ಯಾವ ಅರ್ಹತೆಯಲ್ಲಿ ಯತೀಂದ್ರ ಸಿದ್ದರಾಮಯ್ಯಗೆ ಸಚಿವಗಿರಿ ಕೊಟ್ರಿ: ಕಾಂಗ್ರೆಸ್ ನೊಳಗೇ ಅಸಮಾಧಾನ ಶುರು

Spread the love

ಡಿಕೆ ಶಿವಕುಮಾರ್ ಸಂಪುಟದಲ್ಲಿ ನಿನ್ನೆ ಸಚಿವರಾಗಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನೊಳಗೆ ಅಸಮಾಧಾನದ ಹೊಗೆ ಎದ್ದಿದೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಬಳಿಕ ಡಿಕೆ ಶಿವಕುಮಾರ್ ಸಿಎಂ ಎಂದು ಘೋಷಣೆ ಮಾಡಲಾಗಿತ್ತು.

ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಹಲವು ನಾಯಕರು ದೆಹಲಿಗೆ ಹೋಗಿ ಲಾಬಿ ನಡೆಸಿದ್ದರು. ಎರಡು ದಿನಗಳ ಕಾಲ ಹೈಕಮಾಂಡ್ ಜೊತೆ ಸಿದ್ದರಾಮಯ್ಯ-ಡಿಕೆಶಿ ಚರ್ಚೆ ನಡೆಸಿ 13 ಸಚಿವರ ಲಿಸ್ಟ್ ತಯಾರಿಸಲಾಗಿತ್ತು.

ಈ ಪಟ್ಟಿಯಲ್ಲಿ 10 ಮಂದಿ ಸಿದ್ದರಾಮಯ್ಯ ಸಂಪುಟದಲ್ಲಿದ್ದವರೇ ಆಗಿದ್ದರು. 3 ಮಂದಿ ಹೊಸಬರಿಗೆ ಅವಕಾಶ ನೀಡಲಾಗಿದೆ. ತಮಗೆ ಸಚಿವ ಸ್ಥಾನ ಸಿಗಬಹುದು ಎಂದು ನಿರೀಕ್ಷೆಯಲ್ಲಿದ್ದ ಹಲವು ನಾಯಕರಿಗೆ ನಿರಾಸೆಯಾಗಿದೆ.

ಮೊದಲ ಪಟ್ಟಿಯಲ್ಲಿ ತಮ್ಮ ಹೆಸರು ಇರಲಿಲ್ಲ ಎಂಬ ಬೇಸರ ಕೆಲವರಿಗಿದ್ದರೆ ಹೆಚ್ಚು ಅನುಭವವಿಲ್ಲದ ಯತೀಂದ್ರ ಸಿದ್ದರಾಮಯ್ಯಗೆ ಸಚಿವ ಸ್ಥಾನ ನೀಡಿದ್ದಕ್ಕೆ ಹಲವರಲ್ಲಿ ಅಸಮಾಧಾನವಿದೆ. ಯತೀಂದ್ರ ಇನ್ನೂ ಮೊದಲ ಬಾರಿ ಎಂಎಲ್ ಸಿಯಾಗಿದ್ದಾರೆ. ಸಿದ್ದರಾಮಯ್ಯ ಪುತ್ರ ಎನ್ನುವುದು ಬಿಟ್ಟರೆ ಇನ್ನೂ ರಾಜಕೀಯವಾಗಿ ಹೆಚ್ಚು ಸಾಧನೆ ಮಾಡಿಲ್ಲ. ಅವರಿಗಿಂತ ಅರ್ಹರು ಬೇರೆಯವರು ಇರಲಿಲ್ಲವೇ ಎಂದು ಕಾಂಗ್ರೆಸ್ ನೊಳಗೇ ಅಸಮಾಧಾನವೆದ್ದಿದೆ. ಈ ಕಿಡಿ ಮುಂದಿನ ಹಂತದಲ್ಲಿ ದೊಡ್ಡದಾಗದಂತೆ ನೋಡಿಕೊಳ್ಳುವ ಸವಾಲು ಕಾಂಗ್ರೆಸ್ ನಾಯಕರದ್ದಾಗಿದೆ.

WhatsApp Group Join Now

Spread the love

Leave a Reply