ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಮಂಡಲಹಳ್ಳಿಯಲ್ಲಿ ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಘಟನೆಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ ಎಂದು ಹೇಳಿದ ಅವರು, “ಬೇಕಾದರೆ ನನಗೆ ಪೊರಕೆಯಲ್ಲಿ ಹೊಡೆಯಿರಿ, ತಪ್ಪು ಮಾಡಿದ್ದರೆ ನನಗೆ ಹೊಡೆಯಲಿ, ಆದರೆ ಅಧಿಕಾರಿಗಳಿಗೆ ಹೊಡೆಯಬೇಡಿ” ಎಂದು ಭಾವುಕರಾಗಿ ಮನವಿ ಮಾಡಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, “ಬಿಡದಿಯಲ್ಲಿ ನಡೆದ ಘಟನೆ ನನ್ನ ಮನಸ್ಸಿಗೆ ತುಂಬಾ ನೋವು ತಂದಿದೆ. ರಾಜಕೀಯ ಪ್ರೇರಿತ ಕುಮ್ಮಕ್ಕಿನಿಂದ ಅಧಿಕಾರಿಗಳಿಗೆ ತೊಂದರೆ ನೀಡಲಾಗಿದೆ. ರೈತರನ್ನು ತಪ್ಪು ದಾರಿಗೆ ಎಳೆಯುವ ಸಂಚು ನಡೆಯುತ್ತಿದೆ. ಯಾರ ಮನಸ್ಸಿಗೂ ನೋವುಂಟು ಮಾಡುವ ಉದ್ದೇಶ ನನಗಿಲ್ಲ” ಎಂದು ಹೇಳಿದರು.
ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ಸ್ಪಷ್ಟನೆ ನೀಡಿದ ಅವರು, “ಇದು ನನ್ನ ಕನಸಿನ ಯೋಜನೆಯಲ್ಲ. ನಾನು ಯಾವತ್ತೂ ಇದನ್ನು ನನ್ನ ಕನಸಿನ ಪ್ರಾಜೆಕ್ಟ್ ಎಂದು ಹೇಳಿಲ್ಲ. ಈ ಯೋಜನೆಗೆ ನಾನು ಶಂಕುಸ್ಥಾಪನೆ ಕೂಡ ಮಾಡಿಲ್ಲ. ಇದರ ಪಿತಾಮಹನಾಗುವ ಆಸೆಯೂ ನನಗಿಲ್ಲ. ಹಿರಿಯರು ನೀಡಿದ ಮಾರ್ಗದರ್ಶನದಂತೆ ಹಿಂದಿನ ಯೋಜನೆಯನ್ನು ಮುಂದುವರಿಸುವ ಕೆಲಸ ಮಾಡುತ್ತಿದ್ದೇನೆ” ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.
ತಮ್ಮ ರೈತ ಹಿನ್ನೆಲೆಯನ್ನು ಉಲ್ಲೇಖಿಸಿದ ಸಿಎಂ, “ನಾನು ಹುಟ್ಟು ರೈತನ ಮಗ. ರೈತನ ಶ್ರಮ, ಭೂಮಿಯ ಮೌಲ್ಯ ಮತ್ತು ಅವರ ನೋವು ನನಗೆ ಚೆನ್ನಾಗಿ ಗೊತ್ತಿದೆ” ಎಂದರು.
ರಾಜಕೀಯ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ ಅವರು, “ನಾನು ಮುಖ್ಯಮಂತ್ರಿ ಆಗಿರುವುದನ್ನು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅವರಿಗೆ ನಿದ್ರೆ ಬರುತ್ತಿಲ್ಲ. ನನ್ನನ್ನು ಜೈಲಿಗೆ ಕಳುಹಿಸಲು ಹಲವು ವರ್ಷಗಳಿಂದ ಸಂಚು ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ” ಎಂದು ವಾಗ್ದಾಳಿ ನಡೆಸಿದರು.
ಅಧಿಕಾರಿಗಳಿಗೆ ಹೊಡೆಯಬೇಡಿ, ಬೇಕಾದ್ರೆ ನನಗೆ ಪೊರಕೆಯಲ್ಲಿ ಹೊಡೆಯಿರಿ: ಬಿಡದಿ ಘಟನೆಗೆ ಕಣ್ಣೀರು ಹಾಕಿದ ಸಿಎಂ ಡಿಕೆಶಿ
WhatsApp Group
Join Now