ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಹೀನಾಯ ಸೋಲನುಭವಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ, ನನ್ನನ್ನು ಯಾರೂ ಪದಚ್ಯುತಗೊಳಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
‘ವ್ಯವಸ್ಥಿತಿ ಸಂಚು’
ಚುನಾವಣಾ ಫಲಿತಾಂಶದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಭವನಕ್ಕೆ ಹೋಗಿ ರಾಜೀನಾಮೆ ಸಲ್ಲಿಸಲು ನಿರಾಕರಿಸಿದ್ದಾರೆ. ನಾವು ಜನರ ತೀರ್ಪಿನಿಂದ ಸೋತಿಲ್ಲ, ಬದಲಿಗೆ ವ್ಯವಸ್ಥಿತ ಸಂಚಿನಿಂದ ಸೋತಿದ್ದೇವೆ. ಈ ಚುನಾವಣೆಯ ಅತಿದೊಡ್ಡ ವಿಲನ್ ಅಂದರೆ ಅದು ಕೇಂದ್ರ ಚುನಾವಣಾ ಆಯುಕ್ತರು (CEC). ಅವರು ಪ್ರಜಾಪ್ರಭುತ್ವದ ಹಕ್ಕುಗಳನ್ನು ಮತ್ತು ಇವಿಎಂ (EVM) ನಂಬಿಕೆಯನ್ನು ಗಾಳಿಗೆ ತೂರಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮತದಾನದ ನಂತರವೂ ಇವಿಎಂ ಯಂತ್ರಗಳಲ್ಲಿ ಶೇ. 80-95 ರಷ್ಟು ಚಾರ್ಜ್ ಹೇಗೆ ತೋರಿಸಲು ಸಾಧ್ಯ? ಎಂದು ಅವರು ಪ್ರಶ್ನಿಸಿದ್ದಾರೆ.
‘ಚುನಾವಣಾ ಆಯೋಗದೊಂದಿಗೆ ಬಿಜೆಪಿ ಮೈತ್ರಿ’
ನಾವು ಬಿಜೆಪಿಯ ವಿರುದ್ಧ ಹೋರಾಡಲಿಲ್ಲ, ಬದಲಿಗೆ ಬಿಜೆಪಿಯ ಪರವಾಗಿ ಕೆಲಸ ಮಾಡಿದ ಚುನಾವಣಾ ಆಯೋಗದ ವಿರುದ್ಧ ಹೋರಾಡಿದೆವು. ಇದು ಬಿಜೆಪಿ ಮತ್ತು ಆಯೋಗದ ನಡುವಿನ ಸೆಟ್ಟಿಂಗ್ ಆಗಿತ್ತು ಎಂದು ಮಮತಾ ದೂರಿದ್ದಾರೆ. ಮತದಾರರ ಪಟ್ಟಿಯಿಂದ ಸುಮಾರು 90 ಲಕ್ಷ ಹೆಸರುಗಳನ್ನು ಕೈಬಿಡಲಾಗಿತ್ತು. ಕೋರ್ಟ್ ಮೊರೆ ಹೋದ ನಂತರ 32 ಲಕ್ಷ ಹೆಸರುಗಳನ್ನು ಸೇರಿಸಲಾಯಿತು. ಆದರೆ ನಂತರ ಯಾರಿಗೂ ತಿಳಿಯದಂತೆ ಮತ್ತೆ 7 ಲಕ್ಷ ಹೆಸರುಗಳನ್ನು ಸೇರಿಸಲಾಗಿದೆ ಎಂದು ಅವರು ಆರೋಪಿಸಿದರು. ಚುನಾವಣೆಗೆ ಎರಡು ದಿನ ಮೊದಲು ಬೇಕಾಬಿಟ್ಟಿ ಬಂಧನಗಳನ್ನು ಮಾಡಲಾಯಿತು. ತಮಗೆ ಬೇಕಾದ ಅಧಿಕಾರಿಗಳನ್ನು ಡಿಎಂ ಮತ್ತು ಐಪಿಎಸ್ ಹುದ್ದೆಗಳಿಗೆ ನೇಮಿಸಿಕೊಳ್ಳುವ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ಹಳಿ ತಪ್ಪಿಸಲಾಗಿದೆ ಎಂದು ಕಿಡಿಕಾರಿದರು.
ಆಡಳಿತ ವಿರೋಧಿ ಅಲೆಗೆ ಕೊಚ್ಚಿಹೋದ ಟಿಎಂಸಿ ದಿಗ್ಗಜರು
ಆಡಳಿತ ವಿರೋಧಿ ಅಲೆಯಲ್ಲಿ ಟಿಎಂಸಿ ಕೊಚ್ಚಿ ಹೋಗಿದೆ. ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ಸೇರಿದಂತೆ ಸಂಪುಟದ 35 ಸಚಿವರ ಪೈಕಿ 22 ಮಂದಿ ಮತದಾರರಿಂದ ತಿರಸ್ಕರಿಸಲ್ಪಟ್ಟಿದ್ದಾರೆ. ಇದು ಟಿಎಂಸಿಯ ಆಡಳಿತ ವೈಖರಿಯನ್ನು ಜನತೆ ಸಂಪೂರ್ಣವಾಗಿ ನಿರಾಕರಿಸಿದ್ದಾರೆ ಎಂಬುದಕ್ಕೆ ಸ್ಪಷ್ಟ ಪುರಾವೆಯಾಗಿದೆ.
ಸೋತ ಪ್ರಮುಖ ಸಚಿವರ ಪಟ್ಟಿ
ಕೇವಲ ಅಭ್ಯರ್ಥಿಗಳಷ್ಟೇ ಅಲ್ಲದೆ, ಸರ್ಕಾರದ ಅತ್ಯಂತ ಪ್ರಭಾವಿ ಖಾತೆಗಳನ್ನು ನಿಭಾಯಿಸುತ್ತಿದ್ದ ಸಚಿವರೇ ಈ ಬಾರಿ ಮಕಾಡೆ ಮಲಗಿದ್ದಾರೆ.
ಮಮತಾ ಬ್ಯಾನರ್ಜಿ (ಮುಖ್ಯಮಂತ್ರಿ) ಭವಾನಿಪುರ ಕ್ಷೇತ್ರದಲ್ಲಿ ಸೋಲು.
ಅರೂಪ್ ಬಿಸ್ವಾಸ್ (ವಸತಿ ಮತ್ತು ಇಂಧನ) ಟಾಲಿಗಂಜ್ ಕ್ಷೇತ್ರದಲ್ಲಿ ಪರಾಜಯ.
ಬ್ರಾತ್ಯ ಬಸು (ಶಿಕ್ಷಣ) ದಮ್ ದಮ್ ಕ್ಷೇತ್ರದಲ್ಲಿ ಸೋಲು.
ಚಂದ್ರಿಮಾ ಭಟ್ಟಾಚಾರ್ಯ (ಹಣಕಾಸು) ದಮ್ ದಮ್ ಉತ್ತರದ ಕ್ಷೇತ್ರದಲ್ಲಿ ಬಿಜೆಪಿಯ ಸೌರವ್ ಸಿಕ್ದರ್ ವಿರುದ್ಧ 26,400ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲು.
ಶಶಿ ಪಾಂಜಾ (ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೈಗಾರಿಕೆ) ಶ್ಯಾಮ್ಪುಕುರ್ ಕ್ಷೇತ್ರದಲ್ಲಿ ಬಿಜೆಪಿಯ ಪೂರ್ಣಿಮಾ ಚಕ್ರವರ್ತಿ ವಿರುದ್ಧ ಪರಾಜಯ.
ಸ್ನೇಹಾಶಿಸ್ ಚಕ್ರವರ್ತಿ (ಸಾರಿಗೆ) ಜಂಗೀಪಾರಾ ಕ್ಷೇತ್ರದಲ್ಲಿ ಸೋಲು.
ಉದಯನ್ ಗುಹಾ (ಉತ್ತರ ಬಂಗಾಳ ಅಭಿವೃದ್ಧಿ) ದಿನ್ಹಾಹಟಾ ಕ್ಷೇತ್ರದಲ್ಲಿ ಬಿಜೆಪಿಯ ಅಜಯ್ ರೇ ವಿರುದ್ಧ ಸೋಲು.
ನಿರ್ಣಾಯಕ ಖಾತೆಗಳ ವೈಫಲ್ಯ
ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ, ಸಾರಿಗೆ, ಕೈಗಾರಿಕೆ ಮತ್ತು ಹಣಕಾಸಿನಂತಹ ಪ್ರಮುಖ ಖಾತೆಗಳನ್ನು ಹೊಂದಿದ್ದ ಸಚಿವರನ್ನು ಮತದಾರರು ಮನೆಗೆ ಕಳುಹಿಸಿದ್ದಾರೆ. ಅದರಲ್ಲೂ ಹಿರಿಯ ನಾಯಕ ಮತ್ತು ಅಲ್ಪಸಂಖ್ಯಾತ ಮುಖ ಎನಿಸಿಕೊಂಡಿದ್ದ ಸಿದ್ದಿಕುಲ್ಲಾ ಚೌಧರಿ ಅವರು ಮೊಂತೇಶ್ವರ ಕ್ಷೇತ್ರದಲ್ಲಿ ಬಿಜೆಪಿಯ ಸೈಕತ್ ಪಾಂಜಾ ವಿರುದ್ಧ 14,700ಕ್ಕೂ ಹೆಚ್ಚು ಮತಗಳ ಬೃಹತ್ ಅಂತರದಿಂದ ಸೋತಿರುವುದು ಪಕ್ಷಕ್ಕೆ ದೊಡ್ಡ ಹೊಡೆತ ನೀಡಿದೆ.
ದುರ್ಗಾಪುರ ಪೂರ್ವದಲ್ಲಿ ಪ್ರದೀಪ್ ಮಜುಂದಾರ್ ಅವರು ಬಿಜೆಪಿಯ ಚಂದ್ರ ಶೇಖರ್ ಬ್ಯಾನರ್ಜಿ ವಿರುದ್ಧ 30,900ಕ್ಕೂ ಅಧಿಕ ಮತಗಳ ಅಂತರದಿಂದ ಸೋತಿದ್ದರೆ, ಗೋಘಾಟ್ನಲ್ಲಿ ನಿರ್ಮಲ್ ಮಾಝಿ ಅವರು ಸುಮಾರು 49,500 ಮತಗಳ ಬೃಹತ್ ಅಂತರದಿಂದ ಪರಾಜಯಗೊಂಡಿದ್ದಾರೆ.
ಸಚಿವ ಸಂಪುಟದ ಶೇ. 63ರಷ್ಟು ಸದಸ್ಯರು ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲು ವಿಫಲವಾಗಿರುವುದು ಬಂಗಾಳದಲ್ಲಿ ಟಿಎಂಸಿಯ ಆಡಳಿತದ ಮಾದರಿಯನ್ನು ಜನರು ಕಿತ್ತೆಸೆದಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಈ ಅಭೂತಪೂರ್ವ ಆಡಳಿತ ವಿರೋಧಿ ಅಲೆಯು ಬಿಜೆಪಿಗೆ ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಅಧಿಕಾರದ ಹಾದಿಯನ್ನು ಸುಗಮಗೊಳಿಸಿದೆ.