‘ಮಾಧ್ಯಮಗಳು ನ್ಯಾಯಾಧೀಶರಲ್ಲ’: ದರ್ಶನ್ ಕೇಸ್‌ನಲ್ಲಿ ಟಿವಿ ಚಾನೆಲ್‌ಗಳಿಗೆ ಹೈಕೋರ್ಟ್ ಕಠಿಣ ಎಚ್ಚರಿಕೆ!

Spread the love

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯ ವೇಳೆ ನಟ ದರ್ಶನ್ ವಿರುದ್ಧ ನಡೆಯುತ್ತಿರುವ ‘ಮಾಧ್ಯಮ ವಿಚಾರಣೆ’ ಕುರಿತು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕೆಲವು ಟಿವಿ ಚಾನೆಲ್‌ಗಳು ಮತ್ತು ಡಿಜಿಟಲ್ ವೇದಿಕೆಗಳ ವರ್ತನೆ ನ್ಯಾಯಾಂಗ ಪ್ರಕ್ರಿಯೆಗೆ ಧಕ್ಕೆ ಉಂಟುಮಾಡುತ್ತಿದೆ ಎಂದು ಕಿಡಿಕಾರಿದೆ.

“ಮಾಧ್ಯಮಗಳು ನ್ಯಾಯಾಧೀಶರಾಗಲು, ತೀರ್ಪು ನೀಡಲು ಅಥವಾ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದ ಹೈಕೋರ್ಟ್, ನ್ಯಾಯಯುತ ವಿಚಾರಣೆಯ ಹಕ್ಕಿಗೆ ಧಕ್ಕೆಯಾಗುವ ರೀತಿಯ ಪ್ರಸಾರಗಳನ್ನು ತಕ್ಷಣ ನಿಯಂತ್ರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ, ಕೆಲ ವಾಹಿನಿಗಳು ನ್ಯಾಯಾಲಯದ ಕಲಾಪಗಳನ್ನು ಪುನರ್‌ನಿರ್ಮಿಸುವ ಮಟ್ಟಕ್ಕೆ ಹೋಗಿವೆ ಎಂದು ಗಂಭೀರವಾಗಿ ಆಕ್ಷೇಪ ವ್ಯಕ್ತಪಡಿಸಿದೆ. “ನ್ಯಾಯಾಧೀಶರ ಮುಖವನ್ನು ಮಾತ್ರ ಮರೆಮಾಡಿ, ಆರೋಪಿಗಳು ಮತ್ತು ವಕೀಲರ ಮುಖಗಳನ್ನು ಬಹಿರಂಗವಾಗಿ ತೋರಿಸಿ, ಪ್ರತಿ ವಿಚಾರಣೆಯ ದಿನವೂ ಪ್ರಸಾರ ಮಾಡಲಾಗುತ್ತಿದೆ. ಇದು ನ್ಯಾಯಾಂಗ ಪ್ರಕ್ರಿಯೆಯನ್ನು ಸಾರ್ವಜನಿಕ ಪ್ರದರ್ಶನವನ್ನಾಗಿ ಪರಿವರ್ತಿಸಿದೆ” ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ನಡೆಯುತ್ತಿರುವ ವರದಿ ಹಾಗೂ ಚರ್ಚೆಗಳು ತಡೆಯಾಜ್ಞೆ ಮತ್ತು ಕಾರ್ಯಕ್ರಮ ಸಂಹಿತೆ ಉಲ್ಲಂಘಿಸುತ್ತಿವೆ ಎಂದು ಆರೋಪಿಸಿ ನಟ ದರ್ಶನ್ ಜನವರಿ 16, 2026ರಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಹಲವು ವಾಹಿನಿಗಳು ಊಹಾತ್ಮಕ ಕಥನಗಳು, ಪರಿಶೀಲಿಸದ ಆರೋಪಗಳು ಮತ್ತು ಆಯ್ದ ಮಾಹಿತಿ ಸೋರಿಕೆಗಳ ಆಧಾರದ ಮೇಲೆ ‘ಮಾಧ್ಯಮ ತೀರ್ಪು’ ನೀಡುತ್ತಿವೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.

ಈ ಅರ್ಜಿಯನ್ನು ಭಾಗಶಃ ಅಂಗೀಕರಿಸಿರುವ ಹೈಕೋರ್ಟ್, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ದೂರುಗಳ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ಈ ರೀತಿಯ ವರದಿ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ನಿಯಮಗಳು, 1994ರ ಕಾರ್ಯಕ್ರಮ ಸಂಹಿತೆಯ ನಿಯಮ 6ರ ಉಲ್ಲಂಘನೆ ಮಾತ್ರವಲ್ಲ, ನ್ಯಾಯಾಂಗ ಪ್ರಕ್ರಿಯೆಯಲ್ಲಿ ನೇರ ಹಸ್ತಕ್ಷೇಪವೂ ಹೌದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. “ಇಂತಹ ಪ್ರಸಾರಗಳು ನ್ಯಾಯಾಲಯಕ್ಕೆ ಸಮಾನಾಂತರ ನಿರೂಪಣೆಯನ್ನು ನಿರ್ಮಿಸಿ, ಪೂರ್ವಾಗ್ರಹಪೀಡಿತ ವಾತಾವರಣ ಸೃಷ್ಟಿಸುತ್ತವೆ” ಎಂದು ನ್ಯಾಯಾಲಯ ಎಚ್ಚರಿಸಿದೆ.

WhatsApp Group Join Now

Spread the love

Leave a Reply