ಮಗುವಿನ ಅಳುವಿಗೆ ಬೇಸತ್ತು ಕತ್ತು ಸೀಳಿ ಹೆತ್ತ ಕಂದನನ್ನೇ ಹತ್ಯೆಗೈದ ತಾಯಿ! ಬಳಿಕ ತನ್ನ ಗಂಟಲು ಸೀಳಿ ಆತ್ಮಹತ್ಯೆಗೆ ಯತ್ನ

Spread the love

ಮಗುವಿನ ನಿರಂತರ ಅಳುವಿನಿಂದ ಸಿಟ್ಟುಗೊಂಡು ತಾಯಿಯೊಬ್ಬಳು ತನ್ನ ಆರು ತಿಂಗಳ ಹೆಣ್ಣು ಮಗುವಿನ ಕತ್ತನ್ನು ಕತ್ತಿಯಿಂದ ಸೀಳಿ ಹತ್ಯೆ ಮಾಡಿರುವ ಅತ್ಯಂತ ಭೀಕರ ಘಟನೆ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಗೋಪಾಲ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬರ್ಕಾ ಗ್ರಾಮದಲ್ಲಿ ಗುರುವಾರ (ಜೂ.26) ರಾತ್ರಿ ನಡೆದಿದೆ.

ಮಗುವನ್ನು ಕೊಲೆ ಮಾಡಿದ ಬಳಿಕ ಆರೋಪಿ ತಾಯಿ ಕೂಡ ಅದೇ ಆಯುಧದಿಂದ ತನ್ನ ಕತ್ತನ್ನು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಪೂಜಾ ಕುಮಾರಿ ಹತ್ಯೆಯಾದ ಆರು ತಿಂಗಳ ದುರ್ದೈವಿ ಮಗು ಎಂದು ಗುರುತಿಸಲಾಗಿದೆ. ಮಗುವಿನ ತಂದೆ ಸುನಿಲ್ ದಾಸ್ ಅವರು ಚಂಡೀಗಢದಲ್ಲಿ ವಲಸೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಘಟನೆ ನಡೆದ ಸಮಯದಲ್ಲಿ ಅವರು ಮನೆಯಲ್ಲಿ ಇರಲಿಲ್ಲ. ಮನೆಯಲ್ಲಿ ಮಗು ಪೂಜಾ, ತಾಯಿ ಸೀಮಾ ದೇವಿ ಹಾಗೂ ಮಗುವಿನ ಅಜ್ಜಿ ಸರಸ್ವತಿ ದೇವಿ ಮಾತ್ರ ವಾಸವಾಗಿದ್ದರು. ಗುರುವಾರ ತಡರಾತ್ರಿ ಈ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ತಡರಾತ್ರಿ ಕೋಣೆಯಿಂದ ಜೋರಾಗಿ ಕೇಳಿಬಂದ ಕಿರುಚಾಟದ ಧ್ವನಿಯನ್ನು ಆಲಿಸಿ ಅಜ್ಜಿ ಸರಸ್ವತಿ ದೇವಿ ತಕ್ಷಣವೇ ಕೋಣೆಯತ್ತ ಧಾವಿಸಿದ್ದಾರೆ. ಈ ವೇಳೆ ಅಲ್ಲಿ ಕಂಡ ದೃಶ್ಯ ಕಂಡು ಅವರು ದಿಗ್ಭ್ರಮೆಗೊಂಡಿದ್ದಾರೆ. ಆರು ತಿಂಗಳ ಕಂದಮ್ಮ ರಕ್ತದ ಮಡುವಿನಲ್ಲಿ ನೆಲದ ಮೇಲೆ ಬಿದ್ದಿದ್ದರೆ, ಇತ್ತ ತಾಯಿ ಸೀಮಾ ದೇವಿ ಅದೇ ರಕ್ತಸಿಕ್ತ ಕುಡುಗೋಲಿನಿಂದ ತನ್ನದೇ ಗಂಟಲನ್ನು ಸೀಳಿಕೊಳ್ಳಲು ಯತ್ನಿಸುತ್ತಿದ್ದಳು. ತಕ್ಷಣವೇ ಕಾರ್ಯಪ್ರವೃತ್ತರಾದ ಅಜ್ಜಿ, ಸೊಸೆಯ ಕೈಯಲ್ಲಿದ್ದ ಕುಡುಗೋಲನ್ನು ಕಸಿದುಕೊಂಡು ಜೋರಾಗಿ ಕೂಗಾಡಿ ನೆರೆಹೊರೆಯವರನ್ನು ಜಮಾಯಿಸಿದ್ದಾರೆ. ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಗೋಪಾಲ್ಪುರ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ (SHO) ಅಂಕಿತ್ ಕುಮಾರ್ ಅವರು ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರು ಮಗುವಿನ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಇತ್ತ ತೀವ್ರವಾಗಿ ಗಾಯಗೊಂಡಿದ್ದ ಸೀಮಾ ದೇವಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಕುತ್ತಿಗೆಗೆ ವೈದ್ಯರು ಹೊಲಿಗೆ ಹಾಕಿದ್ದು ಸದ್ಯ ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಶುಕ್ರವಾರ ಮುಂಜಾನೆ ಮಗುವಿನ ಅಜ್ಜಿ ಸರಸ್ವತಿ ದೇವಿ ನೀಡಿದ ಅಧಿಕೃತ ದೂರಿನ ಮೇರೆಗೆ ಗೋಪಾಲ್ಪುರ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (FIR) ದಾಖಲಾಗಿದ್ದು, ಕೃತ್ಯಕ್ಕೆ ಬಳಸಲಾದ ಕುಡುಗೋಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯ ವೇಳೆ ಮಹಿಳೆಯ ಮಾನಸಿಕ ಸ್ಥಿತಿಯ ಬಗ್ಗೆ ತೀವ್ರ ಅನುಮಾನಗಳು ವ್ಯಕ್ತವಾಗಿವೆ. ಈ ಕುರಿತು ಮಾತನಾಡಿರುವ ಪೊಲೀಸ್ ಅಧಿಕಾರಿ ಅಂಕಿತ್ ಕುಮಾರ್ ಅವರು, ಮೇಲ್ನೋಟಕ್ಕೆ ಮಹಿಳೆ ಮಾನಸಿಕವಾಗಿ ಅಸ್ವಸ್ಥಳಾಗಿದ್ದಾಳೆ ಎಂದು ಕಂಡುಬರುತ್ತಿದೆ, ಆದರೆ ವೈದ್ಯಕೀಯ ವರದಿ ಹಾಗೂ ಸಂಪೂರ್ಣ ತನಿಖೆಯ ಬಳಿಕವಷ್ಟೇ ಆಕೆಯ ಮಾನಸಿಕ ಸ್ಥಿತಿಯನ್ನು ಅಧಿಕೃತವಾಗಿ ಖಚಿತಪಡಿಸಲು ಸಾಧ್ಯ ಎಂದು ತಿಳಿಸಿದ್ದಾರೆ.

WhatsApp Group Join Now

Spread the love

Leave a Reply