ಪತ್ನಿಯ ನಡತೆಯ ಮೇಲೆ ಸಂಶಯಗೊಂಡು ಆಕೆಯ ಕೊಲೆಗೆ ಯತ್ನಿಸಿದ ಪತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಬೆಂಗಳೂರಿನ ದಾಸನಪುರದಲ್ಲಿ ನಡೆದಿದೆ. ಸಾರ್ವಜನಿಕರ ಸಮಯಪ್ರಜ್ಞೆಯಿಂದಾಗಿ ಮಹಿಳೆಯೊಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ
ನಂತರ ಸ್ಥಳಕ್ಕೆ ಬಂದ ಮಾದನಾಯಕನಹಳ್ಳಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಏನಿದು ಘಟನೆ?
ಮೂಲತಃ ಬಿಹಾರದ ದಂಪತಿಗಳಾದ ಸೋನಾಲಿ ಮತ್ತು ಸಂಜಯ್ ಅವರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದು ಇಲ್ಲಿನ ಗಾರ್ಮೆಂಟ್ಸ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರಿಬ್ಬರಿಗೂ ಇದು ಎರಡನೇ ವಿವಾಹವಾಗಿತ್ತು ಎನ್ನಲಾಗಿದೆ. ಸಂಜಯ್ ಸದಾ ಮದ್ಯಪಾನ ಮಾಡಿ ಸೋನಾಲಿ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ.
ಪತಿಯ ಕಿರುಕುಳ ತಾಳಲಾರದೆ ಸೋನಾಲಿ ಅವರು ಬೇರೆಯಾಗಿ ವಾಸಿಸುವ ನಿರ್ಧಾರ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಸಂಜಯ್, ತನ್ನ ಬೈಕ್‌ನಲ್ಲಿ ಬಂದು ರಸ್ತೆಯಲ್ಲೇ ಸೋನಾಲಿ ಜೊತೆ ಜಗಳವಾಡಿದ್ದಾನೆ. ವಾಗ್ವಾದ ತಾರಕಕ್ಕೇರಿದಾಗ ತನ್ನ ಬಳಿಯಿದ್ದ ಚಾಕು ತೆಗೆದು ಸೋನಾಲಿ ಕುತ್ತಿಗೆಯ ಬಳಿ ಹಿಡಿದು ಹಲ್ಲೆ ನಡೆಸಲು ಮುಂದಾಗಿದ್ದಾನೆ. ಇದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ತಕ್ಷಣವೇ ಧಾವಿಸಿ ಬಂದು ಸಂಜಯ್‌ನನ್ನು ತಡೆದಿದ್ದಾರೆ. ಚಾಕು ಕಸಿದುಕೊಂಡು ಮಹಿಳೆಯ ಪ್ರಾಣ ಕಾಪಾಡಿದ ಸ್ಥಳೀಯರು, ಬಳಿಕ ಆತನನ್ನು ಕಟ್ಟಿಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಪ್ರಕರಣದ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ (NCR) ದಾಖಲಾಗಿದ್ದು, ಪೊಲೀಸರು ದಂಪತಿಗಳಿಗೆ ಕೌನ್ಸೆಲಿಂಗ್ ನಡೆಸಿ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪದೇ ಪದೇ ನಡೆಯುತ್ತಿರುವ ಇಂತಹ ಕೌಟುಂಬಿಕ ಹಿಂಸಾಚಾರದ ಪ್ರಕರಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಆತಂಕ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.
ನಡುರಸ್ತೆಯಲ್ಲೇ ಪತ್ನಿಯ ಕತ್ತು ಕುಯ್ಯಲು ಹೋದ ಪತಿ; ಮರಕ್ಕೆ ಕಟ್ಟಿಹಾಕಿ ಧರ್ಮದೇಟು ಕೊಟ್ಟ ಬೆಂಗಳೂರಿನ ಜನ
WhatsApp Group
Join Now