ಪರೀಕ್ಷಾ ಕೇಂದ್ರದಲ್ಲಿ ವೆಬ್‌ಕ್ಯಾಸ್ಟಿಂಗ್ ಸ್ಥಗಿತಗೊಳಿಸಿ ಕಾಪಿ ಹೊಡೆಸುವ ಮೂಲಕ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿ ದಾಖಲೆಯ ಫಲಿತಾಂಶ ಪಡೆಯಲಾಗಿದೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಆರೋಪಿಸಿದ್ದಾರೆ. ಅವರ ಈ ಹೇಳಿಕೆ ನಾಡಿನ ಮಕ್ಕಳು ಶೈಕ್ಷಣಿಕ ಸಾಧನೆ ಒಪ್ಪಲಾಗದೇ ಮಾಡಿರುವ ಉದ್ದೇಶಪೂರ್ವಕ ಅಪಮಾನ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಕಿಡಿಕಾರಿದರು.
‘ಎಚ್.ವಿಶ್ವನಾಥ್ ಅವರಿಗೆ ವಯಸ್ಸಾಗಿದೆ. ಅವರು ಮಕ್ಕಳು ಇದ್ದಂತೆ. ಹೀಗಾಗಿ ಏನೇನೊ ಬಡಬಡಿಸುತ್ತಾರೆ. ಅದನ್ನು ಅರಳುಮರಳು ಎಂದು ಹೇಳಲಾಗುವುದಿಲ್ಲ. ಅವರ ವಯಸ್ಸಿಗೆ ಬೆಲೆ ಕೊಟ್ಟು ಕ್ಷಮಿಸಿ ಬಿಡೋಣ’ ಎಂದು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಡೀ ದೇಶದಲ್ಲಿ ಮೊದಲ ಬಾರಿಗೆ ಪರೀಕ್ಷಾ ಕೋಠಡಿಯಲ್ಲಿ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಜಾರಿಗೊಳಿಸಿದ್ದೇ ಮಧು ಬಂಗಾರಪ್ಪ. ಹಾಗಿದ್ದ ಮೇಲೆ ಕ್ಯಾಮೆರಾ ಹಾಕಿ ಕಾಪಿ ಹೊಡೆಸಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ‘ಪರೀಕ್ಷಾ ಕೊಠಡಿಯಲ್ಲಿ ವೆಬ್‌ಕ್ಯಾಸ್ಟಿಂಗ್ ಕರ್ನಾಟಕದ್ದು ಮಾದರಿ ವ್ಯವಸ್ಥೆ. ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಕೂಡ ನಮ್ಮ ಬಳಿಯೇ ವರದಿ ಪಡೆದು ವೆಬ್‌ಕ್ಯಾಸ್ಟಿಂಗ್ ಹಾಗೂ ಎರಡು ಬಾರಿ ಪರೀಕ್ಷೆ ನಡೆಸುವ ವ್ಯವಸ್ಥೆ ಅಳವಡಿಸಿಕೊಂಡಿದೆ’ ಎಂದು ಹೇಳಿದರು.
‘ಎಚ್.ವಿಶ್ವನಾಥ್ ನನ್ನ ಶಿಕ್ಷಣದ ಪ್ರಮಾಣಪತ್ರ ಕೇಳಿದ್ದಾರೆ. ಬಿಜೆಪಿ, ಕಾಂಗ್ರೆಸ್ ಎಲ್ಲಿಯೂ ಸಲ್ಲದೇ ದಿಕ್ಕು ದೆಸೆ ಇಲ್ಲದಂತಾಗಿರುವ ವಿಶ್ವನಾಥ್ ಅವರಿಗೆ ನಾನೇ ಸರ್ಟಿಫಿಕೇಟ್ ಕಳಿಸಿಕೊಡುವೆ’ ಎಂದು ಛೇಡಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಅಂಕವನ್ನು 35ರಿಂದ 33ಕ್ಕೆ ಇಳಿಸಿದ್ದರ ಬಗ್ಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕೆ ಮಾಡಿದ್ದಾರೆ.
ಈ ಬಾರಿ ಶೇ 33ಕ್ಕೆ ತೇರ್ಗಡೆ ಅಂಕ ನಿಗದಿಗೊಳಿಸಿದ್ದರಿಂದ ಉತ್ತೀರ್ಣರಾದ ಮಕ್ಕಳ ಸಂಖ್ಯೆ ಪರೀಕ್ಷಾ ಫಲಿತಾಂಶದ ಶೇ 0.14 ಮಾತ್ರ. ವಾಸ್ತವವಾಗಿ ತೇರ್ಗಡೆ ಅಂಕವನ್ನು ಕೇಂದ್ರ ಸರ್ಕಾರದ ನಿಯಮಾವಳಿಯಂತೆ ಅಳವಡಿಸಿದ್ದೇವೆ. ಕೇರಳದಲ್ಲಿ 30 ಅಂಕ ಪಡೆದರೆ ತೇರ್ಗಡೆಯಾಗುತ್ತಾರೆ. ಅದು ಬಸವರಾಜ ಬೊಮ್ಮಾಯಿ ಅವರಿಗೆ ಗೊತ್ತಿಲ್ಲವೇ ಎಂದು ಮಧು ಬಂಗಾರಪ್ಪ ಪ್ರಶ್ನಿಸಿದರು.
ಶಿಗ್ಗಾವಿಯಲ್ಲಿ ತಮ್ಮ ಮಗನನ್ನು ವಿಧಾನಸಭೆ ಚುನಾವಣೆಗೆ ನಿಲ್ಲಿಸಿ ಹೀನಾಯವಾಗಿ ಸೋಲಿಸಿರುವ ಬೊಮ್ಮಾಯಿ, ಈಗ ನಾಚಿಕೆ ಇಲ್ಲದೇ ನಾಡಿನ ಮಕ್ಕಳ ಸಾಧನೆಯನ್ನು ಅಪಮಾನಿಸುತ್ತಿದ್ದಾರೆ. ಅವರಿಗೆ ಮಕ್ಕಳ ಶಾಪ ತಟ್ಟಲಿದೆ ಎಂದು ಹೇಳಿದರು.
ಜನಿವಾರದ ವಿಚಾರದಲ್ಲಿ ಸಮುದಾಯವೊಂದರ ಭಾವನೆಗಳಿಗೆ ಧಕ್ಕೆ ತಂದಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಾರೊ, ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಮಾಡಿದ್ದಾರೋ ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು.
ಎಚ್.ವಿಶ್ವನಾಥ್ ಅವರಿಗೆ ವಯಸ್ಸಾಗಿದೆ. ಅರಳುಮರಳು, ಏನೇನೊ ಬಡಬಡಿಸುತ್ತಾರೆ, ಕ್ಷಮಿಸಿಬಿಡೋಣ : ಸಚಿವ ಮಧು ಬಂಗಾರಪ್ಪ
WhatsApp Group
Join Now