ನನ್ನ ನಾಯಕತ್ವದಲ್ಲೇ ಜನರು 136 ಕ್ಷೇತ್ರ ಗೆಲ್ಲಿಸಿದ್ದಾರೆ.! ಕಾಂಗ್ರೆಸ್ ಪಾಳಯದಲ್ಲಿ ಕಿಚ್ಚು ಹಚ್ಚಿಸಿದ ಡಿಸಿಎಂ ಡಿಕೆಶಿ ಮಾತು

Spread the love

ನನ್ನ ನಾಯಕತ್ವದಲ್ಲೇ ರಾಜ್ಯದ ಜನರು ಕಾಂಗ್ರೆಸ್‌ ಪಕ್ಷದ 136 ಶಾಸಕರನ್ನು ಗೆಲ್ಲಿಸಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ್ದ ಡಿಕೆ ಶಿವಕುಮಾರ್ ನೀಡಿರುವ ಈ ಹೇಳಿಕೆ ಕೈ ಪಾಳಯದಲ್ಲಿ ಕಿಚ್ಚು ಹಚ್ಚಿಸಿದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆಯ ನಡುವೆಯೇ ಡಿಕೆ ಶಿವಕುಮಾರ್ ಈ ಮಾತನ್ನು ಆಡಿದ್ದಾರೆ. ಇದಕ್ಕೆ ಕೆಲವು ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಸಂಘಟನೆ ಚತುರತೆ ಹಾಗೂ ಸಿದ್ದರಾಮಯ್ಯ ವರ್ಚಸ್ಸು ಇದಕ್ಕೆ ಕಾರಣ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ವೇಗ ಪಡೆದುಕೊಳ್ಳುತ್ತಿದೆ. ಸಿಎಂ ಸ್ಥಾನ ಬದಲಾವಣೆ ಆಗುತ್ತಾ? ಇಲ್ಲವೇ? ಎಂಬ ಚರ್ಚೆಗಳ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಅವರು ನೀಡಿರುವ ಹೇಳಿಕೆ ಹೊಸ ಚರ್ಚೆಗೆ ನಾಂದಿ ಹಾಡಿದೆ. ಈ ನಡುವೆ ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಅವರು ‘ನನ್ನ ನಾಯಕತ್ವದಲ್ಲೇ ಜನತೆ 136 ಶಾಸಕರನ್ನು ಗೆಲ್ಲಿಸಿರುವುದು’ ಎಂದು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಹಾಗೂ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿ ಪಕ್ಷ ಸಂಘಟನೆ ಮಾಡಿದ್ದರು. ರಾಜ್ಯದಲ್ಲಿ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಗಮನ ಸೆಳೆಯುವ ಹೋರಾಟಗಳನ್ನು ನಡೆಸಿದ್ದರು. ಇಬ್ಬರೂ ರಾಜ್ಯಾದ್ಯಂತ ಪ್ರವಾಸ ಮಾಡಿ ಚುನಾವಣಾ ಪ್ರಚಾರ ಕಾರ್ಯವನ್ನು ನಡೆಸಿದ್ದರು. ಇಬ್ಬರು ನಾಯಕರ ನೇತೃತ್ವದಲ್ಲೇ ಕಾಂಗ್ರೆಸ್ ಪಕ್ಷ ಚುನಾವಣೆಯನ್ನು ಎದುರಿಸಿತ್ತು.

ಅನೇಕ ಸಂದರ್ಭದಲ್ಲಿ ನಾಯಕತ್ವ ಚರ್ಚೆ ಬಂದಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ರಾಜ್ಯದಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವಿಗೆ ನಮ್ಮಿಬ್ಬರ ನಾಯಕತ್ವ ಕಾರಣ ಎಂದು ಹೇಳಿಕೊಂಡಿದ್ದರು. ಅಲ್ಲದೆ, ಕಾಂಗ್ರೆಸ್ ಪಕ್ಷದ ಹಲವು ನಾಯಕರು ಇದೇ ಅಭಿಪ್ರಾಯವನ್ನು ಹೊಂದಿದ್ದರು. ಆದರೆ ಇದೀಗ ಈ ಅಭಿಪ್ರಾಯಕ್ಕೆ ಭಿನ್ನವಾದ ಮಾತನ್ನು ಡಿಕೆ ಶಿವಕುಮಾರ್ ಆಡಿದ್ದಾರೆ.

ಏನು ಹೇಳಿದ್ದಾರೆ ಡಿಕೆಶಿ?

ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಡಿಕೆ ಶಿವಕುಮಾರ್ ಅವರು, “ಕರ್ನಾಟಕದ ಜನತೆ 136 ಶಾಸಕರನ್ನು ನನ್ನ ನಾಯಕತ್ವದಲ್ಲಿ ಗೆಲ್ಲಿಸಿದ್ದಾರೆ. ನಾಯಕತ್ವ ಬದಲಾವಣೆಗೆ ಕಾಲವೇ ಉತ್ತರ ನೀಡಲಿದೆ. ನಾವು ಭರವಸೆ ಮತ್ತು ಆಕಾಂಕ್ಷೆಗಳೊಂದಿಗೆ ಬದುಕುತ್ತಿದ್ದೇವೆ. ನಾಯಕತ್ವ ವಿಚಾರವಾಗಿ ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳಲಿದೆ” ಎಂದಿದ್ದರು.

ಈ ಬಗ್ಗೆ ಪ್ರತಕ್ರಿಯೆ ನೀಡಿದ ಸಚಿವ ಎಂಬಿ ಪಾಟೀಲ್, “ಡಿಕೆ ಶಿವಕುಮಾರ್ ಪಕ್ಷದ ಸಂಘಟನೆ ಮಾಡಿದ್ದಾರೆ. ಸಿದ್ದರಾಮಯ್ಯ ನಾಯಕತ್ವ, ಡಿಕೆಶಿ ಸಂಘಟನೆ ಇದೆ. ನಾಯಕರು ಕಾರ್ಯಕರ್ತರು ಶ್ರಮಪಟ್ಟಿದ್ದಾರೆ. ಬೂತ್ ಏಜೆಂಟ್ ಕೂಡ ಶ್ರಮಪಟ್ಟಿದ್ದಾರೆ. ಸಿದ್ದರಾಮಯ್ಯನವ್ರ ವರ್ಚಸ್ಸು, ಡಿಕೆಶಿಯವರ ಸಂಘಟನಾ ಚತುರತೆ, ಸತೀಶ್ ಜಾರಕಿಹೊಳಿ, ಮುನಿಯಪ್ಪ ಎಲ್ಲರ ಶ್ರಮದಿಂದ ಪಕ್ಷ ಅಧಿಕಾರಕ್ಕೆ ಬಂದಿದೆ” ಎಂದರು.

ದಲಿತ ಸಿಎಂ ಕೂಗಿಗೆ ಹೈಕಮಾಂಡ್ ಉತ್ತರ ನೀಡುತ್ತದೆ. ಲಿಂಗಾಯತ ಸಮುದಾಯ ಬೇಡಿಕೆ ಇಡಬಹುದು. ಆದ್ರೆ ಹೈಕಮಾಂಡ್ ಎಲ್ಲ ತೀರ್ಮಾನ ಮಾಡುತ್ತೆ. ಲಿಂಗಾಯತ ಸಮುದಾಯ ಈ ಬಾರಿ ಕಾಂಗ್ರೆಸ್ ಪರವಾಗಿ ನಿಂತಿದೆ. ವೀರೇಂದ್ರ ಪಾಟೀಲ್ ಬಳಿಕ ಈ ಬಾರಿ ನಿಂತಿದೆ. ಲಿಂಗಾಯತ ಸಮುದಾಯದಿಂದ 35 ಶಾಸಕರು ಗೆದ್ದಿದ್ದೇವೆ. ಹೈಕಮಾಂಡ್ ನಾಯಕರು ಎಲ್ಲ ವಿಚಾರ ಮಾಡುತ್ತೆ. ನಾನು ಹೇಳುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದರು.

WhatsApp Group Join Now

Spread the love

Leave a Reply