ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬ್ರಿಟಿಷ್ ಪೌರತ್ವದ ಕುರಿತಾದ ದೂರಿನ ವಿಚಾರಣೆ ನಡೆಸಿದ ಲಕ್ನೋ ಹೈಕೋರ್ಟ್, ಈ ಬಗ್ಗೆ ಎಫ್‌ಐಆರ್ ದಾಖಲಿಸಿ ಸಮಗ್ರ ತನಿಖೆ ನಡೆಸುವಂತೆ ಶುಕ್ರವಾರ ಮಹತ್ವದ ಆದೇಶ ನೀಡಿದೆ. ರಾಹುಲ್ ಗಾಂಧಿ ಅವರ ಭಾರತೀಯ ಪೌರತ್ವದ ಬಗ್ಗೆ ಗಂಭೀರ ಪ್ರಶ್ನೆ ಎತ್ತಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ಈ ತೀರ್ಪನ್ನು ಪ್ರಕಟಿಸಿದೆ.
ಅರ್ಜಿ ವಜಾ ಮಾಡಿದ್ದ ಕೆಳಹಂತದ ನ್ಯಾಯಾಲಯ
ಈ ಹಿಂದೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ವಿಘ್ನೇಶ್ ಶಿಶಿರ್ ಎಂಬುವವರು ಲಕ್ನೋದ ಎಂಪಿ/ಎಂಎಲ್‌ಎ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಆದರೆ ಜನವರಿ 28ರಂದು ಕೆಳಹಂತದ ನ್ಯಾಯಾಲಯವು, ಪೌರತ್ವಕ್ಕೆ ಸಂಬಂಧಿಸಿದ ವಿಷಯಗಳನ್ನು ನಿರ್ಧರಿಸಲು ತನಗೆ ಅಧಿಕಾರವಿಲ್ಲ ಎಂಬ ಕಾರಣ ನೀಡಿ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕಸದಸ್ಯ ಪೀಠವು, ಕೆಳಹಂತದ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸಿ ತನಿಖೆಗೆ ಹಸಿರು ನಿಶಾನೆ ತೋರಿಸಿದೆ.
ಅರ್ಜಿದಾರ ವಿಘ್ನೇಶ್ ಶಿಶಿರ್ ಅವರು ರಾಹುಲ್ ಗಾಂಧಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಭಾರತೀಯ ನ್ಯಾಯ ಸಂಹಿತೆ (BNS), ಅಧಿಕೃತ ರಹಸ್ಯಗಳ ಕಾಯ್ದೆ, ವಿದೇಶಿಯರ ಕಾಯ್ದೆ ಮತ್ತು ಪಾಸ್‌ಪೋರ್ಟ್ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ. ರಾಹುಲ್ ಗಾಂಧಿ ಅವರು ಬ್ರಿಟಿಷ್ ಪೌರತ್ವ ಹೊಂದಿದ್ದಾರೆ ಎಂಬುದಕ್ಕೆ ತಮ್ಮ ಬಳಿ ಬ್ರಿಟಿಷ್ ಸರ್ಕಾರದ ಕೆಲವು ದಾಖಲೆಗಳು ಮತ್ತು ಇಮೇಲ್‌ಗಳು ಪುರಾವೆಯಾಗಿವೆ ಎಂದು ಅವರು ವಾದಿಸಿದ್ದಾರೆ. ಒಂದು ವೇಳೆ ರಾಹುಲ್ ಗಾಂಧಿ ಅವರು ವಿದೇಶಿ ಪೌರತ್ವ ಹೊಂದಿದ್ದರೆ, ಅವರು ಭಾರತದಲ್ಲಿ ಚುನಾವಣೆ ಸ್ಪರ್ಧಿಸಲು ಅಥವಾ ಲೋಕಸಭಾ ಸದಸ್ಯರಾಗಿ ಮುಂದುವರಿಯಲು ಅರ್ಹರಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ರಾಹುಲ್ ಗಾಂಧಿಗೆ ಸಂಕಷ್ಟ
ಮೊದಲಿಗೆ ಈ ದೂರನ್ನು ರಾಯ್ ಬರೇಲಿಯ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಲಾಗಿತ್ತು, ಆದರೆ ನಂತರ ಹೈಕೋರ್ಟ್ ಈ ಪ್ರಕರಣವನ್ನು ಲಕ್ನೋಗೆ ವರ್ಗಾಯಿಸಿತ್ತು. ಈಗ ಹೈಕೋರ್ಟ್ ನೀಡಿರುವ ಈ ಆದೇಶದಿಂದಾಗಿ ರಾಹುಲ್ ಗಾಂಧಿ ಅವರಿಗೆ ಹೊಸ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಪೌರತ್ವದಂತಹ ಸೂಕ್ಷ್ಮ ವಿಷಯದಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಕೋರ್ಟ್ ಸೂಚಿಸಿರುವುದು ರಾಜಕೀಯ ವಲಯದಲ್ಲೂ ಭಾರಿ ಚರ್ಚೆಗೆ ಗ್ರಾಸವಾಗಿದೆ.
ರಾಹುಲ್ ಗಾಂಧಿಗೆ ಕಾನೂನು ಸಂಕಷ್ಟ, ಎಫ್‌ಐಆರ್ ದಾಖಲಿಸಿ ತನಿಖೆಗೆ ಲಕ್ನೋ ಹೈಕೋರ್ಟ್ ಆದೇಶ
WhatsApp Group
Join Now