BIG NEWS: ‘ಪತಿ ನಿರುದ್ಯೋಗಿ’ಯಾದರೂ ‘ಪತ್ನಿಗೆ ಜೀವನಾಂಶ’ ನೀಡಬೇಕು: ಹೈಕೋರ್ಟ್ ಮಹತ್ವದ ತೀರ್ಪು

Spread the love

“ದುಡಿಯುವ ಸಾಮರ್ಥ್ಯವಿರುವ ಪತಿಯು ತಾನು ನಿರುದ್ಯೋಗಿ ಎಂಬ ಕಾರಣ ನೀಡಿ ಪತ್ನಿಗೆ ಜೀವನಾಂಶ ನೀಡುವುದರಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಪತ್ನಿಯು ಉದ್ಯೋಗದಲ್ಲಿದ್ದು ಸಂಬಳ ಪಡೆಯುತ್ತಿದ್ದರೂ ಸಹ, ವಿವಾಹದ ನಂತರ ಪತಿಯ ಮನೆಯಲ್ಲಿ ಆಕೆ ಅನುಭವಿಸುತ್ತಿದ್ದ ಜೀವನಮಟ್ಟವನ್ನು ಕಾಪಾಡಿಕೊಳ್ಳಲು ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಾಗಿರುತ್ತಾಳೆ” ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರ ಪತಿ ಮತ್ತು ಪತ್ನಿ ಇಬ್ಬರೂ ಈ ಮೊದಲೇ ವಿಚ್ಛೇದನ ಪಡೆದವರಾಗಿದ್ದು, 2021ರಲ್ಲಿ ಮರು ವಿವಾಹವಾಗಿದ್ದರು. ಆದರೆ, ದಾಂಪತ್ಯದಲ್ಲಿ ಮೂಡಿದ ಭಿನ್ನಾಭಿಪ್ರಾಯದಿಂದಾಗಿ 2022ರಲ್ಲಿ ಪತ್ನಿಯು ಜೀವನಾಂಶ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯವು ಪತ್ನಿಗೆ ಮಾಸಿಕ 20 ಸಾವಿರ ರೂಪಾಯಿ ಮಧ್ಯಂತರ ಜೀವನಾಂಶ ನೀಡುವಂತೆ ಪತಿಗೆ ನಿರ್ದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪತಿಯು ಹೈಕೋರ್ಟ್ ಮೆಟ್ಟಿಲೇರಿದ್ದರು.

ಪತಿಯ ವಾದವೇನಿತ್ತು? ತಾವು 2023ರಲ್ಲಿ ಕೆಲಸ ಕಳೆದುಕೊಂಡಿದ್ದು, ಪ್ರಸ್ತುತ ನಿರುದ್ಯೋಗಿಯಾಗಿದ್ದೇನೆ ಎಂದು ಪತಿ ವಾದಿಸಿದ್ದರು. ತಂದೆ-ತಾಯಿಯ ಪಿಂಚಣಿ ಹಾಗೂ ಹಳೆಯ ಉಳಿತಾಯದ ಹಣದಲ್ಲಿ ಜೀವನ ಸಾಗಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಅಲ್ಲದೆ, ಪತ್ನಿಯು ಪದವೀಧರೆಯಾಗಿದ್ದು, ಸ್ವಂತ ಆದಾಯ ಹೊಂದಿರುವುದರಿಂದ ಆಕೆಗೆ ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಿದ್ದರು.

ನ್ಯಾಯಾಲಯದ ಖಡಕ್ ಅಭಿಪ್ರಾಯ: ಪತಿಯ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಡಾ. ಕೆ. ಮನ್ಮಥ ರಾವ್ ಅವರಿದ್ದ ಏಕಸದಸ್ಯ ಪೀಠವು ಈ ಕೆಳಗಿನ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದೆ:

ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವಂತಿಲ್ಲ: ಆರೋಗ್ಯವಂತ ಪತಿಯು ಕೆಲಸವಿಲ್ಲ ಎಂಬ ನೆಪ ಹೇಳಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಹೈಕೋರ್ಟ್ ಪುನರುಚ್ಚರಿಸಿದೆ.

ಜೀವನಮಟ್ಟದ ಅಂತರ: ಪತ್ನಿಯು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 40 ಸಾವಿರ ರೂ. ಗಿಂತ ಹೆಚ್ಚು ವೇತನ ಪಡೆಯುತ್ತಿರುವುದು ನಿಜ. ಆದರೆ, ಪತಿಯು ಈ ಹಿಂದೆ ಕೆಲಸ ಮಾಡುತ್ತಿದ್ದಾಗ ತಿಂಗಳಿಗೆ ಸುಮಾರು 4.50 ಲಕ್ಷ ರೂ. ಸಂಬಳ ಪಡೆಯುತ್ತಿದ್ದರು. ತೆರಿಗೆ ದಾಖಲೆಗಳ ಪ್ರಕಾರ ಅವರ ವಾರ್ಷಿಕ ಆದಾಯ 66 ಲಕ್ಷ ರೂ.ಗಳಿಗೂ ಅಧಿಕವಾಗಿತ್ತು.

ಆಸ್ತಿ ವಿವರ: ಪತಿಯು ಬೆಂಗಳೂರಿನ ಯಲಹಂಕದಲ್ಲಿ ಮಾತ್ರವಲ್ಲದೆ, ಇಂಗ್ಲೆಂಡ್‌ನಲ್ಲೂ ಆಸ್ತಿಗಳನ್ನು ಹೊಂದಿದ್ದಾರೆ ಎಂಬ ಅಂಶವನ್ನು ನ್ಯಾಯಪೀಠ ಗಮನಿಸಿದೆ.

ಅರ್ಹತೆ: ಪತಿಯ ಐಷಾರಾಮಿ ಜೀವನಮಟ್ಟಕ್ಕೆ ಹೋಲಿಸಿದರೆ ಪತ್ನಿಯ ವೇತನ ಅತ್ಯಲ್ಪವಾಗಿದೆ. ವೈವಾಹಿಕ ಜೀವನದ ಅವಧಿಯಲ್ಲಿ ಪತ್ನಿ ಯಾವ ರೀತಿಯ ಜೀವನಮಟ್ಟವನ್ನು ಅನುಭವಿಸಿದ್ದರೋ, ಅದನ್ನು ಮುಂದುವರಿಸಲು ಜೀವನಾಂಶದ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.

ಪತಿಯ ಶೈಕ್ಷಣಿಕ ಅರ್ಹತೆ ಮತ್ತು ಆರ್ಥಿಕ ಹಿನ್ನೆಲೆಯನ್ನು ಪರಿಗಣಿಸಿದರೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ 20 ಸಾವಿರ ರೂ. ಜೀವನಾಂಶದ ಆದೇಶದಲ್ಲಿ ಯಾವುದೇ ದೋಷವಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಪತಿಯ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

WhatsApp Group Join Now

Spread the love

Leave a Reply