ರಾಜ್ಯದಲ್ಲಿ ನೈಋತ್ಯ ಮುಂಗಾರು ಮಾರುತಗಳ ಆರ್ಭಟ ಜೋರಾಗಿದ್ದು, ನಿರಂತರವಾಗಿ ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು ರಾಜ್ಯದ ಹಲವು ಜಿಲ್ಲೆಗಳಲ್ಲಿ ಜೂನ್ 13ರವರೆಗೆ ‘ರೆಡ್ ಅಲರ್ಟ್’ ಘೋಷಿಸಿದೆ.
ಮುಂಗಾರು ಮಾರುತಗಳ ಉತ್ತರ ರೇಖೆಯು ಈಗಾಗಲೇ ರಾಜ್ಯದ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಆವರಿಸಿದ್ದು, ಕೊಡಗು ಜಿಲ್ಲೆಯ ಕೆಲವು ಭಾಗಗಳಲ್ಲೂ ಮುಂಗಾರು ಆರಂಭಗೊಂಡಿದೆ.ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಮುಂಚಿತವಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಸೇರಿದಂತೆ ಐದು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿತ್ತು. ಆದರೆ ಮಳೆಯ ಆರ್ಭಟ ಹೆಚ್ಚಾದ ಬೆನ್ನಲ್ಲೇ ಬುಧವಾರದಂದು ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಧಾರವಾಡ ಹಾಗೂ ಹಾವೇರಿ ಸೇರಿದಂತೆ ಒಟ್ಟು ಏಳು ಜಿಲ್ಲೆಗಳಿಗೆ ರೆಡ್ ಅಲರ್ಟ್ ವಿಸ್ತರಿಸಲಾಗಿದೆ.
ಈ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ದಾಖಲಾಗಿದೆ. ಇಡೀ ರಾಜ್ಯದ ದೀರ್ಘಕಾಲದ ಸರಾಸರಿ ವಾಡಿಕೆ ಮಳೆ 115 ಮಿ.ಮೀ ಆಗಿದ್ದು, ಈ ಬಾರಿ ಒಟ್ಟಾರೆ 125 ಮಿ.ಮೀ ಮಳೆಯಾಗಿದೆ. ಇದು ವಾಡಿಕೆಗಿಂತ ಶೇಕಡಾ 8 ರಷ್ಟು ಹೆಚ್ಚಾಗಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಭಾಗದಲ್ಲಿ ಶೇಕಡಾ 42 ರಷ್ಟು ಹೆಚ್ಚುವರಿ ಮಳೆಯಾಗಿದ್ದು, ಸಾಮಾನ್ಯ ಮಳೆಯಾದ 72 ಮಿ.ಮೀ ಬದಲಿಗೆ 112 ಮಿ.ಮೀ ಮಳೆ ಸುರಿದಿದೆ. ಆದರೆ, ದಕ್ಷಿಣ ಒಳನಾಡಿನಲ್ಲಿ ಮಾತ್ರ ವಾಡಿಕೆಗಿಂತ ಸ್ವಲ್ಪ ಕಡಿಮೆ ಮಳೆಯಾಗಿದ್ದು, ಸಾಮಾನ್ಯ ಮಳೆಯಾದ 138 ಮಿ.ಮೀ ಬದಲಿಗೆ 128 ಮಿ.ಮೀ ಮಳೆ ದಾಖಲಾಗಿದೆ.
ರಾಜ್ಯಾದ್ಯಂತ ಮುಂದಿನ 3 ದಿನ ‘ನೈಋತ್ಯ ಮುಂಗಾರು’ ಆರ್ಭಟ : ಈ ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಘೋಷಣೆ
WhatsApp Group
Join Now