ವಿಧವೆಯೊಂದಿಗಿನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾಳೆ ಎಂಬ ಕಾರಣಕ್ಕೆ ಸ್ವಂತ ಪತ್ನಿಯನ್ನೇ ಅತ್ಯಂತ ಕ್ರೂರವಾಗಿ ಕೊಲೆ ಮಾಡಿ, ಅದನ್ನು ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಶಿಂದಿಕುರಬೆಟ್ ಗ್ರಾಮದ ಸಕ್ಕುಬಾಯಿ ಪಟಾಯತ್ (28) ಕೊಲೆಯಾದ ದುರ್ದೈವಿ. ಪ್ರಕರಣ ಸಂಬಂಧ ಆಕೆಯ ಪತಿ ಸಂತೋಷ್ ಪಟಾಯತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ದೇವಸ್ಥಾನದ ಪ್ರಸಾದವೆಂದು ವಿಷದ ಪಾನೀಯ ನೀಡಿದ ಪತಿ
ಪೊಲೀಸರು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಸಂತೋಷ್ ಪಟಾಯತ್ ತನ್ನ ಪತ್ನಿ ಸಕ್ಕುಬಾಯಿಯನ್ನು ಅಧಿಕ ಮಾಸದ ಹಿನ್ನೆಲೆಯಲ್ಲಿ ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದಲ್ಲಿರುವ ಪ್ರಸಿದ್ಧ ಚಾಮುಂಡೇಶ್ವರಿ ದೇವಸ್ಥಾನಕ್ಕೆ ದರ್ಶನಕ್ಕಾಗಿ ಕರೆದುಕೊಂಡು ಹೋಗಿದ್ದನು. ದೇವಸ್ಥಾನದಲ್ಲಿ ಪೂಜೆ ಮುಗಿಸಿ ದ್ವಿಚಕ್ರ ವಾಹನದಲ್ಲಿ ಇಬ್ಬರೂ ಊರಿಗೆ ಹಿಂತಿರುಗುತ್ತಿದ್ದರು.
ಮಾರ್ಗಮಧ್ಯೆ ನಿರ್ಜನ ಪ್ರದೇಶವೊಂದರಲ್ಲಿ ಬೈಕ್ ನಿಲ್ಲಿಸಿದ ಸಂತೋಷ್, ಮೊದಲೇ ಯೋಜಿಸಿದಂತೆ ತಂಪು ಪಾನೀಯದಲ್ಲಿ ಇಲಿಪಾಷಣ ಹಾಗೂ ಬಳೆಯ ಗಾಜಿನ ಚೂರುಗಳ ಪುಡಿಯನ್ನು ಬೆರೆಸಿದ್ದನು. ಅದನ್ನು ದೇವಸ್ಥಾನದ ಪವಿತ್ರ ಪ್ರಸಾದ ಎಂದು ನಂಬಿಸಿ ಪತ್ನಿಯ ಕೈಗೆ ನೀಡಿ ಕುಡಿಯುವಂತೆ ಮಾಡಿದ್ದಾನೆ. ಪತಿಯ ಮಾತನ್ನು ಸಂಪೂರ್ಣವಾಗಿ ನಂಬಿ ಆ ಪಾನೀಯವನ್ನು ಕುಡಿದ ಸಕ್ಕುಬಾಯಿ, ಕೆಲವೇ ನಿಮಿಷಗಳಲ್ಲಿ ತೀವ್ರ ಹೊಟ್ಟೆನೋವಿನಿಂದ ನರಳಿ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಆಕೆ ಸಂಪೂರ್ಣವಾಗಿ ಅಸಹಾಯಕ ಸ್ಥಿತಿಗೆ ತಲುಪುತ್ತಿದ್ದಂತೆ, ರಸ್ತೆಬದಿಯಲ್ಲೇ ಆಕೆಯ ಕುತ್ತಿಗೆಯನ್ನು ಬಲವಾಗಿ ಹಿಸುಕಿ ಸಂತೋಷ್ ಕೊಲೆ ಮಾಡಿದ್ದಾನೆ.
ಅಪಘಾತದ ಡ್ರಾಮಾ ಮಾಡಿ ತಾನೇ ಪೊಲೀಸರಿಗೆ ಕರೆ ಮಾಡಿದ!
ಕೊಲೆಯ ನಂತರ ಸಿಕ್ಕಿಬೀಳುವ ಭಯದಿಂದ ತಪ್ಪಿಸಿಕೊಳ್ಳಲು ಸಂತೋಷ್ ಹೈಡ್ರಾಮಾ ಮಾಡಿದ್ದಾನೆ. ಸಕ್ಕುಬಾಯಿಯ ಶವದ ಮೇಲೆ ತಾನು ಬಂದಿದ್ದ ಮೋಟಾರ್ ಸೈಕಲ್ ಅನ್ನು ಎಸೆದು, ಇದೊಂದು ಭೀಕರ ರಸ್ತೆ ಅಪಘಾತ ಎಂಬಂತೆ ಬಿಂಬಿಸಲು ಯತ್ನಿಸಿದ್ದಾನೆ. ಕೃತ್ಯ ಎಸಗಿದ ನಂತರ ಯಾರಿಗೂ ಸಂಶಯ ಬಾರದಂತೆ ಕೆಲವು ಗಂಟೆಗಳ ಕಾಲ ರಸ್ತೆ ಪಕ್ಕದಲ್ಲಿಯೇ ಮೃತದೇಹದೊಂದಿಗೆ ಕಾಲ ಕಳೆದಿದ್ದಾನೆ. ತದನಂತರ ತಾನೇ ಸ್ವತಃ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ತನ್ನ ಪತ್ನಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ ಹೇಳಿದ್ದಾನೆ.
ಬಿಐಎಂಎಸ್ (BIMS) ಮರಣೋತ್ತರ ಪರೀಕ್ಷೆಯಲ್ಲಿ ಬಯಲಾದ ಸತ್ಯ
ಸ್ಥಳಕ್ಕೆ ಧಾವಿಸಿದ ಪೊಲೀಸರು ಸಕ್ಕುಬಾಯಿ ಸಾವಿನ ಸುತ್ತಲಿನ ಸನ್ನಿವೇಶಗಳು ಮತ್ತು ಸಂತೋಷ್ ನೀಡಿದ ಹೇಳಿಕೆಗಳ ನಡುವೆ ತಾಳೆಯಾಗದೇ ತೀವ್ರ ಅನುಮಾನ ವ್ಯಕ್ತಪಡಿಸಿದರು. ಕೂಡಲೇ ಶವವನ್ನು ವಶಕ್ಕೆ ಪಡೆದು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (BIMS) ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದರು. ಬಿಐಎಂಎಸ್ ವೈದ್ಯರು ನೀಡಿದ ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿಯು ಇದೊಂದು ಅಪಘಾತವಲ್ಲ, ಬದಲಿಗೆ ವಿಷ ಉಣಿಸಿ, ಕತ್ತು ಹಿಸುಕಿ ಮಾಡಲಾದ ವ್ಯವಸ್ಥಿತ ಕೊಲೆ ಎಂಬುದನ್ನು ಬಯಲಿಗೆಳೆಯಿತು. ಈ ವರದಿಯ ಆಧಾರದ ಮೇಲೆ ಪೊಲೀಸರು ಸಂತೋಷ್ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಆತ ತನ್ನ ಹೆಂಡತಿಯನ್ನು ತಾನೇ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.
ನಾಲ್ಕು ವರ್ಷಗಳ ಅಕ್ರಮ ಸಂಬಂಧವೇ ಕೊಲೆಗೆ ಕಾರಣ
ಪೊಲೀಸ್ ತನಿಖೆಯ ವೇಳೆ ಸಂತೋಷ್ ತನ್ನ ಕೊಲೆಯ ಹಿಂದಿನ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾನೆ. ಮೂಲತಃ ಧಾರವಾಡ ತಾಲೂಕಿನ ಕಲ್ಲೂರು ಗ್ರಾಮದ ನಿವಾಸಿಯಾದ ಸಂತೋಷ್ ಮತ್ತು ಸಕ್ಕುಬಾಯಿ ಅವರ ವಿವಾಹವಾಗಿ 9 ವರ್ಷಗಳಾಗಿದ್ದವು. ದಾಂಪತ್ಯ ಜೀವನ ಚೆನ್ನಾಗಿಯೇ ಸಾಗುತ್ತಿತ್ತು. ಆದರೆ, ಕಳೆದ 4 ವರ್ಷಗಳಿಂದ ಸಂತೋಷ್ ತನ್ನ ಸ್ವಗ್ರಾಮದ ವಿಧವೆಯೊಬ್ಬಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು ಎಂದು ತಿಳಿದುಬಂದಿದೆ. ತನ್ನ ಪ್ರಿಯತಮೆಯೊಂದಿಗೆ ಉಳಿದ ಜೀವನವನ್ನು ಪೂರ್ತಿಯಾಗಿ ಕಳೆಯಲು ಪತ್ನಿ ಸಕ್ಕುಬಾಯಿ ಅಡ್ಡಿಯಾಗಿದ್ದಾಳೆ ಎಂದು ಭಾವಿಸಿದ ಆತ, ಪತ್ನಿಗೆ ಚಟ್ಟ ಕಟ್ಟಿದ್ದಾನೆ.
ಹಿಂಡಲಗಾ ಜೈಲು ಪಾಲಾದ ಆರೋಪಿ
ಪ್ರಸ್ತುತ ಆರೋಪಿ ಸಂತೋಷ್ ಪಟಾಯತ್ನನ್ನು ಪೊಲೀಸರು ಅಧಿಕೃತವಾಗಿ ಬಂಧಿಸಿ, ನ್ಯಾಯಾಲಯದ ಆದೇಶದ ಮೇರೆಗೆ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಿದ್ದಾರೆ. ಈ ಭೀಕರ ಕೊಲೆ ಪ್ರಕರಣದಲ್ಲಿ ಸಂತೋಷ್ನ ಪ್ರಿಯತಮೆಯಾಗಿರುವ ಆ ವಿಧವೆಯ ಪಾತ್ರ ಅಥವಾ ಪ್ರಚೋದನೆ ಏನಾದರೂ ಇದೆಯೇ ಎಂಬ ಅನುಮಾನದಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ವಿಧವೆ ಜತೆಗಿನ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತ್ನಿಗೆ ಚಟ್ಟ ಕಟ್ಟಿದ ಗಂಡ! ಬಳೆಚೂರು, ಪ್ರಸಾದ, ಇಲಿಪಾಷಾಣ!
WhatsApp Group
Join Now