ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶದ ಬೆನ್ನಲ್ಲೇ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಮತದಾರರ ಪಟ್ಟಿಯ ಎಸ್ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆ ಸ್ಥಗಿತಗೊಳಿಸುವ ಸಂಬಂಧ ವಿವಿಧ ಸಂಘಟನೆಗಳ ಮುಖಂಡರಿಂದ ಒಕ್ಕೊರಲ ಒತ್ತಾಯ ಕೇಳಿಬಂತು.
ಜಿಬಿಎ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಹೊಸ್ತಿಲಲ್ಲೇ ಎಸ್ಐಆರ್ ಬಗ್ಗೆ ಕೇಳಿಬರುತ್ತಿರುವ ಅಪಸ್ವರಗಳ ಕುರಿತು ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಅದರಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಡಾ. ಶರಣ್ ಪ್ರಕಾಶ್ ಪಾಟೀಲ್, ಸಂತೋಷ್ ಲಾಡ್, ಬೋಸರಾಜು, ಶಿವರಾಜ್ ತಂಗಡಗಿ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಈ ವೇಳೆ ಎಸ್ಐಆರ್ನಿಂದ ಎದುರಾಗಬಹುದಾದ ಸಮಸ್ಯೆಗಳು, ನೆರೆ ರಾಜ್ಯಗಳಲ್ಲಾದ ವಿವಾದಗಳು ಹಾಗೂ ಅದರ ಪರಿಣಾಮಗಳ ಕುರಿತು ಚರ್ಚೆ ನಡೆಯಿತು. ಈ ವೇಳೆ ಎಸ್ಐಆರ್ ನಿಲ್ಲಿಸುವ ಬಗ್ಗೆ ಸಂಪುಟದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸಲಾಯಿತು.
ಸಭೆಯಲ್ಲಿ ಎಸ್ಐಆರ್ನಿಂದ ಬೇರೆ ಬೇರೆ ರಾಜ್ಯಗಳಲ್ಲಾದ ಸಮಸ್ಯೆಗಳ ಗಂಭೀರತೆ ಕುರಿತು ಗಮನಸೆಳೆದ ಕೆಲ ಸಚಿವರು, ‘ಈ ಪ್ರಕ್ರಿಯೆಯಿಂದ ಪಶ್ಚಿಮ ಬಂಗಾಳದಲ್ಲೇ 120ಕ್ಕೂ ಹೆಚ್ಚು ಸೀಟುಗಳನ್ನು ಬಿಜೆಪಿ ಗೆದ್ದಿದೆ. ಜನ ತಮ್ಮ ಹಕ್ಕುಗಳನ್ನೇ ಕಳೆದುಕೊಂಡಿದ್ದಾರೆ. ರಾಜ್ಯದಲ್ಲೂ ಅಂತಹ ಅನಾಹುತಗಳು ಆಗುವ ಸಾಧ್ಯತೆ ಇದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಇನ್ನು ಕೆಲವು ಸಂಘಟನೆಗಳ ಮುಖಂಡರು, ‘ಎಸ್ಐಆರ್ ಅನ್ನು ದೇಶದ ಮಹಿಳೆಯರು, ದಲಿತರು, ಆದಿವಾಸಿಗಳು, ಮುಸ್ಲಿಮರು, ಕ್ರೈಸ್ತರು ಹಾಗೂ ದುಡಿಯುವ ವರ್ಗದ ಮತದಾನದ ಹಕ್ಕು ಕಸಿದುಕೊಳ್ಳುವ ಉದ್ದೇಶದಿಂದ ರೂಪಿಸಲಾಗಿದೆ. ಇದು ಮತದಾರರ ಪಟ್ಟಿಯ ಸಿದ್ಧತೆಯನ್ನು ನಿಯಂತ್ರಿಸುವ ಪ್ರಚಲಿತ ಕಾನೂನು ಮತ್ತು ಸಂವಿಧಾನಾತ್ಮಕ ವ್ಯವಸ್ಥೆಯಗಳನ್ನು ಉಲ್ಲಂಘಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಎಸ್ಐಆರ್ನಿಂದ ಅಳಿಸಲ್ಪಟ್ಟ ಮತದಾರರು ದೇಶದ ನಾಗರಿಕರಾಗಿ ಹೊಂದಿರುವ ಹಕ್ಕುಗಳನ್ನೇ ಕಳೆದುಕೊಳ್ಳುವ ಅಪಾಯ ಎದುರಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎಸ್ಐಆರ್ ವಿರುದ್ಧ ರಾಜ್ಯ ಸರ್ಕಾರ ಸಂಪುಟದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳುವುದರ ಜತೆಗೆ ಅದನ್ನು ವಿಧಾನಸಭೆಯಲ್ಲೂ ಮಂಡಿಸಿ ನಿರ್ಣಯ ಅಂಗೀಕರಿಸಬೇಕು. ಅಷ್ಟೇ ಅಲ್ಲ, ಪ್ರಸ್ತುತ ಚಾಲ್ತಿಯಲ್ಲಿರುವ ಮತದಾರರ ಪಟ್ಟಿ ತಯಾರಿಕೆ ಪ್ರಕ್ರಿಯೆಯು ಸಾಂವಿಧಾನಿಕ ಚೌಕಟ್ಟನ್ನು ಎಸ್ಐಆರ್ ಉಲ್ಲಂಘಿಸುತ್ತದೆ ಎಂದು ಚುನಾವಣಾ ಆಯೋಗಕ್ಕೆ ಸರ್ಕಾರ ಪತ್ರ ಬರೆದು ಮನವರಿಕೆ ಮಾಡಿಕೊಡಬೇಕು’ ಎಂದೂ ಒತ್ತಾಯಿಸಿದರು.
ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಮುಸ್ಲಿಂ ಮುತ್ತಹಿದ ಮಹಾಜ್ನ ಮೊಹಮ್ಮದ್ ಯೂಸುಫ್ ಕನ್ನಿ, ರಾಜಕೀಯ ವಿಶ್ಲೇಷಕರಾದ ಪರಕಾಲ ಪ್ರಭಾಕರ್, ಮತ್ತು ಖಿಲ್ ಡೆ, ಮತದಾನ ಹಕ್ಕು ಚಳವಳಿಯ ಥಾಮಸ್ ಫ್ರಾಂಕೋ, ಲೇಖಕಿ ಬಿ.ಟಿ. ಲಲಿತಾ ನಾಯಕ್, ನನ್ನ ಮತ ನನ್ನ ಹಕ್ಕು ಹೋರಾಟ ವೇದಿಕೆಯ ವಿನಯ್ ಶ್ರೀನಿವಾಸ್, ರಾಜ್ಯ ರೈತ ಸಂಘದ ಮುಖಂಡರಾದ ಬಡಗಲಪುರ ನಾಗೇಂದ್ರ ಮತ್ತು ವೀರಸಂಗಯ್ಯ, ಕರ್ನಾಟಕ ಕೋಮುಸೌಹಾರ್ದ ವೇದಿಕೆಯ ಕೆ.ಎಲ್.ಅಶೋಕ್ ಮತ್ತಿತರರು ಇದ್ದರು.
ಶಾಸಕರ ಜತೆಗೆ ಚರ್ಚಿಸುವೆ: ಸಿಎಂ
ಸಭೆಯಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಮ್ಮ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಪಕ್ಷದ ಎಲ್ಲ ಶಾಸಕರು ಮತ್ತು ಪರಾಭವ ಶಾಸಕರು ಹಾಗೂ ಪಕ್ಷದ ಅಧ್ಯಕ್ಷರೊಂದಿಗೆ ಎಸ್ಐಆರ್ ಕುರಿತು ಚರ್ಚಿಸುತ್ತೇನೆ. ಈ ವಿಚಾರದಲ್ಲಿ ನಿರಂತರ ಸಂಪರ್ಕದಲ್ಲಿರೋಣ ಎಂದು ಭರವಸೆ ನೀಡಿದರು ಎನ್ನಲಾಗಿದೆ. ಅಲ್ಲದೆ, ಎಸ್ಐಆರ್ನಲ್ಲಿ ಯಾವುದಾದರೂ ಹೆಸರು ಅಳಿಸಲಾಗಿದ್ದರೆ, ಅಂತಹ ವ್ಯಕ್ತಿಗೆ ತನ್ನ ಹಕ್ಕನ್ನು ಸಾಬೀತುಪಡಿಸಲು ಅಗತ್ಯ ದಾಖಲೆಗಳನ್ನು ಪಡೆಯಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ನೆರವಾಗಬೇಕು. ಈ ಸಂಬಂಧ ಸಚಿವರು ಮತ್ತು ಶಾಸಕರು ಸೂಚನೆ ನೀಡಬೇಕು. ಮತದಾರರ ಪಟ್ಟಿಗಳ ಬಗ್ಗೆ ವಿಶೇಷ ಗಮನಹರಿಸಬೇಕು ಎಂದು ಮುಖ್ಯಮಂತ್ರಿಳು ನಿರ್ದೇಶನ ನೀಡಿದರು ಎಂದು ಮೂಲಗಳು ತಿಳಿಸಿವೆ.
ಮುಖಂಡರ ಬೇಡಿಕೆಗಳು :-
• ಎಸ್ಐಆರ್ ಪ್ರಕ್ರಿಯೆಯನ್ನು ಈಗಿರುವ ಸ್ವರೂಪದಲ್ಲಿ ಮುಂದುವರಿಸಲು ಸಾಧ್ಯವಿಲ್ಲ ಮತ್ತು ಅದನ್ನು ಕೂಡಲೇ ನಿಲ್ಲಿಸಬೇಕು
• ಇದುವರೆಗೆ ಕೈಗೊಳ್ಳಲಾದ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು
• ಎಸ್ಐಆರ್ ಸಾಂವಿಧಾನಿಕ ಮಾನ್ಯತೆ ಕುರಿತು ಸುಪ್ರೀಂಕೋರ್ಟ್ನಲ್ಲಿ ನಡೆಯುತ್ತಿರುವ ವಿಚಾರಣೆ ಮೊದಲು ಪೂರ್ಣಗೊಳ್ಳಬೇಕು
•ಪ್ರತಿಯೊಬ್ಬ ನಾಗರಿಕರ ಮತದಾನದ ಹಕ್ಕನ್ನು ಗ್ಯಾರಂಟಿ ಮಾಡುವ ರೀತಿಯಲ್ಲಿ ನಿಯಮ ಮರುರೂಪಿಸಿಯೇ ಜಾರಿಗೆ ತರಬೇಕು
ರಾಜ್ಯದಲ್ಲಿ ಎಸ್ಐಆರ್ ತಕ್ಷಣ ಸ್ಥಗಿತಕ್ಕೆ ಸಿಎಂ ಸಿದ್ದರಾಮಯ್ಯ, ಡಿಕೆಶಿ ಸಭೆಯಲ್ಲಿ ಮುಖಂಡರ ಪಟ್ಟು
WhatsApp Group
Join Now