ಭೂ ಪರಿವರ್ತನೆಗಾಗಿ ಅಲೆದು ಸುಸ್ತಾದ ರೈತ: ಆಯುಕ್ತರ ಕಚೇರಿಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ!

Spread the love

ಜಮೀನು ಭೂ ಪರಿವರ್ತನೆ  ಮಾಡಿಸಿಕೊಳ್ಳಲು ಅಧಿಕಾರಿಗಳ ಸುತ್ತ ಅಲೆದು ಬೇಸತ್ತ ರೈತಯೊಬ್ಬರು, ಬೆಳಗಾವಿಯ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆ ನಡೆದಿದೆ.

ಕಚೇರಿಗಳ ಅಲೆದಾಟಕ್ಕೆ ಬೇಸತ್ತ ರುದ್ರಯ್ಯ

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮೂಲದ ರುದ್ರಯ್ಯ ಅಮ್ಮಿನಬಾವಿಮಠ (50) ಎಂಬವರೇ ಆತ್ಮಹತ್ಯೆಗೆ ಯತ್ನಿಸಿದ ದುರ್ದೈವಿ. ಇವರು ತಮ್ಮ ಎರಡು ಎಕರೆ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ (ಎನ್‌ಎ) ಭೂ ಪರಿವರ್ತನೆ ಮಾಡಲು ಅರ್ಜಿ ಸಲ್ಲಿಸಿ ಹಲವು ದಿನಗಳಿಂದ ಕಚೇರಿಗಳಿಗೆ ಅಲೆದಾಡುತ್ತಿದ್ದರು. ಮೊದಲು ಹಾವೇರಿ ಡಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾಗ, ‘ಲ್ಯಾಂಡ್ ವಿದ್ತ್ ಚೇಂಜ್ ಆಗುವವರೆಗೂ ಎನ್‌ಎ ಮಾಡಲು ಸಾಧ್ಯವಿಲ್ಲ’ ಎಂದು ಅಧಿಕಾರಿಗಳು ಸಬೂಬು ಹೇಳಿದ್ದರು ಎನ್ನಲಾಗಿದೆ.

ಆಯುಕ್ತರ ಭೇಟಿ ಸಾಧ್ಯವಾಗದಿದ್ದಾಗ ಮನನೊಂದು ನಿರ್ಧಾರ

ಹಾವೇರಿಯಲ್ಲಿ ಕೆಲಸವಾಗದ ಕಾರಣ ಹಲವು ಬಾರಿ ಬೆಳಗಾವಿಯ ಪ್ರಾದೇಶಿಕ ಆಯುಕ್ತರ ಕಚೇರಿಗೆ ಅಲೆದಿದ್ದ ರುದ್ರಯ್ಯ, ಇಂದು ಪ್ರಾದೇಶಿಕ ಆಯುಕ್ತೆ ಜಾನಕಿ ಅವರನ್ನು ಭೇಟಿ ಮಾಡಿ ಅಳಲು ತೋಡಿಕೊಳ್ಳಲು ಆಗಮಿಸಿದ್ದರು. ಆದರೆ ಆಯುಕ್ತರು ಕಚೇರಿಯಲ್ಲಿ ಲಭ್ಯವಿಲ್ಲ ಎಂಬ ಮಾಹಿತಿ ಸಿಗುತ್ತಿದ್ದಂತೆಯೇ ಮನನೊಂದು, ತಾವು ತಂದಿದ್ದ ವಿಷವನ್ನು ಕಚೇರಿಯಲ್ಲೇ ಸೇವಿಸಿದ್ದಾರೆ.

ಬಿಮ್ಸ್ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ

ವಿಷ ಸೇವಿಸಿ ಕುಸಿದು ಬಿದ್ದ ರುದ್ರಯ್ಯ ಅವರನ್ನು ಕೂಡಲೇ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸದ್ಯ ಅವರು ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಸಣ್ಣ ಕೆಲಸಕ್ಕಾಗಿ ಸಾಮಾನ್ಯ ಜನರನ್ನು ಅಧಿಕಾರಿಗಳು ಹೇಗೆ ಅಲೆದಾಡಿಸುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

WhatsApp Group Join Now

Spread the love

Leave a Reply