ಮಾನವನ ದೇಹದಲ್ಲಿ (Human Body) ಮೂತ್ರಪಿಂಡದ (Kidney) ಕಾರ್ಯ ತುಂಬಾ ವಿಚಿತ್ರ ಅಂತನೇ ಹೇಳಬಹುದು. ಒಂದು ಕಿಡ್ನಿ ಸಂಪೂರ್ಣವಾಗಿ ಹಾನಿಗೊಳಗಾಗಿದ್ದರೂ, ಇನ್ನೊಂದು ಕಿಡ್ನಿ ಅರ್ಧ ಹಾನಿಗೊಳಗಾಗಿದ್ದರೂ ಸಹ, ವ್ಯಕ್ತಿ ಎಲ್ಲರಂತೆ ಸಾಮಾನ್ಯವಾಗಿಯೇ ಕಾಣುತ್ತಾನೆ. 80 ರಿಂದ 90 ಪ್ರತಿಶತ ಮೂತ್ರಪಿಂಡಗಳು ಸಂಪೂರ್ಣವಾಗಿ ಹಾನಿಗೊಳಗಾಗುವವರೆಗೆ ಸಾಮಾನ್ಯವಾಗಿ ಯಾವುದೇ ಪ್ರಮುಖ ಲಕ್ಷಣಗಳು ಕಂಡುಬರುವುದಿಲ್ಲ.
ಆದರೆ ಅಪಾಯಕಾರಿ ಹಂತವನ್ನು ತಲುಪಿದ (Last Stage) ನಂತರ, ಮೂತ್ರಪಿಂಡಗಳು ಸಂಪೂರ್ಣವಾಗಿ ನಿಷ್ಪ್ರಯೋಜಕವಾಗುತ್ತದೆ. ಆದರೆ ಅದಕ್ಕೂ ಮುನ್ನ ದೇಹವು ಕೊನೆಯ ಎಚ್ಚರಿಕೆಯನ್ನು ನೀಡುತ್ತದೆ. ಅದನ್ನು ಮೊದಲೇ ಪತ್ತೆಹಚ್ಚಿದರೆ, ಈ ಮಾರಣಾಂತಿಕ ಅಪಾಯದಿಂದ ಸುಲಭವಾಗಿ ಪಾರಾಗಬಹುದು.
ಕಿಡ್ನಿ ಸಮಸ್ಯೆಯಿಂದ ದೇಹದಲ್ಲಾಗುತ್ತೆ ಈ ಬದಲಾವಣೆಗಳು!
ದೇಹವು ನೀಡುವ ಈ ಕೊನೆಯ ಎಚ್ಚರಿಕೆಗಳಲ್ಲಿ ಪ್ರಮುಖವಾದದ್ದು ಮೂತ್ರನಾಳದಲ್ಲಿನ ಬದಲಾವಣೆಗಳು. ನೀವು ಮೂರು ಅಥವಾ ನಾಲ್ಕಕ್ಕೂ ಹೆಚ್ಚು ಬಾರಿ ಮೂತ್ರ ವಿಸರ್ಜಿಸಬೇಕಾದರೆ, ವಿಶೇಷವಾಗಿ ರಾತ್ರಿ ಹೊತ್ತು ನಿದ್ರೆಯ ಸಮಯದಲ್ಲಿ ನಿಮ್ಮ ಮೂತ್ರದಲ್ಲಿ ನೊರೆ ಅಥವಾ ರಕ್ತವಿದ್ದರೆ, ಮೂತ್ರಪಿಂಡಗಳು ಗಂಭೀರ ಅಪಾಯಕ್ಕೊಳಗಾಗಿದೆ ಎಂಬುವುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇದರ ಜೊತೆಗೆ, ಕಿಡ್ನಿ ಸಮಸ್ಯೆ ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ, ಇದು ತೀವ್ರ ರಕ್ತಹೀನತೆಗೆ ಕಾರಣವಾಗುತ್ತದೆ.
ಶುಗರ್-ಬಿಪಿ ಹೆಚ್ಚಾಗಲು ಕಾರಣವಾಗಬಹುದು!
ಇನ್ನೂ ಈ ಬಗ್ಗೆ ಮಾತನಾಡಿರುವ ಕರೀಂನಗರದ ಡಾ. ಕೆ. ರವಿಶಂಕರ್ ಅವರು, ಸಣ್ಣ ಕೆಲಸಗಳನ್ನು ಮಾಡಿದರೂ ಸಹ ತೀವ್ರ ಆಯಾಸ ಮತ್ತು ಉಸಿರಾಟಕ್ಕೆ ತೊಂದರೆಯಾಗುತ್ತದೆ. ಈ ಸಮಸ್ಯೆ ತೀವ್ರವಾದಾಗ, ರಕ್ತದಲ್ಲಿನ ಯೂರಿಯಾ ಮಟ್ಟವು ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಇದರ ಪರಿಣಾಮದಿಂದಾಗಿ, ಬಾಯಿಯಿಂದ ದುರ್ವಾಸನೆ ಬರಲು ಪ್ರಾರಂಭಿಸುತ್ತದೆ ಎಂದಿದ್ದಾರೆ.
ದೇಹದಲ್ಲಿ ವಿಷಕಾರಿ ಅಂಶ ಹೆಚ್ಚಾಗುವುದರಿಂದ, ನೀವು ಏನೇ ತಿಂದರೂ ಕಹಿ ರುಚಿ ಬರುತ್ತದೆ. ನಮ್ಮ ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಕಿಡ್ನಿ ಪ್ರಮುಖ ಪಾತ್ರ ವಹಿಸುವುದರಿಂದ, ಇದಕ್ಕೆ ಹಾನಿಯಾಗುವುದು ರಕ್ತದೊತ್ತಡ ಅಥವಾ ಬಿಪಿ ಹಠಾತ್ ಹೆಚ್ಚಳಕ್ಕೆ ಕಾರಣವಾಗಬಹುದು.
ವೈದ್ಯರ ಸಲಹೆ ಪಡೆಯದೇ ಮಾತ್ರೆ ತೆಗೆದುಕೊಳ್ಳಬಾರದು!
ನಮ್ಮ ದೈನಂದಿನ ಜೀವನದಲ್ಲಿ ನಾವು ತಿಳಿಯದೇ ಮಾಡುವ ಕೆಲ ತಪ್ಪುಗಳಿಂದ ಕಿಡ್ನಿ ಹಾನಿಗೊಳಗಾಗುತ್ತಿದೆ. ವಿಶೇಷವಾಗಿ, ನಮಗೆ ತಲೆನೋವು ಮತ್ತು ಬೆನ್ನು ನೋವು ಬಂದಾಗ, ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೇ ಮೆಡಿಕಲ್ ಸ್ಟೋರ್ಗಳಿಂದ ನೋವು ನಿವಾರಕ ಮಾತ್ರೆಗಳನ್ನು ಖರೀದಿಸಿ ಸೇವಿಸುತ್ತೇವೆ. ಇದು ಮೂತ್ರಪಿಂಡಗಳ ಕಾರ್ಯವನ್ನು ನಿಧಾನಗೊಳಿಸುತ್ತದೆ. ಕಿಡ್ನಿ ಅವುಗಳನ್ನು ವಿಷಕಾರಿ ಪದಾರ್ಥಗಳಾಗಿ ಪರಿವರ್ತಿಸುತ್ತವೆ.
ನೀವು ದಿನಕ್ಕೆ ಮೂರು ಲೀಟರ್ ನೀರು ಕುಡಿಯದಿದ್ದರೆ, ಮೂತ್ರಪಿಂಡಗಳಲ್ಲಿ ತ್ಯಾಜ್ಯ ಸಂಗ್ರಹವಾಗುತ್ತದೆ. ಇದರಿಂದ ಮೂತ್ರಪಿಂಡಗಳ ಕಾರ್ಯನಿರ್ವಹಣೆ ಮತ್ತು ಶೋಧನೆ ಪ್ರಕ್ರಿಯೆಗಳು ಸಂಪೂರ್ಣವಾಗಿ ನಿಲ್ಲುತ್ತವೆ. ಇದಲ್ಲದೇ, ಮಧುಮೇಹ ಮತ್ತು ಬಿಪಿ ಸಮಸ್ಯೆಗಳಿರುವವರು ಅವುಗಳನ್ನು ನಿಯಂತ್ರಿಸದಿದ್ದರೆ ಮತ್ತು ಔಷಧಿಗಳನ್ನು ಸರಿಯಾಗಿ ಬಳಸದಿದ್ದರೆ ಕೇವಲ ಐದು ವರ್ಷಗಳಲ್ಲಿಯೇ ಅವರ ಮೂತ್ರಪಿಂಡಗಳು ವಿಫಲಗೊಳ್ಳುವ ಸಾಧ್ಯತೆಯಿದೆ ಎಂದು ಡಾ. ಕೆ. ರವಿಶಂಕರ್ ಹೇಳುತ್ತಾರೆ.
ದೇಹದಲ್ಲಿನ ಈ ಬದಲಾವಣೆಗಳ ಬಗ್ಗೆ ನಿರ್ಲಕ್ಷ್ಯ ಬೇಡ!
ದೇಹದಲ್ಲಿ ಇಂತಹ ಬದಲಾವಣೆಗಳನ್ನು ಸಾಮಾನ್ಯ ಆಯಾಸ ಅಥವಾ ವಯಸ್ಸಿಗೆ ಸಂಬಂಧಿಸಿದ ಬದಲಾವಣೆಗಳೆಂದು ಪರಿಗಣಿಸಬಾರದು ಮತ್ತು ಅವುಗಳನ್ನು ಎಂದಿಗೂ ನಿರ್ಲಕ್ಷಿಸಬಾರದು. ಮೇಲಿನ ಯಾವುದಾದರೂ ಲಕ್ಷಣಗಳು ಕಂಡು ಬಂದರೆ ತಕ್ಷಣ ಎಚ್ಚೆತ್ತುಕೊಳ್ಳಬೇಕು. ತಡಮಾಡದೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಸೀರಮ್ ಕ್ರಿಯೇಟಿನೈನ್ ನಂತಹ ನಿಯಮಿತ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವ ಮೂಲಕ ನಿಮ್ಮ ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಇಂತಹ ಮುನ್ನೆಚ್ಚರಿಕೆಗಳು ಮತ್ತು ಜೀವನಶೈಲಿಯಲ್ಲಿನ ಕೆಲ ಬದಲಾವಣೆಗಳಿಂದ ಮಾತ್ರ ಡಯಾಲಿಸಿಸ್ನಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು.
(Disclaimer: ಈ ಸುದ್ದಿಯಲ್ಲಿ ಒದಗಿಸಲಾದ ಮಾಹಿತಿ ಮತ್ತು ಆರೋಗ್ಯ ಸಂಬಂಧಿತ ಸಲಹೆಗಳು ತಜ್ಞರೊಂದಿಗಿನ ಸಂಭಾಷಣೆಗಳನ್ನು ಆಧರಿಸಿವೆ. ಇದು ಸಾಮಾನ್ಯ ಮಾಹಿತಿಯಾಗಿದೆಯೇ ಹೊರತು ವೈಯಕ್ತಿಕ ಸಲಹೆಯಲ್ಲ. ಆದ್ದರಿಂದ, ವೈದ್ಯರನ್ನು ಸಂಪರ್ಕಿಸಿದ ಬಳಿಕವಷ್ಟೇ ಈ ಮಾಹಿತಿಯನ್ನು ಅನುಸರಿಸಬಹುದು. ಆದರೆ ಇದರ ಬಳಕೆಯಿಂದ ಉಂಟಾಗುವ ಯಾವುದೇ ಅಡ್ಡಪರಿಣಾಮ ಮತ್ತು ಹಾನಿಗೆ ಕನ್ನಡ ನ್ಯೂಸ್ ಟೈಮ್ ಜವಾಬ್ದಾರಿಯಲ್ಲ)
ಕಿಡ್ನಿ ಫೇಲ್ಯೂರ್ಗೆ ಮುನ್ನ ದೇಹ ನೀಡುವ ಕೊನೆಯ ಎಚ್ಚರಿಕೆ ಇದು! ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ!
WhatsApp Group
Join Now