ರಾಹುಲ್-ವಿಜಯ್ ಸೃಷ್ಟಿಸಿದ ದಾಖಲೆಗೆ ಇನ್‌ಸ್ಟಾಗ್ರಾಮ್ ಬ್ರೇಕ್ : ಕಾಂಗ್ರೆಸ್ ಆಕ್ರೋಶ, ಇನ್ಸ್ಟಾಗೆ ನಟಿ ರಮ್ಯಾ ಪ್ರಶ್ನೆ!

Spread the love

ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಜೊತೆಗೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ತೆಗೆದುಕೊಂಡಂತಹ ಫೋಟೋ ಮತ್ತು ರೀಲ್ ಅನ್ನು ಇನ್‌ಸ್ಟಾಗ್ರಾಮ್ ನಿರ್ಬಂಧಿಸಿರುವುದನ್ನು ಕಾಂಗ್ರೆಸ್ ಪಕ್ಷವು ವಿರೋಧಿಸಿದೆ.

ಕೇಂದ್ರ ಸರ್ಕಾರದ ಹಸ್ತಕ್ಷೇಪದಿಂದಾಗಿ ಫೋಟೋ ಮತ್ತು ರೀಲ್ ಅನ್ನು ಇನ್‌ಸ್ಟಾಗ್ರಾಮ್ ನಿರ್ಬಂಧಿಸಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರು ಗಂಭೀರವಾಗಿ ಆರೋಪಿಸಿದ್ದಾರೆ.

ವಿಪಕ್ಷದ ಧ್ವನಿಯನ್ನು ಅಡಗಿಸಲು ಸರ್ಕಾರವು ಇಂತಹ ಕ್ರಮಗಳಿಗೆ ಮುಂದಾಗುತ್ತಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ. ಲಕ್ಷಾಂತರ ವೀಕ್ಷಣೆ ಕಂಡಿದ್ದ ಪೋಸ್ಟ್ಗಳು ಇದೀಗ ಮಾಯವಾಗಿರುವುದು ರಾಜಕೀಯ ಸಂಘರ್ಷಕ್ಕೆ ನಾಂದಿ ಆಡಿದೆ.

ಆದರೆ, ಈ ಆರೋಪಗಳನ್ನು ನಿರಾಕರಿಸಿರುವ ಕೇಂದ್ರ ಸರ್ಕಾರವು, ಫೋಟೋ ಮತ್ತು ರೀಲ್ ಬ್ಲಾಕ್ ಆಗಲೂ ಹಾಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದು ಇನ್‌ಸ್ಟಾಗ್ರಾಮ್ ಸಂಸ್ಥೆಯ ತಾಂತ್ರಿಕ ಸಮಸ್ಯೆಯಿಂದ ಸಂಭವಿಸಿದೆ ಎಂದು ಸರ್ಕಾರ ವಿವರಣೆ ನೀಡಿದೆ. ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸರ್ಕಾರದ ಹಸ್ತಕ್ಷೇಪದ ಕುರಿತು ದೊಡ್ಡ ಮಟ್ಟದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಅಷ್ಟಕ್ಕೂ ನಡೆದಿದ್ದೇನು?

ನಟ ಹಾಗೂ ಟಿವಿಕೆ ನಾಯಕ ವಿಜಯ್ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ನಿನ್ನೆ (ಮೇ 10) ಪ್ರಮಾಣ ವಚನ ಸ್ವೀಕರಿಸಿದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ ಅವರು ವಿಜಯ್ ಜೊತೆಗೆ ತೆಗೆದುಕೊಂಡ ಫೋಟೋ ಮತ್ತು ರೀಲ್ಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಕೇವಲ ಒಂದು ಗಂಟೆಯೊಳಗೆ ಈ ರೀಲ್ ಅನ್ನು 1.2 ಕೋಟಿ ಜನರು ವೀಕ್ಷಿಸಿದ್ದರೆ, ರಾಹುಲ್ ಮತ್ತು ವಿಜಯ್ ಒಟ್ಟಿಗೆ ಇರುವ ಚಿತ್ರವನ್ನು ಬರೋಬ್ಬರಿ 4.6 ಕೋಟಿ ಜನರು ವೀಕ್ಷಿಸಿದ್ದರು.
ಫೋಟೋ ಮತ್ತು ರೀಲ್ ಇಷ್ಟೊಂದು ದಾಖಲೆ ಮಟ್ಟದ ಜನಪ್ರಿಯತೆ ಗಳಿಸಿದ ಬೆನ್ನಲ್ಲೇ ಇನ್‌ಸ್ಟಾಗ್ರಾಮ್ ಈ ಪೋಸ್ಟ್‌ಗಳನ್ನು ಹಠಾತ್ತನೆ ತೆಗೆದುಹಾಕಿದ್ದು, ಇದು ವಿಪಕ್ಷದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಈ ವಿದ್ಯಮಾನವು ಈಗ ರಾಜಕೀಯ ವಲಯದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಧ್ವನಿ ಎತ್ತಿದ ರಮ್ಯಾ

ರಾಹುಲ್ ಗಾಂಧಿ ಹಾಗೂ ವಿಜಯ್ ಜತೆಗಿರುವ ಫೋಟೋ ಮತ್ತು ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ಬ್ಲಾಕ್ ಮಾಡಿದೆ ಎಂಬುದಕ್ಕೆ ಸಾಕ್ಷಿಯಾಗಿ ನಟಿ ರಮ್ಯಾ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ. ವಿಜಯ್ ಜೊತೆಗಿನ ರಾಹುಲ್ ಜೀ ಸಂಭ್ರಮಾಚರಣೆಯ ಪೋಸ್ಟ್ಗಳನ್ನು ಇನ್ಸ್ಟಾಗ್ರಾಮ್ ಬ್ಲಾಕ್ ಮಾಡಿದೆ. ಭಾರತದಲ್ಲಿ ಈ ಪೋಸ್ಟ್ ದೊರೆಯುವುದಿಲ್ಲ ಎಂಬ ಸೂಚನೆ ಬರುತ್ತಿದೆ. ಈ ರೀತಿ ಏಕೆ ಆಯಿತು ಎಂದು ರಮ್ಯಾ ಪ್ರಶ್ನೆ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಸ್ಪಷ್ಟನೆ

ಈ ವಿಷಯದಲ್ಲಿ ತನ್ನ ಮೇಲಿನ ಎಲ್ಲಾ ಆರೋಪಗಳನ್ನು ಕೇಂದ್ರ ಸರ್ಕಾರವು ಕಡಾಖಂಡಿತವಾಗಿ ನಿರಾಕರಿಸಿದೆ. ರಾಹುಲ್ ಗಾಂಧಿ ಮತ್ತು ವಿಜಯ್ ಅವರ ಪೋಸ್ಟ್‌ಗಳನ್ನು ತೆಗೆದುಹಾಕುವಲ್ಲಿ ಸರ್ಕಾರದ ಯಾವುದೇ ಪಾತ್ರವಿಲ್ಲ ಮತ್ತು ಈ ಬೆಳವಣಿಗೆಗೂ ತಮಗೂ ಸಂಬಂಧವಿಲ್ಲ ಎಂದು ಕೇಂದ್ರವು ಸ್ಪಷ್ಟಪಡಿಸಿದೆ. ಇದು ಕೇವಲ ಇನ್‌ಸ್ಟಾಗ್ರಾಮ್ ಸಂಸ್ಥೆಯ ಕಡೆಯಿಂದ ಉಂಟಾದ ತಾಂತ್ರಿಕ ದೋಷದಿಂದ ಸಂಭವಿಸಿದ ಘಟನೆಯೇ ಹೊರತು, ಯಾವುದೇ ಹಸ್ತಕ್ಷೇಪ ನಡೆದಿಲ್ಲ ಎಂಬುದು ಸರ್ಕಾರದ ವಿವರಣೆಯಾಗಿದೆ.

WhatsApp Group Join Now

Spread the love

Leave a Reply