ಸೆಪ್ಟೆಂಬರ್ 16 ರಂದು ಈಶಾನ್ಯ ಬೆಂಗಳೂರಿನಲ್ಲಿ 13 ವರ್ಷದ ಬಾಲಕನೊಬ್ಬನನ್ನು ಹಣಕ್ಕಾಗಿ ಅಪಹರಿಸಿ, ಪಕ್ಕದ ಮನೆಯವನೇ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾಸ್ಕರ್ ರೆಡ್ಡಿ (28) ಎಂದು ಗುರುತಿಸಲಾದ ಆರೋಪಿಯನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ.
ಯಲಹಂಕದ ವಿನಾಯಕನಗರದಲ್ಲಿ ವಾಸವಿದ್ದ ತನ್ನ 13 ವರ್ಷದ ನೆರೆ ಮನೆಯ ಬಾಲಕನನ್ನು ರೆಡ್ಡಿ ಅಪಹರಿಸಿ, ಬಾಗಲೂರು ಬಳಿಯ ನಿರ್ಮಾಣ ಹಂತದ ಸ್ಥಳವೊಂದರ ಸಮೀಪ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿಯ ಕಾರು ಅಪಘಾತಕ್ಕೀಡಾದ ನಂತರ ಈ ಅಪರಾಧ ಕೃತ್ಯ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, ರೆಡ್ಡಿ ಕೆಲ ತಿಂಗಳ ಹಿಂದೆ ಲಂಡನ್ನಿಂದ ಸ್ನಾತಕೋತ್ತರ ಪದವಿ ಮುಗಿಸಿ ಮರಳಿದ್ದನು. ಅವನು ವೈಟ್ಫೀಲ್ಡ್ನ ಖಾಸಗಿ ಕಂಪನಿಯೊಂದರ ಹಣಕಾಸು ವಿಭಾಗದಲ್ಲಿ ಕೆಲಸಕ್ಕೆ ಸೇರಿದ್ದನು. ತನ್ನ ಕುಟುಂಬದ ಸಾಲವನ್ನು ತೀರಿಸಲು ನೆರೆಯವನಿಂದ ಹಣ ವಸೂಲಿ ಮಾಡುವ ಉದ್ದೇಶದಿಂದ ರೆಡ್ಡಿ ಈ ಅಪಹರಣ ಮತ್ತು ಹತ್ಯೆಯ ಸಂಚು ರೂಪಿಸಿದ್ದನು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಾರು ಚಲಾಯಿಸುವ ಆಮಿಷ
ಸೆಪ್ಟೆಂಬರ್ 16 ರ ರಾತ್ರಿ, ರೆಡ್ಡಿ ತನ್ನ ಸ್ನೇಹಿತನೊಬ್ಬನೊಂದಿಗೆ ಸೇರಿ, ಪಟಾಕಿ ಖರೀದಿಸಲು ಬರುವಂತೆ ಬಾಲಕನನ್ನು ಕರೆದೊಯ್ದನು. ಅಲ್ಲದೆ, ಕಾರು ಚಲಾಯಿಸುವ ಅವಕಾಶವನ್ನೂ ನೀಡುವುದಾಗಿ ಆಮಿಷವೊಡ್ಡಿದರು. ಈ ಆಮಿಷಕ್ಕೆ ಒಳಗಾದ ಬಾಲಕ ಅವರೊಂದಿಗೆ ಹೋಗಿದ್ದಾನೆ. ನಂತರ ಅವರು ಬಾಲಕನನ್ನು ಬಾಗಲೂರು ಬಳಿಯ ಸ್ಥಳವೊಂದಕ್ಕೆ ಕರೆದೊಯ್ದು, ಕೈಕಾಲುಗಳನ್ನು ಕಟ್ಟಿದ್ದಾರೆ.
ಬಾಲಕನಿಗೆ ಹಲ್ಲೆ ಮಾಡಲಾಗಿದೆ ಎಂದು ಬಿಂಬಿಸಲು ಆರೋಪಿಗಳು ಅವನ ತಲೆ ಮತ್ತು ದೇಹವನ್ನು ಬ್ಯಾಂಡೇಜ್ಗಳಿಂದ ಸುತ್ತಿದ್ದರು. ಹಣ ನೀಡದಿದ್ದರೆ ಅಪಹರಣಕಾರರು ತನ್ನನ್ನು ಕೊಲ್ಲುತ್ತಾರೆ ಎಂದು ಬಾಲಕ ತನ್ನ ತಂದೆಯಲ್ಲಿ ಅಂಗಲಾಚುವ ವಿಡಿಯೋವೊಂದನ್ನು ಅವರು ಚಿತ್ರೀಕರಿಸಿಕೊಂಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ಮರುದಿನ ಆ ವಿಡಿಯೋವನ್ನು ಬಾಲಕನ ಕುಟುಂಬಕ್ಕೆ ಕಳುಹಿಸಲು ಅವರು ಪ್ಲಾನ್ ರೂಪಿಸಿದ್ದರು. ಅಧಿಕಾರಿಯ ಪ್ರಕಾರ, ಬಾಲಕನು ಆರೋಪಿಗಳ ಎಲ್ಲಾ ಸೂಚನೆಗಳನ್ನು ಪಾಲಿಸಿದರೂ ಮತ್ತು ಮನೆಗೆ ಹೋಗಲು ಬಿಡುವಂತೆ ಅವರಲ್ಲಿ ಅಂಗಲಾಚಿದರೂ, ರೆಡ್ಡಿ ಮತ್ತು ಆತನ ಸ್ನೇಹಿತ ಮರದ ಕೊಂಬೆಯಿಂದ ಆತನ ತಲೆಗೆ ಹೊಡೆದು ಹಲ್ಲೆ ಮಾಡಿದ್ದಾರೆ. ನಂತರ ಇಟ್ಟಿಗೆಯಿಂದ ಆತನ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಈ ಕೊಲೆಯು ಪೂರ್ವಯೋಜಿತವಾಗಿತ್ತು. ಬಾಲಕನನ್ನು ಬಿಟ್ಟುಬಿಟ್ಟರೆ, ಅಪಹರಣಕಾರನ ಗುರುತು ಆತನ ಪೋಷಕರಿಗೆ ತಿಳಿಯುತ್ತದೆ ಎಂಬ ಭಯ ಅವನಿಗಿತ್ತು. ಬಾಲಕನನ್ನು ಅಪಹರಿಸಿ, ವಿಡಿಯೋ ಚಿತ್ರೀಕರಿಸಿ, ಕೊಲೆ ಮಾಡಿ, ನಂತರ ಹಣದ ಬೇಡಿಕೆ ಇಡುವುದು ಅವರ ಯೋಜನೆಯಾಗಿತ್ತು ಎನ್ನಲಾಗಿದೆ.
ವಿಡಿಯೋ ಚಿತ್ರೀಕರಿಸಿದ ನಂತರ, ಆರೋಪಿಗಳು ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿ ಇರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ರೆಡ್ಡಿ ಮದ್ಯಪಾನದ ಅಮಲಿನಲ್ಲಿ ಇದ್ದನೆಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ವಾಪಸಾಗುವಾಗ, ಹುನ್ಸಮಾರನಹಳ್ಳಿ ಬಳಿ ಆತ ಹಲವಾರು ಕಾರುಗಳಿಗೆ ಡಿಕ್ಕಿ ಹೊಡೆದಿದ್ದಾನೆ. ನಂತರ ದಾರಿಹೋಕರು ಆತನ ಕಾರನ್ನು ತಡೆದು ಹಿಡಿದು ನಿಲ್ಲಿಸಿದ್ದರು.
ದಾರಿಹೋಕರು ಆತನನ್ನು ವಿಚಾರಿಸುತ್ತಿದ್ದಾಗ ಕಾರನ್ನು ಪರಿಶೀಲಿಸಿದ್ದಾರೆ. ನಂತರ ಬಾಲಕನ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಬಾಲಕನಿಗೆ ಅಪಘಾತ ಸಂಭವಿಸಿದೆ ಮತ್ತು ಆತನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇನೆ ಎಂದು ರೆಡ್ಡಿ ಹೇಳಿಕೊಂಡಿದ್ದಾನೆ. ತಕ್ಷಣವೇ ಜನರು ಪೊಲೀಸರಿಗೆ ಕರೆ ಮಾಡಿದ್ದಾರೆ.
ಸಾಲ ತೀರಿಸಲು ಕೃತ್ಯ
ತನ್ನ ಸಾಲವನ್ನು ತೀರಿಸಲು ಬಾಲಕನ ಪೋಷಕರಿಂದ ಹಣದ ಬೇಡಿಕೆ ಇಡಲು ರೆಡ್ಡಿ ಯೋಜಿಸುತ್ತಿದ್ದನೆಂದು ನಂತರದ ತನಿಖೆಯಿಂದ ತಿಳಿದುಬಂದಿದೆ. ಚಿಕ್ಕಜಾಲ ಪೊಲೀಸರು ಅಪಹರಣ ಮತ್ತು ಕೊಲೆಗೆ ಸಂಬಂಧಿಸಿದ ಬಿಎನ್ಎಸ್ (BNS) ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ (FIR) ದಾಖಲಿಸಿದ್ದಾರೆ. ಅವರು ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಸಾಲ ತೀರಿಸುವ ಕಾರಣಕ್ಕೆ ಪಕ್ಕದ ಮನೆಯ ಬಾಲಕನ ಕಿ*ಡ್ನಾಪ್, ಹ*ತ್ಯೆ , ಪ್ರಕರಣ ಬೆಳಕಿಗೆ ಬಂದಿದ್ದೇ ರೋಚಕ
WhatsApp Group
Join Now