ಆ ಯತ್ನಾಳ್ ನೋಡಿದ್ರೆ ಬಾಯಿಗೆ ಬಂದಿದ್ದು ಮಾತಾಡ್ತಾನೆ, ಅದು ಯಾವುದೋ ಒಂದು ಕೋತಿಯ ಬ್ರೀಡ್: ಪ್ರದೀಪ್ ಈಶ್ವರ್

Spread the love

ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹಾಗೂ ಬಿಜೆಪಿ ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಪ್ರದೀಪ್ ಈಶ್ವರ್ ತಮ್ಮ ವಿರುದ್ಧ ದ್ವೇಷ ಭಾಷಣ ಮಾಡಿದ್ದಾರೆ ಮತ್ತು ‘ದೇಶದ್ರೋಹಿ’ ಎಂದು ಕರೆದಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಪತ್ರದ ಮೂಲಕ ದೂರು ನೀಡಿದ್ದರು.

ಈ ದೂರಿಗೆ ಬೆಂಗಳೂರಿನಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪ್ರದೀಪ್ ಈಶ್ವರ್, ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

ಅವರಿಗೆ ಕನಿಷ್ಠ ಜ್ಞಾನವೂ ಇಲ್ಲ

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, “ಛಲವಾದಿ ನಾರಾಯಣಸ್ವಾಮಿ ಅವರನ್ನು ನಾನು ಬುದ್ಧಿವಂತರು, ಪ್ರಜ್ಞಾವಂತರು ಅಂದುಕೊಂಡಿದ್ದೆ. ಆದರೆ ಅವರು ನೀಡಿರುವ ದೂರು ನೋಡಿದರೆ ಅವರಿಗೆ ಕನಿಷ್ಠ ಜ್ಞಾನವೂ ಇಲ್ಲ ಎನಿಸುತ್ತಿದೆ. ನನ್ನ ಭಾಷಣದ ವೀಡಿಯೊವನ್ನು ಸರಿಯಾಗಿ ನೋಡದೆ ಸಿಎಂ ಮತ್ತು ಹೋಮ್ ಮಿನಿಸ್ಟರ್‌ಗೆ ಪತ್ರ ಬರೆದಿರುವುದು ಎಷ್ಟು ಸರಿ?” ಎಂದು ಪ್ರಶ್ನಿಸಿದರು.

“ನನ್ನ ವಿಡಿಯೋದಲ್ಲಿ ‘ಅಂಧಭಕ್ತರು ಮತ್ತು ದೇಶದ್ರೋಹಿಗಳು ಈ ದೇಶಕ್ಕೆ ಮಾರಕ’ ಎಂದು ಹೇಳಿದ್ದೇನೆಯೇ ಹೊರತು, ನಿರ್ದಿಷ್ಟವಾಗಿ ಯಾರನ್ನೂ ದೇಶದ್ರೋಹಿ ಎಂದು ಕರೆದಿಲ್ಲ. ಛಲವಾದಿ ನಾರಾಯಣಸ್ವಾಮಿ ಅವರು ತಮ್ಮ ಮನಸ್ಸಿನಲ್ಲಿರುವ ಕೊಳಕನ್ನೇ ಹೊರಹಾಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಯತ್ನಾಳ್ ವಿರುದ್ಧ ಟೀಕೆ

ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, ಈ ನಾಡಿನಲ್ಲಿ ದ್ವೇಷ ಭಾಷಣದ ಮೊದಲ ಪಿತಾಮಹ ಛಲವಾದಿ ನಾರಾಯಣಸ್ವಾಮಿ ಹಾಗೂ ಎರಡನೇ ಪಿತಾಮಹ ಬಸನಗೌಡ ಪಾಟೀಲ್ ಯತ್ನಾಳ್ ಎಂದು ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ ಪ್ರದೀಪ್ ಈಶ್ವರ್ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಆ ಯತ್ನಾಳ್ ನೋಡಿದರೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಾನೆ. ಅದು ಯಾವುದೋ ಒಂದು ಕೋತಿಯ ಬ್ರೀಡ್ ಎಂದು ಕಟುವಾದ ಪದಗಳಲ್ಲಿ ನಿಂದಿಸಿದ್ದಾರೆ. ಪ್ರದೀಪ್ ಈಶ್ವರ್ ಅವರ ಈ ವಿವಾದಾತ್ಮಕ ಹೇಳಿಕೆಗಳು ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.

ಮೋದಿ ಅಭಿಮಾನಿಗಳನ್ನು ದೇಶದ್ರೋಹಿ ಎಂದ ಪ್ರದೀಪ್ ಈಶ್ವರ್, ಸಿಡಿದೆದ್ದ ಬಿಜೆಪಿ ನಾಯಕರು

ಇತ್ತೀಚೆಗೆ ನಡೆದ ರಾಜಕೀಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಶಾಸಕ ಪ್ರದೀಪ್ ಈಶ್ವರ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ ಮತ್ತು ಪ್ರೀತಿಸುವ ದೇಶದ ಕೋಟ್ಯಾಂತರ ನಾಗರಿಕರನ್ನು ನೇರವಾಗಿ ದೇಶದ್ರೋಹಿಗಳು ಎಂದು ಕರೆದಿದ್ದರು. ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಇಂತಹ ಗಂಭೀರ ಮತ್ತು ಕಾನೂನುಬಾಹಿರ ಹೇಳಿಕೆ ನೀಡಿರುವುದು ಶಿಕ್ಷಾರ್ಹ ಅಪರಾಧ ಎಂದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

WhatsApp Group Join Now

Spread the love

Leave a Reply