ಸಚಿವ ಸಂಪುಟದ ಖಾತೆ ಹಂಚಿಕೆ ಬೆನ್ನಲ್ಲೇ ಹಿರಿಯ ಕಾಂಗ್ರೆಸ್ (Congress) ನಾಯಕ ರಾಮಲಿಂಗಾ ರೆಡ್ಡಿ (Ramalinga Reddy) ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿರುವುದು ರಾಜ್ಯ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಈ ಹಠಾತ್ ಬೆಳವಣಿಗೆಯ ಕುರಿತು ಮಾತನಾಡಿದ ಕೆ.ಎಸ್ ಈಶ್ವರಪ್ಪ (Ks Eshwarappa) ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಲ್ಲದೆ, ಸರ್ಕಾರ ಪತನದ ಭವಿಷ್ಯ ನುಡಿದಿದ್ದಾರೆ.
ರಾಮಲಿಂಗಾ ರೆಡ್ಡಿ ಅವರ ರಾಜೀನಾಮೆ ಕೇವಲ ಆರಂಭವಷ್ಟೆ. ಇದು ಕಾಂಗ್ರೆಸ್ ಸರ್ಕಾರದ ಮೊದಲನೇ ವಿಕೆಟ್ ಪತನಕ್ಕೆ ಮಾತ್ರ ಸೀಮಿತವಲ್ಲ. ಇಡೀ ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಸಾಲು ಸಾಲು ಅತೃಪ್ತ ಆತ್ಮಗಳಿವೆ. ಆ ಅತೃಪ್ತ ಆತ್ಮಗಳನ್ನು ತೃಪ್ತಿಪಡಿಸಲು ಕಾಂಗ್ರೆಸ್ ಹೈಕಮಾಂಡ್ನಿಂದಾಗಲಿ, ಮುಖ್ಯಮಂತ್ರಿಗಳ ಕೈಯಿಂದಾಗಲಿ ಅಥವಾ ಕೆಪಿಸಿಸಿ ಅಧ್ಯಕ್ಷರ ಕೈಯಿಂದಾಗಲಿ ಖಂಡಿತಾ ಸಾಧ್ಯವಿಲ್ಲ” ಎಂದು ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ರಾಮಲಿಂಗಾ ರೆಡ್ಡಿ ಹಿಂದೆ ಯಾರಿದ್ದಾರೆ ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ
ರಾಮಲಿಂಗಾ ರೆಡ್ಡಿ ಅವರ ಈ ಕಠಿಣ ನಿರ್ಧಾರದ ಹಿಂದೆ ದೊಡ್ಡ ರಾಜಕೀಯ ಶಕ್ತಿ ಅಡಗಿದೆ ಎಂದು ಅನುಮಾನ ವ್ಯಕ್ತಪಡಿಸಿದ ಈಶ್ವರಪ್ಪ, “ಇದು ರಾಮಲಿಂಗ ರೆಡ್ಡಿ ಅವರು ಕೇವಲ ವೈಯಕ್ತಿಕವಾಗಿ ಯೋಚಿಸಿ ತಗೆದುಕೊಂಡಿರುವ ರಾಜೀನಾಮೆ ನಿರ್ಧಾರ ಖಂಡಿತಾ ಅಲ್ಲ. ಅವರ ಈ ನಿರ್ಧಾರದ ಹಿಂದೆ ಯಾರಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ರಾಜ್ಯದ ಜನತೆಗೆ ಕರಾರುವಾಕ್ಕಾಗಿ ಗೊತ್ತಾಗಲಿದೆ” ಎಂದಿದ್ದಾರೆ.
ಅಲ್ಲದೆ, “ಇದರ ಮೂಲಕವೇ ರಾಜ್ಯದ ಕಾಂಗ್ರೆಸ್ ಸರ್ಕಾರ ಶೀಘ್ರದಲ್ಲೇ ಪತನವಾಗುತ್ತದೆ. ಈ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಎರಡು ವರ್ಷಗಳ ಕಾಲ ಅಧಿಕಾರದಲ್ಲಿ ಇರುತ್ತದೆ ಎಂಬ ಯಾವುದೇ ನಂಬಿಕೆ ನನಗಂತೂ ಇಲ್ಲವೇ ಇಲ್ಲ” ಎಂದು ಭವಿಷ್ಯ ನುಡಿದಿದ್ದಾರೆ.
ಚುನಾವಣೆ ಯಾವಾಗ ಬೇಕಿದ್ದರೂ ಬರಬಹುದು: ಹಿಂದುತ್ವವಾದಿಗಳಿಗೆ ಕರೆ
ರಾಜ್ಯದಲ್ಲಿ ಮತ್ತೆ ರಾಜಕೀಯ ಬದಲಾವಣೆ ಗಾಳಿ ಬೀಸಲಿದೆ ಎಂದ ಮಾಜಿ ಡಿಸಿಎಂ, “ರಾಜ್ಯದಲ್ಲಿ ಈಗಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಯಾವಾಗ ಬೇಕಿದ್ದರೂ ಮತ್ತೊಮ್ಮೆ ವಿಧಾನಸಭೆ ಚುನಾವಣೆ ಎದುರಾಗಬಹುದು. ಹೀಗಾಗಿ ರಾಜ್ಯದಲ್ಲಿರುವ ಎಲ್ಲಾ ಹಿಂದುತ್ವವಾದಿಗಳು ಈಗಿನಿಂದಲೇ ಜಾಗೃತರಾಗಬೇಕು.
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮತ್ತೆ ಹಿಂದುತ್ವದ ಹಿನ್ನೆಲೆ ಇರುವಂತಹ ಗಟ್ಟಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದರು. ಸದ್ಯ ಸಚಿವ ಸಂಪುಟ ಕಸರತ್ತಿನ ಬೆನ್ನಲ್ಲೇ ಈಶ್ವರಪ್ಪ ನೀಡಿರುವ ಈ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ.
ಇದು ಕಾಂಗ್ರೆಸ್ ನ ಮೊದಲ ವಿಕೆಟ್ ಅಷ್ಟೇ ಅಲ್ಲ, ಸರ್ಕಾರವೇ ಪತನವಾಗುತ್ತೆ – ಕೆ.ಎಸ್. ಈಶ್ವರಪ್ಪ ಭವಿಷ್ಯ.!
WhatsApp Group
Join Now