ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಅಧಿಕೃತ ಸರ್ಕಾರಿ ನಿವಾಸಕ್ಕಾಗಿ ಮೈಸೂರು ಮಹಾರಾಜರ ಕಾಲದ ಐತಿಹಾಸಿಕ ಕುಮಾರಕೃಪಾ ಅತಿಥಿ ಗೃಹದ ಪಾರಂಪರಿಕ ಕಟ್ಟಡವನ್ನು ಒಡೆಯುತ್ತಿರುವುದಕ್ಕೆ ಹಾಗೂ ರೈತರ ತೀವ್ರ ವಿರೋಧದ ನಡುವೆಯೂ ಬಿಡದಿ ಟೌನ್‌ಶಿಪ್ ಯೋಜನೆಗೆ ಅಂತಿಮ ಅಧಿಸೂಚನೆ ಹೊರಡಿಸಿರುವುದಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ(HD Kumaraswamy) ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ದಬ್ಬಾಳಿಕೆ ಮತ್ತು ರೈತ ವಿರೋಧಿ ಧೋರಣೆಯನ್ನು ಖಂಡಿಸಿದರು.
ಪಾರಂಪರಿಕ ಕಟ್ಟಡ ಒಡೆಯಲು ಇವರೇನು ಮಹಾರಾಜರಾ?
ಕುಮಾರಕೃಪಾ ಅತಿಥಿ ಗೃಹದ ಪಾರಂಪರಿಕ ಕಟ್ಟಡವನ್ನು ಸಿಎಂ ಡಿ.ಕೆ. ಶಿವಕುಮಾರ್ ತಮ್ಮ ನಿವಾಸಕ್ಕಾಗಿ ಧ್ವಂಸಗೊಳಿಸುತ್ತಿರುವುದಕ್ಕೆ ಆಕ್ರೋಶ ಹೊರಹಾಕಿದ ಕುಮಾರಸ್ವಾಮಿ, ಅದನ್ನು ಅವರು ವೈಯಕ್ತಿಕ ಮನೆ ಮಾಡಿಕೊಳ್ಳುವುದು ಬಿಡಲಿ. ಇನ್ನು 8 ವರ್ಷ ನಾನೇ ಮುಖ್ಯಮಂತ್ರಿಯಾಗಿ ಇರುತ್ತೇನೆ ಎಂದು ಡಿಕೆಶಿ ಹೇಳ್ತಾರಲ್ಲ, ಮುಂದಿನ ಐದು ವರ್ಷ ಇವರೇ ಅಧಿಕಾರದಲ್ಲಿ ಮುಂದುವರಿದರೆ ನಮ್ಮ ಹೆಮ್ಮೆಯ ವಿಧಾನಸೌಧಕ್ಕೆ ಏನು ಮಾಡ್ತಾರೋ ಎಂದು ನನಗೆ ಈಗಲೇ ಗಾಬರಿ ಆಗುತ್ತಿದೆ ಎಂದು ಲೇವಡಿ ಮಾಡಿದರು.
ಇದು ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣವಾದ ಐತಿಹಾಸಿಕ ಪಾರಂಪರಿಕ ಕಟ್ಟಡ. ಇಂತಹ ಇತಿಹಾಸ ಪ್ರಸಿದ್ಧ ಜಾಗವನ್ನು ಸ್ವಂತ ಮನೆಗಾಗಿ ಒಡೆಯುವ ಕೆಲಸ ಮಾಡುತ್ತಿರುವುದು ಅಕ್ಷಮ್ಯ ಅಪರಾಧ. ಇದರ ಪಕ್ಕದಲ್ಲೇ ಸರ್ಕಾರ ಹೊಸದಾಗಿ ಕಟ್ಟಿರುವ ಗೆಸ್ಟ್ ಹೌಸ್ ಇದೆ. ಹಾಗಿರುವಾಗ ಕೇವಲ ವಾಸದ ಮನೆಗಾಗಿ ಪಾರಂಪರಿಕ ಕಟ್ಟಡವನ್ನು ಒಡೆಯುವ ಯಾವುದೇ ಅವಶ್ಯಕತೆ ಇರಲಿಲ್ಲ ಎಂದು ಅವರು ಕಿಡಿಕಾರಿದರು.
ಶೇ. 80 ರಷ್ಟು ರೈತರ ವಿರೋಧವಿದ್ದರೂ ಒಕ್ಕಲೆಬ್ಬಿಸುವ ಸಂಚು
ಬಿಡದಿ ಟೌನ್‌ಶಿಪ್ ಯೋಜನೆಗೆ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿರುವುದನ್ನು ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ, ಆ ಭಾಗದ ರೈತರು ಬಹಳ ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲಿ ಕೃಷಿ ಮತ್ತು ತೋಟಗಾರಿಕೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ಹೈನುಗಾರಿಕೆ (ಹಾಲು ಉತ್ಪಾದನೆ) ಮೂಲಕ ರೈತರು ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಅಂತಹ ಸಮೃದ್ಧ ಭೂಮಿಯಿಂದ ಸರ್ಕಾರ ರೈತರನ್ನು ಬಲವಂತವಾಗಿ ಒಕ್ಕಲೆಬ್ಬಿಸಲು ಹೊರಟಿದೆ. ರೈತರಿಗೆ ಬೆಂಬಲ ನೀಡಲು ಹೋದವರ ಮೇಲೆ ಪೊಲೀಸರ ಮೂಲಕ ಸುಳ್ಳು ಎಫ್‌ಐಆರ್ ದಾಖಲಿಸಿ ತೊಂದರೆ ಕೊಡಲಾಗುತ್ತಿದೆ ಎಂದು ಆರೋಪಿಸಿದರು.
ನಾನೇ ತಂದ ಯೋಜನೆಯನ್ನು ಅಂದಿನ ಕಾಂಗ್ರೆಸ್ ವಿರೋಧಿಸಿತ್ತು!
2006 ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಈ ಬಿಡದಿ ಟೌನ್‌ಶಿಪ್ ಯೋಜನೆ ಜಾರಿಗೆ ತರಲು ನಿರ್ಧರಿಸಿದ್ದು ನಾನೇ. ಆಗ ಇದೇ ಕಾಂಗ್ರೆಸ್‌ನವರು ಅದನ್ನು ವಿರೋಧಿಸಿದ್ದರು. ನಂತರ ನಾನು ಸತ್ಯಶೋಧನಾ ಸಮಿತಿಯ ವರದಿ ಹಾಗೂ ಅಲ್ಲಿನ ಜನರ ತೀವ್ರ ವಿರೋಧವನ್ನು ಗಮನಿಸಿ, ರೈತರ ಹಿತದೃಷ್ಟಿಯಿಂದ ಆ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದೆ. ಆದರೆ, ಈಗಿನ ಸರ್ಕಾರ ಬೆಂಗಳೂರು ದಕ್ಷಿಣ ವ್ಯಾಪ್ತಿಯನ್ನು ವಿಸ್ತರಣೆ ಮಾಡುವ ನೆಪದಲ್ಲಿ ಸಂಪೂರ್ಣ ಜನವಿರೋಧಿ ನೀತಿಯನ್ನು ಜಾರಿಗೆ ತರುತ್ತಿದೆ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.
ರೈತರ ಮೇಲಿನ ದಬ್ಬಾಳಿಕೆ ಸರ್ಕಾರಕ್ಕೆ ತಿರುಗುಬಾಣವಾಗಲಿದೆ
ರೈತರ ಹೋರಾಟದ ವಿರುದ್ಧ ಕಾನೂನು ಹೋರಾಟ ಮಾಡಲು ಹೊರಟಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ರೈತರ ಬಗ್ಗೆ ಎಷ್ಟು ಗೌರವ ಇದೆ ಎಂಬುದು ಇದರಿಂದಲೇ ಜಗಜ್ಜಾಹೀರಾಗಿದೆ. ದೊಡ್ಡಬಳ್ಳಾಪುರ ಭಾಗದಲ್ಲೂ ರೈತರ ಮೇಲೆ ಇಂತಹದ್ದೇ ದಬ್ಬಾಳಿಕೆ ನಡೆಯುತ್ತಿದೆ. ಧೈರ್ಯವಿದ್ದರೆ ಮುಖ್ಯಮಂತ್ರಿಗಳು ಹಳ್ಳಿಗಳಿಗೆ ಬಂದು ಜನರನ್ನು ಕೇಳಲಿ, ಎಷ್ಟು ಜನ ಈ ಯೋಜನೆಗೆ ಒಪ್ಪಿದ್ದಾರೆ ಎಂದು ಚರ್ಚಿಸಲಿ. ಯೋಜನೆಗೆ ಸಾಥ್ ನೀಡುತ್ತಿರುವ ಆಡಳಿತ ಪಕ್ಷದ ಶಾಸಕರನ್ನು ಜನರೇ ಹಳ್ಳಿಗಳಿಂದ ಓಡಿಸುವ ದಿನ ದೂರವಿಲ್ಲ. ಯಾವುದೇ ಯೋಜನೆ ತರುವುದಿದ್ದರೂ ರೈತರ ಮನವೊಲಿಸಿ ಮಾಡಬೇಕು. ಅದನ್ನು ಬಿಟ್ಟು ದಬ್ಬಾಳಿಕೆ ನಡೆಸಿ ಮಾಡೇ ಮಾಡ್ತೀವಿ ಎನ್ನುವ ಸರ್ಕಾರದ ಹಠಮಾರಿ ಧೋರಣೆ ಮುಂದಿನ ದಿನಗಳಲ್ಲಿ ಇವರಿಗೆ ತಿರುಗುಬಾಣವಾಗಲಿದೆ ಎಂದು ಕುಮಾರಸ್ವಾಮಿ ಭವಿಷ್ಯ ನುಡಿದರು.
ಮುಂದೆಯೂ ಡಿಕೆಶಿ ಸಿಎಂ ಆದರೆ ನನಗೆ ಗಾಬರಿ: ಲೇವಡಿ ಮಾಡಿದರಾ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ.!
WhatsApp Group
Join Now