ಹಿಜಾಬ್, ಜನಿವಾರ, ಶಿವದಾರ ಧರಿಸಲು ಅನುಮತಿ ನೀಡಿದ ಸರ್ಕಾರ! ಪರೀಕ್ಷೆಯಲ್ಲಿ ಇನ್ನು ಧಾರ್ಮಿಕ ಪದ್ಧತಿಗೆ ಮುಕ್ತ ಅವಕಾಶ

Spread the love

ಬೆಂಗಳೂರು: ರಾಜ್ಯದ ಶೈಕ್ಷಣಿಕ (Education) ಕ್ಷೇತ್ರದಲ್ಲಿ ಹಲವು ದಿನಗಳಿಂದ ಚರ್ಚೆಯಲ್ಲಿದ್ದ ಧಾರ್ಮಿಕ ಪದ್ಧತಿಗಳ ಪಾಲನೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಸಂಪ್ರದಾಯದಂತೆ ಜನಿವಾರ, ಶಿವದಾರ, ಪೇಟಾ, ಹಿಜಾಬ್ ಹಾಗೂ ಸ್ಕಾರ್ಫ್ ಸೇರಿದಂತೆ ವಿವಿಧ ಧಾರ್ಮಿಕ ಪದ್ಧತಿಗಳನ್ನು ಅನುಸರಿಸಲು ಅವಕಾಶ ನೀಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಪ್ರಕಟಿಸಿದ್ದಾರೆ.

ಬೆಂಗಳೂರಿನ ಸಮಗ್ರ ಶಿಕ್ಷಣ ಇಲಾಖೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಶಾಸಕ ರಿಜ್ವಾನ್ ಅರ್ಷದ್ ಅವರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಚಿವರು ಈ ವಿಷಯ ತಿಳಿಸಿದರು. ಮಕ್ಕಳ ಹಿತದೃಷ್ಟಿಯಿಂದ ಮತ್ತು ಅವರ ಕಲಿಕೆಗೆ ಯಾವುದೇ ಒತ್ತಡ ಉಂಟಾಗಬಾರದು ಎಂಬ ಉದ್ದೇಶದಿಂದ ಪಕ್ಷಾತೀತವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತು ಶೈಕ್ಷಣಿಕ ವರ್ಷದ ಆರಂಭದಲ್ಲೇ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದು ಅವರು ವಿವರಿಸಿದರು. ಇತ್ತೀಚೆಗೆ ಶಾಲೆಯೊಂದರಲ್ಲಿ ಜನಿವಾರ ಕತ್ತರಿಸಿದ ವಿಚಾರವಾಗಿ ಉಂಟಾಗಿದ್ದ ವಿವಾದದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ಮಹತ್ವ ಪಡೆದುಕೊಂಡಿದೆ.

ಇದೇ ವೇಳೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (NEET) ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ ಮಧು ಬಂಗಾರಪ್ಪ, ನೀಟ್ ಪರೀಕ್ಷೆಯ ಕಾರ್ಯವೈಫಲ್ಯದಿಂದಾಗಿ ಸುಮಾರು 25 ಲಕ್ಷ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಿದೆ. ಕೇವಲ ನಮ್ಮ ರಾಜ್ಯದ ಒಂದೂವರೆ ಲಕ್ಷ ಮಕ್ಕಳ ಭವಿಷ್ಯ ಹಾಳಾಗುತ್ತಿರುವುದು ಆತಂಕಕಾರಿ ವಿಚಾರ. ಮಕ್ಕಳ ಭವಿಷ್ಯಕ್ಕಾಗಿ ನಾವು ಬದ್ಧರಾಗಿದ್ದೇವೆ ಎಂದರು.

ಶಿಕ್ಷಣ ಕಾಯ್ದೆಯಡಿ ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡ ಹೇರಬಾರದು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಹೊಸ ಶೈಕ್ಷಣಿಕ ನೀತಿಯನ್ನು ಜಾರಿಗೊಳಿಸಲಾಗುವುದು. ಶಾಲೆಗೆ ಹೋಗುವ ಮಕ್ಕಳು ತಮ್ಮ ಸಾಂಪ್ರದಾಯಿಕ ಮತ್ತು ಧಾರ್ಮಿಕ ಹಕ್ಕುಗಳನ್ನು ಗೌರವಯುತವಾಗಿ ಪಾಲಿಸಲು ಈ ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

WhatsApp Group Join Now

Spread the love

Leave a Reply