ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಕನ್ನಮಂಗಲ ಬಳಿ ಟೀ ಅಂಗಡಿ ತೆರೆದಿದ್ದ ಯುವಕನ ಮೇಲೆ ದೇವನಹಳ್ಳಿ ಪೊಲೀಸ್ ಅಧಿಕಾರಿಯಿಂದ ಲಾಠಿ ಪ್ರಹಾರದ ಘಟನೆಯು ಈಗ ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಖ್ಯಾತ ಉದ್ಯಮಿ ಟಿ.ವಿ. ಮೋಹನ್ದಾಸ್ ಪೈ, ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಅಲ್ಲದೆ ದೇವನಹಳ್ಳಿ ಪೊಲೀಸ್ ಅಧಿಕಾರಿ ರಾಕ್ಷಸನಂತೆ ವರ್ತಿಸಿರುವ ವಿಡಿಯೋ ಕೂಡ ಪೈ ಹಂಚಿಕೊಂಡಿದ್ದಾರೆ.
ನಾವು ಗುಲಾಮರಲ್ಲ, ಸ್ವತಂತ್ರರು
ಯುವಕನನ್ನು ಪೊಲೀಸ್ ಅಧಿಕಾರಿ ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೋ ಹಂಚಿಕೊಂಡಿರುವ ಮೋಹನ್ದಾಸ್ ಪೈ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ನೇರವಾಗಿ ಪ್ರಶ್ನೆ ಮಾಡಿದ್ದಾರೆ. “ಪೊಲೀಸರು ಈ ರೀತಿ ಜನರ ಮೇಲೆ ಹಲ್ಲೆ ಮಾಡುವುದು ನಿಲ್ಲಬೇಕು. ನಾಗರಿಕರನ್ನು ಇಷ್ಟ ಬಂದಂತೆ ಥಳಿಸಲು ಹೇಗೆ ಸಾಧ್ಯ? ನಾವು ಯಾರ ಅಧೀನದಲ್ಲಿರುವ ಗುಲಾಮರಲ್ಲ, ಬದಲಿಗೆ ಸ್ವತಂತ್ರ ದೇಶದ ಸ್ವತಂತ್ರ ನಾಗರಿಕರು” ಎಂದು ಅವರು ಕಿಡಿಕಾರಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಜಿ ಹಾಗೂ ಐಜಿಪಿ ಸಲೀಂ ಅವರನ್ನು ಟ್ಯಾಗ್ ಮಾಡಿರುವ ಪೈ, ದಯವಿಟ್ಟು ನಾಗರಿಕರನ್ನು ಇಂತಹ ಪೊಲೀಸರ ಮೃಗೀಯ ವರ್ತನೆಯಿಂದ ರಕ್ಷಿಸಿ. ಪೊಲೀಸರ ವರ್ತನೆಯನ್ನು ತೀವ್ರವಾಗಿ ಖಂಡಿಸಿರುವ ಅವರು, ಡಿಜಿಪಿ ಕರ್ನಾಟಕ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ಟ್ಯಾಗ್ ಮಾಡಿ, “ಇದು ಅತ್ಯಂತ ತಪ್ಪು ಮತ್ತು ಖಂಡನೀಯ” ಎಂದು ಅಸಮಾಧಾನ ಹೊರಹಾಕಿದ್ದಾರೆ. ಸಾರ್ವಜನಿಕರ ರಕ್ಷಣೆ ಮಾಡಬೇಕಾದ ಪೊಲೀಸರೇ ಈ ರೀತಿ ಸಾರ್ವಜನಿಕರನ್ನು ಹಿಗ್ಗಾಮುಗ್ಗಾ ಥಳಿಸುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಏನಿದು ಘಟನೆ?
ದೇವನಹಳ್ಳಿಯ ಕನ್ನಮಂಗಲ ಬಳಿ ಟೀ ಅಂಗಡಿ ತೆರೆದ ಕಾರಣಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಯುವಕನ ಮೇಲೆ ಅಮಾನುಷವಾಗಿ ಲಾಠಿಯಿಂದ ಹಲ್ಲೆ ನಡೆಸಿದ್ದು, ಈ ದೃಶ್ಯಗಳು ಈಗ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿವೆ. ಕನ್ನಮಂಗಲದ ಓಝೋನ್ ಬಡಾವಣೆಯ ಗೇಟ್ ಬಳಿ ಈ ಘಟನೆ ಸಂಭವಿಸಿದೆ. ರಾತ್ರಿ ವೇಳೆ ಟೀ ಅಂಗಡಿಯನ್ನು ತೆರೆದಿದ್ದೀಯ ಎಂದು ಸ್ಥಳಕ್ಕೆ ಬಂದ ಇನ್ಸ್ಪೆಕ್ಟರ್ ರಾಕೇಶ್, ನಿಯಮ ಪಾಲನೆಯ ಹೆಸರಿನಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಂಗಡಿಯ ಒಳಗಿದ್ದ ಹುಡುಗನನ್ನು ಬಲವಂತವಾಗಿ ಹೊರಗೆಳೆದು ತಂದ ಇನ್ಸ್ಪೆಕ್ಟರ್, ಲಾಠಿಯಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ಇನ್ಸ್ಪೆಕ್ಟರ್ ನಡೆಸಿದ ಈ ಹಲ್ಲೆಯ ಸಂಪೂರ್ಣ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ವಿಡಿಯೋದಲ್ಲಿ ಇನ್ಸ್ಪೆಕ್ಟರ್ ರಾಕೇಶ್ ಅವರು ಅತ್ಯಂತ ದರ್ಪದಿಂದ ವರ್ತಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಕಾನೂನು ಪಾಲಿಸುವಂತೆ ಹೇಳುವುದು ಪೊಲೀಸರ ಕರ್ತವ್ಯವಾಗಿದ್ದರೂ, ಮಾತು ಬಿಟ್ಟು ನೇರವಾಗಿ ಲಾಠಿ ಬೀಸಿರುವುದು ಮತ್ತು ಯುವಕನನ್ನು ಅಮಾನವೀಯವಾಗಿ ನಡೆಸಿಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಪೊಲೀಸರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ನಿಯಮ ಉಲ್ಲಂಘನೆಯಾಗಿದ್ದರೆ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಲಿ, ದಂಡ ವಿಧಿಸಲಿ. ಆದರೆ ಈ ರೀತಿ ಹೊಡೆಯಲು ಅಧಿಕಾರ ಕೊಟ್ಟವರು ಯಾರು?” ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಉದ್ಯಮಿ ಮೋಹನ್ದಾಸ್ ಪೈ ಸೇರಿದಂತೆ ಹಲವು ಗಣ್ಯರು ಈ ಘಟನೆಯನ್ನು ಖಂಡಿಸಿ ಗೃಹ ಸಚಿವರಿಗೆ ದೂರಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ ಇನ್ಸ್ಪೆಕ್ಟರ್ ರಾಕೇಶ್ ವಿರುದ್ಧ ಇಲಾಖಾ ತನಿಖೆಯಾಗಬೇಕು ಮತ್ತು ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಮೋಹನ್ದಾಸ್ ಪೈ ಅವರ ಈ ಪೋಸ್ಟ್ ಈಗ ರಾಜ್ಯ ರಾಜಕಾರಣದಲ್ಲಿ ಮತ್ತು ನಾಗರಿಕ ಸಮಾಜದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ತಪ್ಪಿತಸ್ಥ ಪೊಲೀಸ್ ಅಧಿಕಾರಿಯ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತದೆಯೇ ಎಂದು ಕಾದು ನೋಡಬೇಕಿದೆ.