2028ರಲ್ಲೂ ಡಿಕೆಶಿ ಸಿಎಂ ಆದರೆ ತಪ್ಪೇನಿಲ್ಲ : ಸಾಹುಕಾರ್ ಸತೀಶ್ ಜಾರಕಿಹೊಳಿ ಹೇಳಿಕೆ ಹಿಂದಿನ ಗುಟ್ಟೇನು.?

Spread the love

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(CM.DK Shivakumar) ನೇತೃತ್ವದಲ್ಲೇ ಮುಂದಿನ ವಿಧಾನಸಭೆ ಚುನಾವಣೆ ಎದುರಿಸಲಿದ್ದೇವೆ. ಒಂದು ವೇಳೆ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ 2028ರಲ್ಲೂ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ(Satish jarkiholi) ಹೇಳಿದ್ದಾರೆ.

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣದ(Politics) ನಾಯಕತ್ವ, ಗೃಹಲಕ್ಷ್ಮಿ(Gruhalakshmi) ಯೋಜನೆ ಪರಿಷ್ಕರಣೆ ಹಾಗೂ ಖಾತೆ ಹಂಚಿಕೆ ಕುರಿತಂತೆ ಹಲವು ಪ್ರಮುಖ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಕೆಲಸ ಮಾಡಿದವರಿಗೆ ಕೂಲಿ ಸಿಗಬೇಕು!

ಕಷ್ಟಪಟ್ಟು ಕೆಲಸ ಮಾಡಿದವರಿಗೆ ಅದಕ್ಕೆ ತಕ್ಕ ಕೂಲಿ ಸಿಗಬೇಕು ಎಂಬುದಕ್ಕೆ ನನ್ನ ಸಂಪೂರ್ಣ ಸಹಮತವಿದೆ. 2028ರ ವಿಧಾನಸಭೆ ಚುನಾವಣೆಯನ್ನು ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲೇ ಎದುರಿಸಲು ನಾವೆಲ್ಲರೂ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವುದಾಗಿ ಖುದ್ದಾಗಿ ಮುಖ್ಯಮಂತ್ರಿಗಳೇ ಹೇಳುತ್ತಿದ್ದಾರೆ, ಇದು ಸಂತೋಷದ ವಿಚಾರ ಮತ್ತು ಇದಕ್ಕೆ ನನ್ನ ಪೂರ್ಣ ಬೆಂಬಲವಿದೆ ಎಂದರು. ಇದೇ ವೇಳೆ ತಮಗೇನು ಸಿಎಂ ಆಗುವ ಆತುರವಿಲ್ಲ, ಇನ್ನೂ ವಯಸ್ಸಿದೆ ಎಂದು ಸ್ಪಷ್ಟಪಡಿಸಿದ ಅವರು, ಹೈಕಮಾಂಡ್ ಡಿ.ಕೆ. ಶಿವಕುಮಾರ್ ಅವರಿಗೆ ನೀಡಿರುವ ಅವಕಾಶವನ್ನು ಅವರು ಯಶಸ್ವಿಯಾಗಿ ನಿಭಾಯಿಸಲಿ ಎಂದು ಹಾರೈಸಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗದಿದ್ದಕ್ಕೆ ಬೇಸರವಿಲ್ಲ

ತಮಗೆ ಕೆಪಿಸಿಸಿ (KPCC) ಅಧ್ಯಕ್ಷ ಸ್ಥಾನ ಸಿಗದೇ ಇರುವುದಕ್ಕೆ ಯಾವುದೇ ಅಸಮಾಧಾನವಿಲ್ಲ ಎಂದ ಜಾರಕಿಹೊಳಿ, ಬಿ.ಕೆ. ಹರಿಪ್ರಸಾದ್ ಅವರಿಗೆ ಈಗಾಗಲೇ ಹೈಕಮಾಂಡ್ ಆ ಜವಾಬ್ದಾರಿ ನೀಡಿದೆ. ಅವರಿಗೆ ಸುದೀರ್ಘವಾಗಿ ಪಕ್ಷ ಸಂಘಟಿಸಿದ ದೊಡ್ಡ ಅನುಭವವಿದೆ ಎಂದು ಸಮರ್ಥಿಸಿಕೊಂಡರು. ಹೊಸದಾಗಿ ಸಚಿವರಾಗಿ ಬಂದವರು ಇಲಾಖೆಯನ್ನು ಅರ್ಥ ಮಾಡಿಕೊಂಡು ಟೇಕಾಫ್ ಆಗಲು ಕನಿಷ್ಠ 6 ತಿಂಗಳ ಸಮಯ ಬೇಕಾಗುತ್ತದೆ ಎಂದರು.

ವಿಮಾನದಲ್ಲಿ ಓಡಾಡುವವರಿಗೆ ಗೃಹಲಕ್ಷ್ಮಿ ಬೇಕಿಲ್ಲ

ಗೃಹಲಕ್ಷ್ಮಿ ಯೋಜನೆಗೆ ಷರತ್ತು ವಿಧಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಯೋಜನೆಯ ದುರುಪಯೋಗಕ್ಕೆ ಕಡಿವಾಣ ಹಾಕಲು ಸರ್ಕಾರ ಕ್ರಮ ಕೈಗೊಳ್ಳುತ್ತಿರುವುದು ನಿಜ. 3 ಲಕ್ಷ ಕೊಟ್ಟು ವಿಮಾನದಲ್ಲಿ ಪ್ರಯಾಣಿಸುವವರಿಗೆ ಹಾಗೂ ಜಿಎಸ್‌ಟಿ (GST) ಮತ್ತು ಆದಾಯ ತೆರಿಗೆ (Income Tax) ಪಾವತಿಸುವವರಿಗೂ ಗೃಹಲಕ್ಷ್ಮಿಯ ಸೌಲಭ್ಯ ಸಿಗುತ್ತಿದ್ದರೆ, ಅದನ್ನು ಪರಿಷ್ಕರಣೆ ಮಾಡುವುದು ಅನಿವಾರ್ಯವಾಗಿದೆ ಎಂದು ಸರ್ಕಾರದ ನಿಯಮಗಳನ್ನು ಬೆಂಬಲಿಸಿದರು.

ಕ್ರೀಡಾ ಇಲಾಖೆ ಮೇಲೆ ಸಾಹುಕಾರ್‌ ಒಲವು

ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಸಚಿವ ರಾಮಲಿಂಗಾರೆಡ್ಡಿ ಅವರಿಗಿದ್ದ ಅಸಮಾಧಾನವನ್ನು ಈಗಾಗಲೇ ಬಗೆಹರಿಸಲಾಗಿದೆ. ಸಚಿವ ಕೃಷ್ಣಭೈರೇಗೌಡ ಅವರಲ್ಲೂ ಏನಾದರೂ ಅಸಮಾಧಾನಗಳಿದ್ದರೆ ಅದನ್ನು ಪಕ್ಷ ಮತ್ತು ಸರ್ಕಾರದ ಮುಖಂಡರು ಬಗೆಹರಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ತಮಗೆ ಕ್ರೀಡಾ ಇಲಾಖೆಯ ಮೇಲಿದ್ದ ಆಸಕ್ತಿಯನ್ನು ಬಿಚ್ಚಿಟ್ಟ ಸಚಿವರು, ಹಿಂದೆ ಧರ್ಮಸಿಂಗ್ ಅವರ ಸಂಪುಟದಲ್ಲಿದ್ದಾಗಲೂ ಕ್ರೀಡಾ ಇಲಾಖೆಯನ್ನೇ ಕೇಳಿದ್ದೆ, ಈ ಬಾರಿಯೂ ಬೇಡಿಕೆ ಇಟ್ಟಿದ್ದೆ. ಆದರೆ, ಈಗ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರಿಗೆ ಕ್ರೀಡಾ ಇಲಾಖೆ ಖಾತೆ ಸಿಟ್ಟಿರುವುದರಿಂದ ಪದೇ ಪದೇ ಆ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ಚರ್ಚೆಗೆ ತೆರೆ ಎಳೆದರು.

WhatsApp Group Join Now

Spread the love

Leave a Reply