ಹಾವೇರಿ (Haveri) ಜಿಲ್ಲೆಯ ಹಾನಗಲ್‌ನ (Hangal) ಕುಮರೇಶ್ವರ ಪ್ರೌಢಶಾಲೆಯ ನಿವೃತ್ತ ಶಿಕ್ಷಕರಾದ (Teacher) ಸಿ.ಎಸ್. ವಸ್ತ್ರದ ಅವರಿಗೆ ಅವರ ಹಳೆಯ ವಿದ್ಯಾರ್ಥಿಗಳು (Alumni) ಅಭೂತಪೂರ್ವ ವಿದಾಯ ಸಮಾರಂಭವನ್ನು ಏರ್ಪಡಿಸುವ ಮೂಲಕ ಗುರುವಂದನೆ ಸಲ್ಲಿಸಿದ್ದಾರೆ.
ಈ ಸಮಾರಂಭದಲ್ಲಿ ಶಿಕ್ಷಕರ ಮೇಲಿನ ಗೌರವದ ಸಂಕೇತವಾಗಿ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಉಡುಗೊರೆಯಾಗಿ ನೀಡಲಾಗಿದ್ದು, ಇದು ಇಡೀ ಜಿಲ್ಲೆಯಲ್ಲೇ ಈಗ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಹಾವೇರಿ ಜಿಲ್ಲೆಯ ಹಾನಗಲ್‌ನ ಕುಮರೇಶ್ವರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಯವರ ದಿವ್ಯ ಸನ್ನಿಧಿಯಲ್ಲಿ ಈ ಕಾರನ್ನು ಶಿಕ್ಷಕರಿಗೆ ಹಸ್ತಾಂತರಿಸಲಾಯಿತು. ಶಾಲೆಯ ವಿವಿಧ ಬ್ಯಾಚ್‌ಗಳ ಸುಮಾರು ಸಾವಿರಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಈ ಸಮಾರಂಭದಲ್ಲಿ ಭಾಗವಹಿಸಿ ತಮ್ಮ ಶಾಲಾ ದಿನಗಳ ನೆನಪುಗಳನ್ನು ಮೆಲುಕು ಹಾಕಿದರು. ತಮಗೆ ಶಿಸ್ತು ಮತ್ತು ಜೀವನದ ಪಾಠಗಳನ್ನು ಕಲಿಸಿಕೊಟ್ಟ ನೆಚ್ಚಿನ ಗುರುಗಳನ್ನು ಗೌರವಿಸಲು ವಿದ್ಯಾರ್ಥಿರೆಲ್ಲರೂ ಒಂದೆಡೆ ನೆರೆದಿದ್ದರು.
ಈ ಕಾರನ್ನು ಉಡುಗೊರೆಯಾಗಿ ನೀಡಿದ 2007ರ ಎಸ್‌ಎಸ್‌ಎಲ್‌ಸಿ ಬ್ಯಾಚ್‌ನ ವಿದ್ಯಾರ್ಥಿ ನವೀನ್ ಹುಲಿಹಳ್ಳಿ ಸದ್ಯ ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ಬಡತನದ ಬೇಗೆಯಲ್ಲಿದ್ದ ನವೀನ್ ಅವರಿಗೆ ಶಿಕ್ಷಕ ವಸ್ತ್ರದ ಅವರು ಆರ್ಥಿಕವಾಗಿ ನೆರವಾಗಿದ್ದರು. ರಜಾದಿನಗಳಲ್ಲೂ ವಿಶೇಷ ತರಗತಿಗಳನ್ನು ಮಾಡುವ ಮೂಲಕ ನವೀನ್ ಅವರ ವಿದ್ಯಾಭ್ಯಾಸಕ್ಕೆ ಆಸರೆಯಾಗಿದ್ದರು. ತಮಗೆ ಶಿಕ್ಷಕರಾಗಿ ಮಾತ್ರವಲ್ಲದೆ ಪೋಷಕರಂತೆಯೂ ನಿಂತು ಸ್ನಾತಕೋತ್ತರ ಪದವಿ ಮುಗಿಯುವವರೆಗೆ ಬೆಂಬಲ ನೀಡಿದ ಗುರುವಿಗೆ ಕೃತಜ್ಞತೆ ಸಲ್ಲಿಸಲು ನವೀನ್ ಈ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ.
ವಿದ್ಯಾರ್ಥಿಗಳ ಈ ಅಪಾರ ಪ್ರೀತಿ ಮತ್ತು ಗೌರವಕ್ಕೆ ಮನಸೋತ ಶಿಕ್ಷಕ ಸಿ.ಎಸ್. ವಸ್ತ್ರದ ಅವರು ಭಾವುಕರಾದರು. “ನಾನು ಕೇವಲ ಒಬ್ಬ ಶಿಕ್ಷಕನಾಗಿ ನನ್ನ ಕರ್ತವ್ಯವನ್ನು ನಿಭಾಯಿಸಿದ್ದೇನೆ. ಇಂದು ನನ್ನ ಸಾವಿರಾರು ವಿದ್ಯಾರ್ಥಿಗಳು ಮತ್ತು ಪೂಜ್ಯ ಸ್ವಾಮೀಜಿಯವರ ಆಶೀರ್ವಾದದ ಮಧ್ಯೆ ನಿಂತಿರುವುದು ನನ್ನ ಜೀವನದ ಅತ್ಯಂತ ದೊಡ್ಡ ಸೌಭಾಗ್ಯ. ನವೀನ್‌ನ ಈ ಕೃತಜ್ಞತಾ ಭಾವ ನನ್ನನ್ನು ಮೂಕವಿಸ್ಮಿತನನ್ನಾಗಿ ಮಾಡಿದೆ” ಎಂದು ಅವರು ಸಂತಸ ಹಂಚಿಕೊಂಡರು. ಹಳೆಯ ವಿದ್ಯಾರ್ಥಿಗಳ ಈ ಕಾರ್ಯವು ಗುರು-ಶಿಷ್ಯ ಪರಂಪರೆಗೆ ಒಂದು ಉತ್ತಮ ಉದಾಹರಣೆಯಾಗಿ ಮೂಡಿಬಂದಿದೆ.
ಗುರುವಿನ ಋಣ ಸ್ಮರಿಸಿದ ವಿದ್ಯಾರ್ಥಿ- ಕಷ್ಟಕಾಲದಲ್ಲಿ ನೆರವಾದ ನಿವೃತ್ತ ಶಿಕ್ಷಕನಿಗೆ ಹೊಸ ಕಾರು ಗಿಫ್ಟ್!
WhatsApp Group
Join Now