ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಆ ರಾಜ್ಯದ ರಾಜಕಾರಣಿಗಳು ನೀಡುವ ಹೇಖಿಕೆಗಳಿಗಿಂತ, ಕರ್ನಾಟಕದ ರಾಜಕಾರಣಿಗಳು ನೀಡುತ್ತಿರುವ ಹೇಳಿಕೆಗಳೇ ಸದ್ದು ಮಾಡುತ್ತಿವೆ. ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ವಿರುದ್ಧ ಡಿಕೆ ಶಿವಕುಮಾರ್ ಗುಡುಗು ಮತ್ತು ಅದಕ್ಕೆ ಕರ್ನಾಟಕ ಬಿಜೆಪಿ ನೀಡಿರುವ ತಿರುಗೇಟಿನ ಮಧ್ಯೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆಯೊಂದು ಇದೀಗ ವಿವಾದದ ಕಿಡಿ ಹೊತ್ತಿಸಿದೆ.
ಹೌದು, ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು “ಟೆರರಿಸ್ಟ್” ಎಂದು ಕರೆದಿದ್ದಾರೆ. ಪ್ರಧಾನಿ ಮೋದಿ ಕುರಿತ ಎಐಸಿಸಿ ಅಧ್ಯಕ್ಷರ ಈ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗುವ ಸಾಧ್ಯತೆ ದಟ್ಟವಾಗಿದೆ.
ತಮಿಳುನಾಡಿನಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಮೈತ್ರಿಯ ಔಚಿತ್ಯವನ್ನು ಪ್ರಶ್ನಿಸಿದ ಮಲ್ಲಿಕಾರ್ಜುನ ಖರ್ಗೆ, ಸಮಾನತೆ ಮತ್ತು ನ್ಯಾಯದ ಮೇಲೆ ನಂಬಿಕೆ ಇರದ ಪಕ್ಷದೊಂದಿಗೆ ಎಐಎಡಿಎಂಕೆ ನಂಬಿಕೆ ಇಟ್ಟಿರುವುದು ಆಶ್ಚರ್ಯ ಎಂದು ಗುಡುಗಿದ್ದಾರೆ.
“ಅವರು ಪ್ರಧಾನಿ ಮೋದಿ ಜೊತೆ ಹೇಗೆ ಕೈಜೋಡಿಸಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ನರೇಂದ್ರ ಮೋದಿ ಓರ್ವ ಭಯೋತ್ಪಾದಕ. ಅವರ ಪಕ್ಷ ಸಮಾನತೆ ಮತ್ತು ನ್ಯಾಯದಲ್ಲಿ ನಂಬಿಕೆ ಇಡುವುದಿಲ್ಲ. ಈ ಜನರು ಅವರೊಂದಿಗೆ ಕೈಜೋಡಿಸುತ್ತಿದ್ದಾರೆ ಎಂದರೆ ಅವರು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದೇ ಅರ್ಥ” ಎಂದು ಮಲ್ಲಿಕಾರ್ಜುನ ಖರ್ಗೆ ಎಐಎಡಿಎಂಕೆ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಂಬೇಡ್ಕರ್ ಜಯಂತಿ ದಿನ ಪ್ರಧಾನಿ ಮೋದಿ-ಮಲ್ಲಿಕಾರ್ಜನ ಖರ್ಗೆ ಆಪ್ತ ಸಮಾಲೋಚನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
ತಮಿಳುನಾಡಿನಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ಒಟ್ಟಾಗಿ ಚುನಾವಣೆ ಎದುರಿಸುತ್ತಿವೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಈಗಾಗಲೇ ರಾಜ್ಯದಲ್ಲಿ ಹಲವು ಸುತ್ತಿನ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದ್ದಾರೆ. ಆಡಳಿತಾರೂಢ ಡಿಎಂಕೆ ನೇತೃತ್ವದ ಮೂತ್ರಿಕೂಟವನ್ನು ಅಧಿಕಾರದಿಂದ ಕಿತ್ತೆಸೆಯಲು, ಎನ್‌ಡಿಎ ಪ್ರಯತ್ನಗಳನ್ನು ಆರಂಭಿಸಿದೆ.
ಅದರಂತೆ ಡಿಎಂಕೆ ನೇತೃತ್ವದ ಭಾಗವಾಗಿರುವ ಕಾಂಗ್ರೆಸ್, ತಮಿಳುನಾಡಿನಲ್ಲಿ ತನ್ನೆಲ್ಲಾ ಶಕ್ತಿ-ಸಂಪನ್ಮೂಲಗಳನ್ನು ಧಾರೆ ಎರೆಯುತ್ತಿದೆ. ತಮಿಳುನಾಡಿನಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಹಲವರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ಇತ್ತೀಚಿಗೆ ಕೇರಳದಲ್ಲಿ ಚುನಾವಣಾ ಭಾಷಣ ಮಾಡುತ್ತಾ, ಗುಜರಾತಿಗಳು ಅನಕ್ಷರಸ್ಥರು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಬಳಿಕ, ಎಐಸಿಸಿ ಅಧ್ಯಕ್ಷರು ಕ್ಷಮೆಯನ್ನೂ ಕೋರಿದ್ದರು.
ಇದೀಗ ತಮಿಳುನಾಡಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರನ್ನು “ಟೆರರಿಸ್ಟ್” ಎಂದು ಕರೆಯುವ ಮೂಲಕ ಹೊಸದೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಬಿಜೆಪಿ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆಯಲ್ಲದೇ, ಎಐಸಿಸಿ ಅಧ್ಯಕ್ಷರು ಈ ಕೂಡಲೇ ಪ್ರಧಾನಮಂತ್ರಿಗಳ ಕ್ಷಮೆ ಕೋರುವಂತೆ ಒತ್ತಾಯಿಸಿದೆ.