ಗಂಡ ಮಾಡಿದ ಸಾಲಕ್ಕೆ ಪತ್ನಿಯ ‘ಗೃಹಲಕ್ಷ್ಮಿ’ ಹಣ ಕಟ್! : ಬ್ಯಾಂಕ್ ವಿರುದ್ಧ ದಂಪತಿ ಆಕ್ರೋಶ

Spread the love

ಪತಿ ಮಾಡಿದ ಸಾಲದ ಕಂತು ಪಾವತಿಯಾಗಿಲ್ಲ ಎಂಬ ಕಾರಣಕ್ಕೆ ಬ್ಯಾಂಕ್ ಅಧಿಕಾರಿಗಳು ಪತ್ನಿಯ ಖಾತೆಯಲ್ಲಿದ್ದ ‘ಗೃಹಲಕ್ಷ್ಮಿ’ ಯೋಜನೆಯ ಹಣವನ್ನು ಕಡಿತಗೊಳಿಸಿರುವ ವಿಚಿತ್ರ ಘಟನೆಯೊಂದು ಹಾವೇರಿ ಜಿಲ್ಲೆಯ ನಾಗೇಂದ್ರನಮಟ್ಟಿಯಲ್ಲಿ ನಡೆದಿದೆ.

ಬ್ಯಾಂಕ್‌ನ ಈ ಕ್ರಮದಿಂದ ಕಂಗಾಲಾಗಿರುವ ದಂಪತಿ ಈಗ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಾಗೇಂದ್ರನಮಟ್ಟಿ ನಿವಾಸಿ ಹುಸೇನ್‌ಖಾನ್ ಪಠಾಣ ಎಂಬುವವರು ಸ್ಥಳೀಯ ಬ್ಯಾಂಕ್ ಒಂದರಲ್ಲಿ ಎರಡು ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಅವರು ಸಾಲದ ಕಂತನ್ನು ಸರಿಯಾದ ಸಮಯಕ್ಕೆ ಕಟ್ಟಲು ಸಾಧ್ಯವಾಗಿರಲಿಲ್ಲ. ಇದೇ ಬ್ಯಾಂಕ್‌ನಲ್ಲಿ ಅವರ ಪತ್ನಿ ಶಬಾನಬಾನು ಕೂಡ ಉಳಿತಾಯ ಖಾತೆಯನ್ನು ಹೊಂದಿದ್ದು, ಅವರಿಗೆ ಸರ್ಕಾರದಿಂದ ಪ್ರತಿ ತಿಂಗಳು ಬರುವ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗುತ್ತಿತ್ತು.

ಇತ್ತೀಚೆಗೆ ಶಬಾನಬಾನು ಅವರ ಖಾತೆಯಲ್ಲಿದ್ದ ಒಟ್ಟು 15,000 ರೂಪಾಯಿ ಹಣವನ್ನು ಬ್ಯಾಂಕ್ ಅಧಿಕಾರಿಗಳು ಎರಡು ಹಂತಗಳಲ್ಲಿ (11,000 ರೂ. ಮತ್ತು 4,000 ರೂ.) ಕಡಿತಗೊಳಿಸಿದ್ದಾರೆ. ಗಂಡ ಸಾಲ ತೀರಿಸಿಲ್ಲ ಎಂಬ ಕಾರಣಕ್ಕೆ ಪತ್ನಿಯ ವೈಯಕ್ತಿಕ ಖಾತೆಯಲ್ಲಿದ್ದ ಹಣವನ್ನು ಸಾಲದ ಖಾತೆಗೆ ಜಮೆ ಮಾಡಿಕೊಳ್ಳಲಾಗಿದೆ.

ಯಾವುದೇ ಮುನ್ಸೂಚನೆ ಅಥವಾ ಅನುಮತಿ ಇಲ್ಲದೆ ಈ ರೀತಿ ಹಣ ಕಡಿತಗೊಳಿಸಿರುವುದು ದಂಪತಿಯನ್ನು ಕೆರಳಿಸಿದೆ. ಬಡ ಮಹಿಳೆಯರ ಆರ್ಥಿಕ ನೆರವಿಗಾಗಿ ಸರ್ಕಾರ ನೀಡುವ ಹಣಕ್ಕೂ ಈಗ ಭದ್ರತೆ ಇಲ್ಲದಂತಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಈ ಸಂಬಂಧ ಬ್ಯಾಂಕ್ ಮ್ಯಾನೇಜರ್‌ಗೆ ಲಿಖಿತ ದೂರು ನೀಡಿರುವ ದಂಪತಿ, ತಕ್ಷಣವೇ ಕಡಿತಗೊಳಿಸಿರುವ ಹಣವನ್ನು ವಾಪಸ್ ನೀಡಬೇಕು ಎಂದು ಆಗ್ರಹಿಸಿದ್ದಾರೆ.

WhatsApp Group Join Now

Spread the love

Leave a Reply