ರಾಮನಗರ ಜಿಲ್ಲೆಯ ಕನಕಪುರ ನಗರದ ಮಹದೇಶ್ವರ ಬಡಾವಣೆಯಲ್ಲಿ ಸರಣಿ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ವೈದ್ಯಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ನವೋದಯ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಸರಸ್ವತಿ (45) ಎಂಬುವವರು ಇಂದು ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಶೇಷವೆಂದರೆ, ಎರಡು ದಿನಗಳ ಹಿಂದೆಯಷ್ಟೇ ಇವರು ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ವೈದ್ಯ ಡಾ. ಚೇತನ್ ಟೆಂಕರ್ ಅವರು ಕೂಡ ಆತ್ಮಹತ್ಯೆಗೆ ಶರಣಾಗಿದ್ದರು.
ಒಂದೇ ಆಸ್ಪತ್ರೆಯ ಇಬ್ಬರು ಸಾವು
ನವೋದಯ ಆಸ್ಪತ್ರೆಯ ವೈದ್ಯ ಡಾ. ಚೇತನ್ ಅವರು ಎರಡು ದಿನಗಳ ಹಿಂದೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನನೊಂದು ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದರು. ಇವರ ಆಸ್ಪತ್ರೆಯಲ್ಲಿ ಸರಸ್ವತಿ ಅವರು ಕಳೆದ ಅನೇಕ ವರ್ಷಗಳಿಂದ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಡಾಕ್ಟರ್ ಸಾವನ್ನಪ್ಪಿದ ಎರಡೇ ದಿನಕ್ಕೆ ಸರಸ್ವತಿ ಅವರೂ ಅದೇ ಹಾದಿ ಹಿಡಿದಿರುವುದು ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಅಕ್ರಮ ಸಂಬಂಧದ ಶಂಕೆ
ವೈದ್ಯರ ಸಾವಿನ ಬೆನ್ನಲ್ಲೇ ನರ್ಸ್ ಕೂಡ ಪ್ರಾಣ ತ್ಯಜಿಸಿರುವುದು ಸಾರ್ವಜನಿಕರಲ್ಲಿ ಮತ್ತು ಪೊಲೀಸ್ ವಲಯದಲ್ಲಿ ಸಾಕಷ್ಟು ಅನುಮಾನಗಳನ್ನು ಮೂಡಿಸಿದೆ. ಮೃತ ವೈದ್ಯರು ಮತ್ತು ನರ್ಸ್ ನಡುವೆ ಅಕ್ರಮ ಸಂಬಂಧವಿತ್ತು ಎಂಬ ಮಾತುಗಳು ಬಡಾವಣೆಯಲ್ಲಿ ಕೇಳಿಬರುತ್ತಿದ್ದು, ವೈದ್ಯರ ಸಾವಿನ ದುಃಖ ತಡೆಯಲಾಗದೆ ಅಥವಾ ಅದಕ್ಕೆ ಸಂಬಂಧಿಸಿದ ಒತ್ತಡದಿಂದ ಸರಸ್ವತಿ ಈ ನಿರ್ಧಾರ ಕೈಗೊಂಡಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.
ಸದ್ಯ ಘಟನಾ ಸ್ಥಳಕ್ಕೆ ಕನಕಪುರ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನರ್ಸ್ ಸರಸ್ವತಿ ಅವರ ಸಾವಿಗೆ ಸಂಬಂಧಿಸಿದಂತೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವೈದ್ಯರ ಆತ್ಮಹತ್ಯೆಗೂ ಈ ಸಾವಿಗೂ ಇರುವ ನೇರ ಸಂಬಂಧವೇನು ಎಂಬ ನಿಟ್ಟಿನಲ್ಲಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಕೇವಲ 48 ಗಂಟೆಗಳ ಅಂತರದಲ್ಲಿ ಆಸ್ಪತ್ರೆಯ ಪ್ರಮುಖ ವೈದ್ಯ ಮತ್ತು ಹಿರಿಯ ನರ್ಸ್ ಇಬ್ಬರೂ ಇಲ್ಲವಾಗಿರುವುದು ಅವರ ಕುಟುಂಬಸ್ಥರಲ್ಲಿ ಹಾಗೂ ಸಹೋದ್ಯೋಗಿಗಳಲ್ಲಿ ಮೌನ ಆವರಿಸುವಂತೆ ಮಾಡಿದೆ.
ವೈದ್ಯನ ಸಾವಿನ ಬೆನ್ನಲ್ಲೇ ನರ್ಸ್ ಕೂಡ ಆತ್ಮಹತ್ಯೆ – ಇಬ್ಬರ ಸಾವಿನ ಹಿಂದೆ ಅಕ್ರಮ ಸಂಬಂಧ ಶಂಕೆ!
WhatsApp Group
Join Now