ನೂತನ ಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಸಂಪುಟದಲ್ಲಿ ಖಾತೆ ಕ್ಯಾತೆಗೆ ಅಂತ್ಯವೇ ಇಲ್ಲದಂತಾಗಿದೆ. ಖಾತೆ ಹಂಚಿಕೆಯಾದ ದಿನದಿಂದಲೇ ಕ್ಯಾತೆ ಶುರುವಾಗಿದೆ. ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ ಮುಗೀತು ಅನ್ನೋ ಅಷ್ಟರಲ್ಲಿ ಕಾಂಗ್ರೆಸ್ ಹೈಕಮಾಂಡ್ಗೆ ಮತ್ತೊಂದು ಟೆನ್ಶನ್ ಶುರುವಾಗಿದೆ.
ಸಮಾಜ ಕಲ್ಯಾಣ ಇಲಾಖೆಗೆ ಬೇಡಿಕೆ ಇಟ್ಟ ಕೆ.ಹೆಚ್. ಮುನಿಯಪ್ಪ
ಕಾಂಗ್ರೆಸ್ನ ಹಿರಿಯ ಸಚಿವ ಕೆ.ಹೆಚ್. ಮುನಿಯಪ್ಪ ಸಮಾಜ ಕಲ್ಯಾಣ ಇಲಾಖೆಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಇಂದು ಬೆಂಗಳೂರಿಗೆ ಆಗಮಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಂದೆ ಕೆ.ಹೆಚ್. ಮುನಿಯಪ್ಪ ಅವರು ಸಮಾಜ ಕಲ್ಯಾಣ ಇಲಾಖೆಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ನೀವು ಬಿಟ್ಟು ಕೊಟ್ಟರೆ ನಿಮ್ಮ ಮಗಳನ್ನು ಮಂತ್ರಿ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರಂತೆ.
ಸಮುದಾಯದ ಕೆಲಸ ಮಾಡಬೇಕೆಂದು ಬೇಡಿಕೆ
ಇದಕ್ಕೆ ಪ್ರತಿಯಾಗಿ ಕೆ.ಹೆಚ್. ಮುನಿಯಪ್ಪ ಅವರು ನಮ್ಮದು ಮುಗಿಯುತ್ತಿದೆ, ಸಮಾಜ ಕಲ್ಯಾಣ ಖಾತೆ ಕೊಡಿಸಿ, ಸಮುದಾಯದ ಕೆಲಸ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದು, ಸಂಪುಟ ವಿಸ್ತರಣೆ ಸಮಯದಲ್ಲಿ ನೋಡೋಣ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎನ್ನಲಾಗಿದೆ.
ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ
ಈ ಬಗ್ಗೆ ಮಾತನಾಡಿರುವ ಕೆ.ಹೆಚ್. ಮುನಿಯಪ್ಪ ಅವರು, ‘ನಾನು ಆಹಾರ ಇಲಾಖೆ ಅಧಿಕಾರ ಸ್ವೀಕಾರ ಮಾಡಿದ್ದೇನೆ. ಅಧಿಕಾರಿಗಳ ಸಭೆಯನ್ನ ನಡೆಸಿದ್ದೇನೆ. ಖಾತೆ ಬದಲಾವಣೆಗೆ ಹೈಕಮಾಂಡ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ರಾಹುಲ್ ಗಾಂಧಿ ಗಮನಕ್ಕೂ ತಂದಿದ್ದೇನೆ. ಹೈಕಮಾಂಡ್ ಹೇಳಿದ ಹಾಗೆ ನಾನು ಮಾಡು ನಾನು ಕಾಂಗ್ರೆಸ್ನ ಶಿಸ್ತಿನ ಸಿಪಾಯಿ, ಡಿಸಿಎಂ ಮಾಡುವ ವಿಚಾರ ನಮ್ಮ ಕಾರ್ಯಕರ್ತರು ಡಿಮ್ಯಾಂಡ್ ಮಾಡಿದ್ದಾರೆ. ಅದು ಅವರ ಇಚ್ಛೆ’ ಎಂದು ಹೇಳಿದರು.
ದೆಹಲಿಯಲ್ಲಿರುವ ಕೃಷ್ಣಭೈರೇಗೌಡ
ಈ ಹಿಂದೆ ಕಂದಾಯ ಸಚಿವರಾಗಿದ್ದ ಕೃಷ್ಣ ಭೈರೇಗೌಡರಿಗೆ ಈ ಬಾರಿ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಲಾಗಿದೆ. ಆದ್ರೆ ಖಾತೆಯಲ್ಲಿ ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಮತ್ತು ಬಿಎಂಆರ್ಡಿಎ (ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ) ಇಲಾಖೆಗಳನ್ನ ಸೇರಿಸಿಲ್ಲ. ಹೀಗಾಗಿ ಸಚಿವ ಕೃಷ್ಣಭೈರೇಗೌಡ ಅವ್ರು ಅಧಿಕಾರವಹಿಸಿಕೊಳ್ಳಲು ಹಿಂದೇಟು ಹಾಕ್ತಿದ್ದು, ಖಾತೆ ಹಂಚಿಕೆ ವಿಚಾರವಾಗಿ ಕೃಷ್ಣ ಭೈರೇಗೌಡ ಅವರು ಹೈಕಮಾಂಡ್ ಭೇಟಿಯಾಗಲು ದೆಹಲಿಗೆ ತೆರಳಿದ್ದಾರೆ.
ಸರ್ಕಾರದಲ್ಲಿ ಮುಗಿಯದ ಖಾತೆ ಕ್ಯಾತೆ
ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸರ್ಕಾರದಲ್ಲಿ ಖಾತೆ ಹಂಚಿಕೆ ವಿಚಾರ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೆಲವು ಸಚಿವರು ಖಾತೆ ಹಂಚಿಕೆ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಈ ಬೆನ್ನಲ್ಲೇ ಡಿಸಿಎಂ ಪರಮೇಶ್ವರ್ ಅವರು ತಮಗೆ ಸಿಗದ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಸುದ್ದಿ ಸದ್ದು ಮಾಡ್ತಿದೆ. ಡಿಸಿಎಂ ಡಾ.ಜಿ. ಪರಮೇಶ್ವರ್ ಅವರು ತಮಗೆ ಹಂಚಿಕೆ ಆಗದೆ ಇರುವ ಮುಜರಾಯಿ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಚರ್ಚೆಗೆ ಕಾರಣವಾಗಿದ್ದಾರೆ.
ಡಾ. ಜಿ. ಪರಮೇಶ್ವರ್ ಅವರಿಗೆ ಈಗಾಗಲೇ ಎರಡು ಖಾತೆಗಳು ನೀಡಲಾಗಿದೆ. ಕಂದಾಯ ಹಾಗೂ ಕ್ರೀಡಾ ಇಲಾಖೆಗಳ ಜವಾಬ್ದಾರಿಯನ್ನು ಪರಮೇಶ್ವರ್ ಅವರಿಗೆ ನೀಡಲಾಗಿದೆ. ಆದ್ರೆ, ಸಿಎಂ ಡಿ.ಕೆ. ಶಿವಕುಮಾರ್ ಅವರು ಮುಜರಾಯಿ ಇಲಾಖೆಯನ್ನು ಇನ್ನೂ ಯಾರಿಗೆ ಹಂಚಿಕೆ ಮಾಡಿಲ್ಲ, ಹೀಗಿರುವಾಗಲೇ ಪರಮೇಶ್ವರ್ ಅವರು ಮುಜರಾಯಿ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ್ದು ಕುತೂಹಲ ಮೂಡಿಸಿದೆ.
ಡಿಸಿಎಂ ಪರಮೇಶ್ವರ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸುವ ಮೂಲಕ ಮುಜರಾಯಿ ಇಲಾಖೆ ಮೇಲೆ ಕಣ್ಣಿಟ್ರಾ ಅನ್ನೋ ಚರ್ಚೆ ಜೋರಾಗಿದೆ. ಅತ್ತ ಮುಜರಾಯಿ ಇಲಾಖೆಯ ಸಿಗುವ ನಿರೀಕ್ಷೆಯಲ್ಲಿ ಸಚಿವ ರಾಮಲಿಂಗರೆಡ್ಡಿ ಇದ್ದು, ಜಲಸಂಪನ್ಮೂಲ ಖಾತೆ ಮೇಲೆ ಅಸಮಾಧಾನ ಇದ್ದರೂ ಕೂಡ ಮುಂದೆ ಖಾತೆ ಬದಲಾವಣೆ ಜೊತೆಗೆ ಮುಜರಾಯಿ ಸಿಗುತ್ತೆಂಬ ವಿಶ್ವಾಸದಲ್ಲಿದ್ದಾರೆ. ಈ ನಡುವೆ ಪರಮೇಶ್ವರ್ ಅವರು ಅದೇ ಇಲಾಖೆಯ ಸಭೆ ನಡೆಸಿ, ಈಗ ಮತ್ತಷ್ಟು ಚರ್ಚೆಗೆ ಕಾರಣರಾಗಿದ್ದಾರೆ.
ಮತ್ತದೇ ಖಾತೆಗಾಗಿ ಪಟ್ಟು ಹಿಡಿದ ಮುನಿಯಪ್ಪ! ದೆಹಲಿಯಲ್ಲೇ ಠಿಕಾಣಿ ಹೂಡಿದ ಕೃಷ್ಣ ಭೈರೇಗೌಡ!
WhatsApp Group
Join Now