಂಗಳ ಸರಾಸರಿ ಬಿಲ್ ಮೊತ್ತವನ್ನು ನಿಗದಿತ ಅವಧಿಯೊಳಗೆ ಪಾವತಿಸುವುದು ಕಡ್ಡಾಯವಾಗಿದೆ. ಬಿಲ್ ನೀಡಿದ ದಿನಾಂಕದಿಂದ 15 ದಿನಗಳೊಳಗೆ ಪಾವತಿ ಮಾಡಬೇಕು ಎಂದು ಗ್ರಾಹಕರಿಗೆ ಮನವಿ ಮಾಡಲಾಗಿದೆ.

ಗ್ರಾಹಕರು ಉಪ ವಿಭಾಗದ ನಗದು ಕೌಂಟರ್‌ಗಳು, ಬೆಸ್ಕಾಂ ವೆಬ್‌ಸೈಟ್, ಬೆಸ್ಕಾಂ ಮಿತ್ರ ಆಪ್ ಹಾಗೂ ಇತರೆ ಥರ್ಡ್ ಪಾರ್ಟಿ ಪಾವತಿ ಆಪ್‌ಗಳ ಮೂಲಕ ತಮ್ಮ ಬಿಲ್ ಮೊತ್ತವನ್ನು ಪರಿಶೀಲಿಸಿ ಪಾವತಿಸಬಹುದು.

ಆದರೆ ಎಚ್‌ಟಿ (HT) ಗ್ರಾಹಕರು, 40 HP ಮತ್ತು ಅದಕ್ಕಿಂತ ಹೆಚ್ಚಿನ ಮಂಜೂರಾದ ಲೋಡ್ ಹೊಂದಿರುವ ಎಲ್‌ಟಿ (LT) ಗ್ರಾಹಕರು, ಸೋಲಾರ್ ರೂಫ್‌ಟಾಪ್ (SRTPV) ಬಳಕೆದಾರರು ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ ಗ್ರಾಹಕರಿಗೆ ಮಾತ್ರ ನೈಜ ಮೀಟರ್ ರೀಡಿಂಗ್ ಆಧಾರದ ಮೇಲೆ ಬಿಲ್ ನೀಡಲಾಗುತ್ತದೆ ಎಂದು ಬೆಸ್ಕಾಂ ತಿಳಿಸಿದೆ.

ಇದೇ ವೇಳೆ ಆಗಸ್ಟ್ ತಿಂಗಳಿನಿಂದ ಮತ್ತೆ ಯಥಾಪ್ರಕಾರ ನಿಯಮಿತ ಮೀಟರ್ ರೀಡಿಂಗ್ ನಡೆಸಿ, ನೈಜ ವಿದ್ಯುತ್ ಬಳಕೆಯ ಆಧಾರದ ಮೇಲೆ ಬಿಲ್ ನೀಡಲಾಗುವುದು ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ. ಜುಲೈ ತಿಂಗಳ ಬಿಲ್ ಪಡೆದಿರುವ ಗ್ರಾಹಕರು ನಿಗದಿತ ಸಮಯದೊಳಗೆ ಬಿಲ್ ಪಾವತಿಸಿ ದಂಡ ಅಥವಾ ತಡ ಶುಲ್ಕದಿಂದ ತಪ್ಪಿಸಿಕೊಳ್ಳುವಂತೆ ಸೂಚಿಸಲಾಗಿದೆ.

WhatsApp Group Join Now

Spread the love

Leave a Reply