ದೇಶದ ಲಕ್ಷಾಂತರ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆ ಹಾಗೂ ನಿವೃತ್ತಿ ಜೀವನದ ಸೌಲಭ್ಯಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPFO) ಕಡ್ಡಾಯ ಮಾಸಿಕ ವೇತನ ಮಿತಿಯನ್ನು ಹಾಲಿ ಇರುವ ₹15,000 ರಿಂದ ₹25,000ಕ್ಕೆ ಹೆಚ್ಚಿಸಲು ಪ್ರಧಾನಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಸರ್ಕಾರದ ಈ ಕ್ರಮದಿಂದಾಗಿ ಸಂಘಟಿತ ವಲಯದ 51 ಲಕ್ಷಕ್ಕೂ ಹೆಚ್ಚು ಹೆಚ್ಚುವರಿ ಉದ್ಯೋಗಿಗಳು ಕಡ್ಡಾಯವಾಗಿ ಇಪಿಎಫ್ ಸಾಮಾಜಿಕ ಭದ್ರತೆಯ ತೆಕ್ಕೆಗೆ ಬರಲಿದ್ದಾರೆ.
ಯಾರಿಗೆ ಸಿಗಲಿದೆ ಈ ಪ್ರಯೋಜನ?
ಪ್ರಸ್ತುತ ನಿಯಮದ ಪ್ರಕಾರ, ಮಾಸಿಕ ₹15,000 ಕ್ಕಿಂತ ಹೆಚ್ಚು ಮೂಲ ವೇತನ ಪಡೆಯುವ ಹೊಸ ಉದ್ಯೋಗಿಗಳಿಗೆ ಇಪಿಎಫ್ಒ ಸದಸ್ಯತ್ವ ಕಡ್ಡಾಯವಾಗಿರಲಿಲ್ಲ. ಆದರೆ ಪರಿಷ್ಕೃತ ಮಿತಿಯ ಅನ್ವಯ, ತಿಂಗಳಿಗೆ ₹15,000 ರಿಂದ ₹25,000 ವರೆಗೆ ಗಳಿಸುವ ಎಲ್ಲ ಉದ್ಯೋಗಿಗಳು ನಿಯಮಾನುಸಾರ ಕಡ್ಡಾಯ ಸಾಮಾಜಿಕ ಭದ್ರತಾ ಚೌಕಟ್ಟಿನೊಳಗೆ ಸೇರ್ಪಡೆಗೊಳ್ಳಲಿದ್ದಾರೆ. ಕಳೆದ ಒಂದು ದಶಕದಲ್ಲಿ ಜನರ ಆದಾಯ, ವೇತನ ಮಟ್ಟ ಮತ್ತು ಸಂಘಟಿತ ಉದ್ಯೋಗ ಮಾರುಕಟ್ಟೆ ಗಣನೀಯವಾಗಿ ವಿಸ್ತರಣೆಗೊಂಡಿರುವುದನ್ನು ಪರಿಗಣಿಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇಪಿಎಫ್ಒ ವೇತನ ಮಿತಿಯನ್ನು ಕೊನೆಯ ಬಾರಿಗೆ 2014ರ ಸೆಪ್ಟೆಂಬರ್ನಲ್ಲಿ ₹6,500 ರಿಂದ ₹15,000ಕ್ಕೆ ಹೆಚ್ಚಿಸಲಾಗಿತ್ತು.
ಪಿಂಚಣಿ ಮತ್ತು ವಿಮಾ ರಕ್ಷಣೆಯ ಭಾಗ್ಯ
ನೂತನ ವೇತನ ಮಿತಿಯ ಪರಿಷ್ಕರಣೆಯು ಕೇವಲ ಭವಿಷ್ಯ ನಿಧಿಯ (PF) ಉಳಿತಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಇಪಿಎಫ್ಒ ವ್ಯಾಪ್ತಿಗೆ ಬರುವ ಉದ್ಯೋಗಿಗಳು ನೌಕರರ ಪಿಂಚಣಿ ಯೋಜನೆ (EPS) ಹಾಗೂ ನೌಕರರ ಠೇವಣಿ ಲಿಂಕ್ಡ್ ವಿಮಾ ಯೋಜನೆ (EDLI) ಅಡಿಯಲ್ಲಿ ಲಭ್ಯವಿರುವ ವಿಮಾ ರಕ್ಷಣೆಯನ್ನೂ ಪಡೆಯಲಿದ್ದಾರೆ. ಇದು ಕಾರ್ಮಿಕರ ಕುಟುಂಬಗಳಿಗೆ ಆರ್ಥಿಕ ರಕ್ಷಣೆ ಒದಗಿಸುವುದರ ಜೊತೆಗೆ, ಪ್ರಸ್ತುತ ಮಾರುಕಟ್ಟೆಯ ವೇತನ ಮಟ್ಟಕ್ಕೆ ತಕ್ಕಂತೆ ಕೊಡುಗೆ ಹಾಗೂ ಪಿಂಚಣಿ ಅರ್ಹತಾ ವೇತನ ಚೌಕಟ್ಟನ್ನು ಸಮರ್ಪಕಗೊಳಿಸಲಿದೆ.
ಸರ್ಕಾರಕ್ಕೆ ವಾರ್ಷಿಕ ₹11,339 ಕೋಟಿ ಹೊರೆ
ಈ ಸಾಮಾಜಿಕ ಭದ್ರತೆಯ ವಿಸ್ತರಣೆಯಿಂದಾಗಿ ಕೇಂದ್ರ ಸರ್ಕಾರದ ಮೇಲಿನ ಆರ್ಥಿಕ ಹೊಣೆಗಾರಿಕೆಯೂ ಹೆಚ್ಚಾಗಲಿದೆ. ಸರ್ಕಾರದ ಅಂದಾಜಿನ ಪ್ರಕಾರ, ಈವರೆಗೆ ವಾರ್ಷಿಕವಾಗಿ ನೀಡಲಾಗುತ್ತಿದ್ದ ₹10,250 ಕೋಟಿ ಬಜೆಟ್ ಬೆಂಬಲದ ಬದಲು, ಇನ್ನು ಮುಂದೆ ವಾರ್ಷಿಕ ವೆಚ್ಚ ಸುಮಾರು ₹11,339 ಕೋಟಿಗೆ ಏರಿಕೆಯಾಗಲಿದೆ. ಮುಂದಿನ ಐದು ವರ್ಷಗಳಲ್ಲಿ ಸರ್ಕಾರದ ಒಟ್ಟು ಅಂದಾಜು ವೆಚ್ಚ ₹56,696 ಕೋಟಿ ತಲುಪಲಿದೆ. ವಿವಿಧ ಸಚಿವಾಲಯಗಳ ಸಮಾಲೋಚನೆಗಳ ನಂತರ 2026ರ ಜೂನ್ 16 ರಂದು ನಡೆದ ವೆಚ್ಚ ಹಣಕಾಸು ಸಮಿತಿ (EFC) ಸಭೆಯಲ್ಲಿ ಈ ಪ್ರಸ್ತಾವನೆಗೆ ಶಿಫಾರಸು ಮಾಡಲಾಗಿತ್ತು.
ವೇತನ ಮಿತಿ ಹೆಚ್ಚಳಕ್ಕೆ ಕಾರಣಗಳೇನು?
ಕಳೆದ ಹತ್ತು ವರ್ಷಗಳಿಂದ ₹15,000 ಮಿತಿ ಬದಲಾಗದೆ ಉಳಿದಿತ್ತು. ಈ ಅವಧಿಯಲ್ಲಿ ವೇತನ, ಜೀವನ ವೆಚ್ಚ ಹೆಚ್ಚಾಗಿದ್ದು, ಸಂಘಟಿತ ವಲಯದ ಉದ್ಯೋಗ ಪ್ರಮಾಣವೂ ಬೆಳೆದಿದೆ. ಹಲವು ರಾಜ್ಯಗಳು ಹಾಗೂ ಕೈಗಾರಿಕೆಗಳಲ್ಲಿ ಕನಿಷ್ಠ ವೇತನ ಮಟ್ಟವು ಹಾಲಿ ಇಪಿಎಫ್ಒ ಮಿತಿಯ ಸಮೀಪಕ್ಕೆ ಬಂದಿತ್ತು. ಹೀಗಾಗಿ ಮಿತಿಯನ್ನು ₹25,000ಕ್ಕೆ ಹೆಚ್ಚಿಸುವುದರಿಂದ ನೈಜ ವೇತನ ಮಟ್ಟಕ್ಕೆ ಅನುಗುಣವಾಗಿ ಕಾರ್ಮಿಕರಿಗೆ ಶಾಸನಬದ್ಧ ಸೌಲಭ್ಯಗಳು ದೊರೆಯಲಿವೆ. ಇದು ನೌಕರರಿಗೆ ನಿವೃತ್ತಿ ಭದ್ರತೆ ನೀಡಿದರೆ, ಮಾಲೀಕರಿಗೆ ದಕ್ಷ ಉದ್ಯೋಗಿಗಳನ್ನು ಸಂಸ್ಥೆಯಲ್ಲೇ ಉಳಿಸಿಕೊಳ್ಳಲು (Retention) ಹಾಗೂ ಕಾರ್ಯಪಡೆಯ ಸ್ಥಿರತೆಗೆ ಸಹಕಾರಿಯಾಗಲಿದೆ.
8 ಕೋಟಿ ಸದಸ್ಯರನ್ನು ಹೊಂದಿರುವ ಬೃಹತ್ ಸಂಸ್ಥೆ
ವಿಶ್ವದ ಅತಿ ದೊಡ್ಡ ಸಾಮಾಜಿಕ ಭದ್ರತಾ ಸಂಸ್ಥೆಗಳಲ್ಲಿ ಒಂದಾದ ಇಪಿಎಫ್ಒ, ಸದ್ಯ ಸುಮಾರು 7.68 ಲಕ್ಷ ಸಂಸ್ಥೆಗಳ ಮೂಲಕ 7.98 ಕೋಟಿ ಸಕ್ರಿಯ ಕೊಡುಗೆ ಸದಸ್ಯರನ್ನು ಹೊಂದಿದೆ. ಇದಲ್ಲದೆ ನೌಕರರ ಪಿಂಚಣಿ ಯೋಜನೆಯು ಸದ್ಯ 82 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ಆಸರೆಯಾಗಿದೆ. ಕೇಂದ್ರ ಸಚಿವ ಸಂಪುಟದ ಅನುಮೋದನೆ ದೊರೆತಿದ್ದು, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಹಾಗೂ ಇಪಿಎಫ್ಒ ಶೀಘ್ರದಲ್ಲೇ ಅಗತ್ಯ ಶಾಸನಬದ್ಧ ಹಾಗೂ ಆಡಳಿತಾತ್ಮಕ ಅಧಿಸೂಚನೆಗಳನ್ನು ಹೊರಡಿಸುವ ಮೂಲಕ ಪರಿಷ್ಕೃತ ವೇತನ ಮಿತಿಯನ್ನು ಅಧಿಕೃತವಾಗಿ ಜಾರಿಗೆ ತರಲಿವೆ.
ಉದ್ಯೋಗಿಗಳಿಗೆ ಗುಡ್ ನ್ಯೂಸ್: EPFO ವೇತನ ಮಿತಿ ₹25,000 ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ
WhatsApp Group
Join Now