ಬಿಡದಿ ಭಾಗದಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸಲು ಟೌನ್ ಶಿಪ್ ನೆಪದಲ್ಲಿ ನೋಟಿಫೈ ಮಾಡಿರುವ ಭೂಮಿಯ ಮಾಲೀಕರು ಅಸಲಿ ರೈತರೋ ಅಲ್ಲವೋ ಎಂಬುದನ್ನು ತೀರ್ಮಾನಿಸಲು ಸ್ವತಃ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ನನ್ನೊಂದಿಗೆ ಆ ನೊಂದ ಹಳ್ಳಿಗಳಿಗೆ ಬರಲಿ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ರೈತರ ತೀವ್ರ ವಿರೋಧದ ನಡುವೆಯೂ ಬಿಡದಿ ಟೌನ್ ಶಿಪ್ ಯೋಜನೆ ಭೂ ಸ್ವಾಧೀನಕ್ಕೆ ರಾಜ್ಯ ಕಾಂಗ್ರೆಸ್ ಸರಕಾರವು ಅಂತಿಮ ಅಧಿಸೂಚನೆ ಹೊರಡಿಸಿರುವ ನಡೆಯನ್ನು ತೀವ್ರವಾಗಿ ಖಂಡಿಸಿದ ಕೇಂದ್ರ ಸಚಿವರು, ಈ ರೈತದ್ರೋಹದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ಭೂಮಿ ಕಳೆದುಕೊಳ್ಳುತ್ತಿರುವ ಅನ್ನದಾತ ಪರವಾಗಿ ನಾನು ಹೋರಾಡುತ್ತೇನೆ ಎಂದು ಘೋಷಿಸಿದರು.
ರೈತರನ್ನು ರೈತರೇ ಅಲ್ಲ ಎಂದು ಹೇಳುತ್ತಿರುವುದು ಅಹಂಕಾರದ ಪರಮಾವಧಿ. ಅನ್ನ ಕೊಡುವ ರೈತನಿಗೆ ಮಾಡುವ ಘೋರ ಅಪಮಾನ ಇದಾಗಿದೆ. ನಿಜಕ್ಕೂ ಅವರು ರೈತರೋ ಅಲ್ಲವೋ ಎಂಬುದನ್ನು ತಿಳಿಯಲು ಮುಖ್ಯಮಂತ್ರಿ ಆ ಗ್ರಾಮಗಳಿಗೆ ಬರಲಿ. ನಾನು ಕೂಡ ಅಲ್ಲಿಗೆ ಹೋಗುತ್ತೇನೆ. ಭೂಮಿ ಕಳೆದುಕೊಳ್ಳುತ್ತಿರುವ ಆ ಜನರು ರೈತರೋ ಅಲ್ಲವೋ ಎನ್ನುವುದು ಆ ಹಳ್ಳಿಗಳಲ್ಲಿಯೇ ತೀರ್ಮಾನ ಆಗಿಬಿಡಲಿ ಎಂದು ಹೇಳಿದರು.
ಸರಕಾರ ಅಂತಿಮ ಅಧಿಸೂಚನೆ ಹೊರಡಿಸಿರುವುದು ಸರಿಯಲ್ಲ:
ಬಿಡದಿ ಟೌನ್ ಶಿಪ್ ನಿರ್ಮಾಣಕ್ಕೆ ಸರಕಾರ ಅಂತಿಮ ಅಧಿಸೂಚನೆ ಹೊರಡಿಸಿರುವುದು ಸರಿಯಲ್ಲ. 470 ದಿನಗಳಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಅಲ್ಲಿರುವುದು ಫಲವತ್ತಾದ ಕೃಷಿ ಭೂಮಿ. ಅದನ್ನು ಕಸಿದುಕೊಂಡು ರಿಯಲ್ ಎಸ್ಟೇಟ್ ದಂಧೆ ಮಾಡಲು ಈ ಸರಕಾರ ಹೊರಟಿದೆ. ಈಗ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಸರಕಾರ ಮಾಡುತ್ತಿದೆ. ಪ್ರತಿಭಟನೆ ಮಾಡುತ್ತಿರುವ ರೈತರ ಮೇಲೆ ಎಫ್‌ಐಆರ್ ಹಾಕಲಾಗುತ್ತಿದೆ. ಗೃಹ ಸಚಿವರು ನೋಡಿದರೆ ಯಾವುದೇ ಎಫ್’ಐಆರ್ ಹಾಕಿಲ್ಲ ಎಂದು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಸರ್ಕಾರವೇ ದೌರ್ಜನ್ಯ ದರ್ಪ ನಡೆಸುತ್ತಿದೆ ಎಂದು ಕುಮಾರಸ್ವಾಮಿ ನೇರ ಆರೋಪ ಮಾಡಿದರು.
ದುರಂತ ಎಂದರೆ ಈ ದಂಧೆಯಲ್ಲಿ ಈ ಹಳ್ಳಿಗಳ ಜನ ಮತ ಕೊಟ್ಟು ಗೆಲ್ಲಿಸಿದ ಜನಪ್ರತಿನಿಧಿಗಳು ಕೂಡ ಸೇರಿಕೊಂಡಿದ್ದಾರೆ. ಸರ್ಕಾರ ಏನೇ ನೋಟಿಫಿಕೇಶನ್ ರೈತರ ಒಪ್ಪಿಗೆ ಕಡ್ಡಾಯವಾಗಿ ಬೇಕು. ಅವರ ಅನುಮತಿ ಇಲ್ಲದೆ ಸರ್ಕಾರದವರು ಏನನ್ನು ಮಾಡುವುದಿಲ್ಲ. ಇದ್ದರೂ ಕೂಡ ಅಂತಿಮ ನೋಟಿಫಿಕೇಶನ್ ಮಾಡಿ ರೈತರ ಬದುಕಿಗೆ ಕೊಳ್ಳಿ ಇಡಲು ಸರ್ಕಾರ ಮುಂದಾಗಿರುವುದು ಅಕ್ಷಮ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶೇಕಡ 80 ರಿಂದ 90ರಷ್ಟು ರೈತರು ಯೋಜನೆಯನ್ನು ವಿರೋಧ ಮಾಡುತ್ತಿದ್ದಾರೆ. ಕೆಲವು ದಂಧೆಕೋರರರಿಗೆ ಮಾತ್ರ ಬಿಡದಿ ಯೋಜನೆ ಬೇಕಾಗಿದೆ. ಭೂಮಿ ಕೊಡುವುದಿಲ್ಲ ಎಂದು ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಪೊಲೀಸರು ಮತ್ತು ಗುಂಡಾಗಳನ್ನು ಬಿಟ್ಟು ದೌರ್ಜನ್ಯ ಎಸಗಲಾಗುತ್ತಿದೆ. ಬೇಕಾದಷ್ಟು ಕಡೆ ಒಣ ಭೂಮಿ ಸಿಗುತ್ತದೆ ಅಲ್ಲಿ ಬೇಕಾದರೆ ಟೌನ್ ಶಿಪ್ಗಳನ್ನು ನಿರ್ಮಾಣ ಮಾಡಲಿ. ಅದು ಬಿಟ್ಟು ನಿರ್ದಿಷ್ಟವಾಗಿ ಬಿಡದಿ ಜನರ ಭೂಮಿಯೇ ಬೇಕೆಂದು ಇವರು ಷಡ್ಯಂತ್ರ ಮಾಡಿ ಕಿತ್ತುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
2006ರಲ್ಲಿ ಬಿಡದಿ ಸೇರಿ ಐದು ಟೌನ್ ಶಿಪ್ ಗಳನ್ನು ಮಾಡಬೇಕೆಂದು ನಾನು ತೀರ್ಮಾನ ಮಾಡಿದ್ದೆ. ಅದಕ್ಕೆ ರೈತರಿಂದ ತೀವ್ರ ವಿರೋಧ ಬಂದಿದ್ದರಿಂದ ನಾನು ಆ ಯೋಜನೆಯನ್ನು ಮುಲಾಜಿಲ್ಲದೆ ಅಲ್ಲಿಗೆ ಕೈಬಿಟ್ಟೆ. ನಾನು ಜನರ ಹಿತಕ್ಕಾಗಿ ಕೈ ಬಿಟ್ಟ ಯೋಜನೆಯನ್ನು ಇವರು ತಮ್ಮ ಸ್ವಾರ್ಥಕ್ಕಾಗಿ ಪುನಾ ಕೈಗೆತ್ತಿಕೊಂಡಿದ್ದಾರೆ. ಬಡಜನರ ಭೂಮಿಯನ್ನು ರಿಯಲ್ ಎಸ್ಟೇಟ್ ದಂಧೆಗೆ ಬಳಕೆ ಮಾಡಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ ಎಂದರು.
ನಾವು ಈ ಯೋಜನೆಯನ್ನು ಮಾಡಿಯೇ ಮಾಡುತ್ತೇವೆ. ಜನರು ಬೇಕಾದರೆ ಕಾನೂನು ಹೋರಾಟ ಮಾಡಿಕೊಳ್ಳಲಿ ಎಂದು ಹೇಳಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯನ್ನು ಕಟು ಶಬ್ದಗಳಲ್ಲಿ ಖಂಡಿಸಿದ ಕೇಂದ್ರ ಸಚಿವರು; ರೈತರ ಮೇಲೆ ಈ ಸರಕಾರಕ್ಕೆ ಎಷ್ಟು ಗೌರವ ಇದೆ ಎಂಬುದಕ್ಕೆ ಈ ಹೇಳಿಕೆ ಒಂದೇ ಸಾಕು ಎಂದರು.
ಕುಮಾರಕೃಪ ವಿರೂಪ: ಹೆಚ್ಡಿಕೆ ಕಿಡಿ
ಇದೇ ವೇಳೆ ಪಾರಂಪರಿಕ ಕಟ್ಟಡ ಕುಮಾರ ಕೃಪ ಅತಿಥಿಗೃಹವನ್ನು ಕೆಡುವುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡೆಯನ್ನು ಖಂಡಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು, ಮುಂದಿನ ಐದು ವರ್ಷ ಇವರೇ ಮುಂದುವರೆದರೆ ಕೆಂಗಲ್ ಹನುಮಂತಯ್ಯ ನವರು ಕಟ್ಟಿದ ವಿಧಾನಸೌಧವನ್ನು ಏನು ಮಾಡುತ್ತಾರೋ ಎಂದು ಗಾಬರಿಯಾಗುತ್ತದೆ ಎಂದು ಲೇವಡಿ ಮಾಡಿದರು.
ಬಿಡದಿ ರೈತರು ಅಸಲಿ ರೈತರೋ ಅಲ್ಲವೋ? ನೊಂದ ಹಳ್ಳಿಗಳಿಗೆ ಬನ್ನಿ, ನಾನು ಬರುತ್ತೇನೆ : ಸಿಎಂ ಡಿ.ಕೆ.ಶಿವಕುಮಾರ್ ಗೆ ಕುಮಾರಸ್ವಾಮಿ ಸವಾಲು
WhatsApp Group
Join Now