ನನಗೆ ಮರಣದಂಡನೆ ಕೊಟ್ಟುಬಿಡಿ: 15 ವರ್ಷಗಳಿಂದ ಮನೆಯಲ್ಲಿದ್ದ ಕೆಲಸದಾಕೆಯನ್ನು ಕೊಂದ ಸೈಕೋ ವೈದ್ಯ!

Spread the love

ಕಳೆದ 15 ವರ್ಷಗಳಿಂದ ತನ್ನ ಮನೆಯಲ್ಲೇ ನಂಬಿಕಸ್ಥಳಾಗಿ ಕೆಲಸ ಮಾಡುತ್ತಿದ್ದ 45 ವರ್ಷದ ಮೀನಾ ಎಂಬ ಮಹಿಳೆಯನ್ನು, ಅದೇ ಮನೆಯ ಮಾಲೀಕನಾದ ವೈದ್ಯ ಡಾ. ಮನೀಶ್ ಗುಪ್ತಾ ಎಂಬಾತ ಕ್ರೂರವಾಗಿ ಕೊಚ್ಚಿ ಕೊಂದಿದ್ದಾನೆ. ಸದ್ಯ ಆರೋಪಿ ವೈದ್ಯನನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಸಾಕೇತ್ ನ್ಯಾಯಾಲಯವು ಆತನನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ನನಗೆ ಮರಣದಂಡನೆ ಕೊಟ್ಟುಬಿಡಿ!

ಸಾಮಾನ್ಯವಾಗಿ ಕೊಲೆ ಮಾಡಿದವರು ಸಾಕ್ಷ್ಯ ನಾಶಪಡಿಸಲು ಅಥವಾ ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡುತ್ತಾರೆ. ಆದರೆ, ಈ ಸೈಕೋ ವೈದ್ಯ ಮಾತ್ರ ಕೊಲೆ ಮಾಡಿದ ನಂತರ ಎಲ್ಲಿಗೂ ಓಡಿಹೋಗಿರಲಿಲ್ಲ. ಸ್ಥಳೀಯರು ಮಾಹಿತಿ ನೀಡಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ, ಮನೆಯ ಮೆಟ್ಟಿಲುಗಳ ಮೇಲೆ ರಕ್ತಸಿಕ್ತವಾಗಿ ಕುಳಿತಿದ್ದ ಡಾ. ಮನೀಶ್ ಗುಪ್ತಾ, ಪೊಲೀಸರನ್ನು ನೋಡಿ ತಣ್ಣಗೆ, ನನಗೆ ಮರಣದಂಡನೆ ನೀಡಿ ಎಂದು ಹೇಳಿದ್ದಾನೆ.

ಟೆರೇಸ್ ಮೇಲೆ ರಕ್ತದ ಮಡುವಿನಲ್ಲಿ ಹೆಣ!

ಬೆಳಗ್ಗೆ ಸುಮಾರು 11.36 ರ ಸುಮಾರಿಗೆ ಪಕ್ಕದ ಬಿಲ್ಡಿಂಗ್‌ನ ನಿವಾಸಿಯೊಬ್ಬರು ಟೆರೇಸ್ ಕಡೆ ನೋಡಿದಾಗ ಈ ದಾರುಣ ದೃಶ್ಯ ಬೆಳಕಿಗೆ ಬಂದಿದೆ. ಮೀನಾ ಅವರ ಮೃತದೇಹ ಮನೆಯ ಟೆರೇಸ್ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಸ್ಥಳಕ್ಕೆ ಧಾವಿಸಿದ ಉಪ ಪೊಲೀಸ್ ಆಯುಕ್ತ ಹೇಮಂತ್ ತಿವಾರಿ ನೇತೃತ್ವದ ತಂಡ, ಶವದ ಬಳಿಯೇ ಇದ್ದ ವೈದ್ಯನನ್ನು ತಕ್ಷಣ ಲಾಕ್ ಮಾಡಿದೆ. ಕೊಲೆಗೆ ಬಳಸಲಾಗಿದ್ದ ಕ್ರಿಕೆಟ್ ಬ್ಯಾಟ್ ಹಾಗೂ ರಕ್ತದ ಕಲೆಗಳಿದ್ದ ಅಡುಗೆಮನೆಯ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ವೈದ್ಯನೊಬ್ಬನೇ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಹೆಂಡತಿ ಜೊತೆ ಜಗಳವೇ ಕೊಲೆಗೆ ಕಾರಣ?

ಪೊಲೀಸ್ ಮೂಲಗಳ ಪ್ರಕಾರ, ಡಾ. ಮನೀಶ್ ಗುಪ್ತಾ ಕಳೆದ ಹತ್ತು ವರ್ಷಗಳಿಂದ ತೀವ್ರ ಖಿನ್ನತೆ ಮತ್ತು ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್ (OCD) ಕಾಯಿಲೆಯಿಂದ ಬಳಲುತ್ತಿದ್ದ ಹಾಗೂ ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ.

ವೈದ್ಯ ಮನೀಶ್‌ಗೆ ಕಳೆದ ಕೆಲವು ದಿನಗಳಿಂದ ಮೀನಾಳನ್ನು ಕೆಲಸದಿಂದ ತೆಗೆದುಹಾಕಬೇಕು ಎಂಬ ಹಠವಿತ್ತು. ಆದರೆ ಆತನ ಪತ್ನಿ ಮಾತ್ರ ಇದಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದರು. 15 ವರ್ಷಗಳಿಂದ ಮನೆಯಲ್ಲಿದ್ದ ನಂಬಿಕಸ್ಥ ಮಹಿಳೆಯನ್ನು ತೆಗೆಯಲು ಪತ್ನಿ ಒಪ್ಪದ ಕಾರಣ, ದಂಪತಿಗಳ ನಡುವೆ ಪ್ರತಿದಿನ ದೊಡ್ಡ ಜಗಳವಾಗುತ್ತಿತ್ತು ಎನ್ನಲಾಗಿದೆ. ಇದೇ ಸಿಟ್ಟಿನಲ್ಲಿ ವೈದ್ಯ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಸಹಾಯಕ್ಕಾಗಿ ಕೇಳಿಬಂದಿದ್ದ ಕೂಗು!

ಘಟನೆ ನಡೆಯುವ ಮುನ್ನ ಟೆರೇಸ್ ಕಡೆಯಿಂದ ಜೋರಾಗಿ ಕಿರುಚಾಡುವ ಮತ್ತು ಸಹಾಯಕ್ಕಾಗಿ ಬೇಡುವ ಧ್ವನಿ ಕೇಳಿಸಿತ್ತು ಎಂದು ನೆರೆಹೊರೆಯವರು ಹಾಗೂ ಸುತ್ತಮುತ್ತಲಿನ ಮನೆಕೆಲಸದವರು ಹೇಳಿದ್ದಾರೆ. ಆದರೆ, ಅದು ಗಂಡ-ಹೆಂಡತಿಯ ಜಗಳವಿರಬಹುದು ಎಂದು ಯಾರೂ ಗಮನ ಹರಿಸಿಲ್ಲ. ಅಷ್ಟರಲ್ಲೇ ಮೀನಾ ಪ್ರಾಣ ಪಕ್ಷಿ ಹಾರಿಹೋಗಿದೆ.

WhatsApp Group Join Now

Spread the love

Leave a Reply