ಈ ಕಾಲದಲ್ಲಿ ಸ್ನೇಹ ಸಂಬಂಧಗಳೆಲ್ಲ ಹಳಸಲು, ಯಾರನ್ನೂ ನಂಬುವಂತಿಲ್ಲ, ನಂಬಿಕೆದ್ರೋಹ ಎಸಗುವ ಪ್ರಕರಣಗಳು ದಿನೇದಿನೆ ನಡೆಯುತ್ತಲೇ ಇವೆ. ಬೆಂಗಳೂರಿನ ಆರ್ಆರ್ ನಗರದಲ್ಲಿ ಅಂಥದ್ದೊಂದು ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸ್ನೇಹಿತೆಯ ಮನೆಗೆ ಆಗಾಗ್ಗೆ ಓಡಾಡುತ್ತಿದ್ದ ದಂಪತಿ, ಅದೇ ಮನೆಯಲ್ಲಿದ್ದ ಚಿನ್ನಾಭರಣದ ಮೇಲೆ ಕಣ್ಣಿಟ್ಟಿದ್ದರು.
ಮನೆಯಾಕೆಯ ನಂಬಿಕೆ ಗಳಿಸಿದ್ದ ಈ ಜೋಡಿ, ಯಾರಿಗೂ ಅನುಮಾನ ಬಾರದಂತೆ ಪ್ಲ್ಯಾನ್ ಮಾಡಿಕೊಂಡು ಚಿನ್ನಾಭರಣ ಎಗರಿಸಿದ್ದರು.
ಕಣ್ಣು ಕಾಣದ ಮಹಿಳೆಗೆ ಚಿನ್ನಾಭರಣ ಕದ್ದಿದ್ದು ಗೊತ್ತಾಗಲೇ ಇಲ್ಲ
ಪದ್ಮಜಾರಾವ್ ಎಂಬ ಮಹಿಳೆಗೆ ಕಣ್ಣು ಕಾಣಿಸುತ್ತಿರಲಿಲ್ಲ. ಇದನ್ನೇ ದುರುಪಯೋಗ ಮಾಡಿಕೊಂಡ ಆರೋಪಿಗಳಾದ ಶರ್ಮಿಳಾ ಮತ್ತು ಗಣೇಶ್ ಕುಮಾರ್, ಒಂದು ವರ್ಷದ ಹಿಂದೆಯೇ ಮನೆಯಲ್ಲಿ ಇಟ್ಟಿದ್ದ ಚಿನ್ನಾಭರಣವನ್ನು ಸ್ವಲ್ಪ ಸ್ವಲ್ಪವಾಗಿ ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಮನೆಯಲ್ಲೇ ಓಡಾಡುತ್ತಿದ್ದವರ ಮೇಲೆ ಅನುಮಾನವೇ ಬರಲಿಲ್ಲ. ಚಿನ್ನ ಕಣ್ಮರೆಯಾಗಿದ್ದರೂ, ಪದ್ಮಜಾರಾವ್ ಅವರಿಗೆ ಚಿನ್ನ ಕಳುವು ಆಗಿರುವ ಬಗ್ಗೆ ಸುಳಿವೇ ಇರಲಿಲ್ಲ.
ಒಂದು ವರ್ಷ ಬಳಿಕ ಅನುಮಾನ… ಠಾಣೆ ಮೆಟ್ಟಿಲೇರಿದ ಮಹಿಳೆ!
ಇತ್ತೀಚೆಗೆ ಮನೆಯಲ್ಲಿದ್ದ ಚಿನ್ನಾಭರಣ ಸಂಪೂರ್ಣ ಕಾಣೆಯಾಗಿರುವ ಅನುಮಾನ ಬಂದು, ಇದೇ ಮೇ ತಿಂಗಳಲ್ಲಿ ಪದ್ಮಜಾರಾವ್ ಆರ್ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮನೆಯವರ ಓಡಾಟ ಮತ್ತು ಪರಿಚಯಸ್ಥರ ಮಾಹಿತಿ ಆಧರಿಸಿ ತನಿಖೆ ಆರಂಭಿಸಿದರು.
ಪೊಲೀಸರ ಬಲೆಗೆ ಬಿದ್ದ ಖತರ್ನಾಕ್ ದಂಪತಿ
ತನಿಖೆ ವೇಳೆ ಶರ್ಮಿಳಾ ಮತ್ತು ಗಣೇಶ್ ಕುಮಾರ್ ಮೇಲೆಯೇ ಪೊಲೀಸರಿಗೆ ಅನುಮಾನ ಗಟ್ಟಿಯಾಗುತ್ತಾ ಹೋಯ್ತು. ಈ ದಂಪತಿಗಳು ಪದ್ಮಜಾರಾವ್ ಮನೆಗೆ ಹೆಚ್ಚು ಬರುತ್ತಿದ್ದಿದ್ದು ಯೋಗಕ್ಷೇಮ ವಿಚಾರಿಸುವುದಕ್ಕಿಂತಲೂ ಮನೆಯಲ್ಲಿದ್ದ ಚಿನ್ನಾಭರಣ ದೋಚಲು ಎಂಬುದು ಖಾತ್ರಿ ಆಗಿತ್ತು. ಕೊನೆಗೆ ಇಬ್ಬರನ್ನೂ ಬಂಧಿಸಿದ ಆರ್ಆರ್ ನಗರ ಪೊಲೀಸರು. ಮೊದಲಿಗೆ ದಂಪತಿ ತಾವು ಕಳ್ಳತನ ಮಾಡಿಲ್ಲ ಎಂದು ಸಾಚಾತನ ತೋರಿಸಿದ್ದರು. ಆದರೆ ಆದರೆ ಪೊಲೀಸರು ತನಿಖೆ ಯಾವ ರೀತಿ ಇರುತ್ತೆ ಅನ್ನೋದು ಗೊತ್ತಿರುತ್ತಲ್ಲ? ಕೊನೆಗೆ ಚಿನ್ನ ಕದ್ದಿದ್ದು ಬಾಯಿಬಿಟ್ಟಿದ್ದಾರೆ. ಬಳಿಕ ಪೊಲೀಸರು ದಂಪತಿಯಿಂದ ಸುಮಾರು 230 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ನಂಬಿಕೆ ಇಟ್ಟು ಮನೆಗೆ ಒಳಗೆ ಕರೆದುಕೊಂಡ ಸ್ನೇಹಿತರೇ ಕಳ್ಳರಾಗಿದ್ದ ವಿಚಾರ ತಿಳಿದು ಪದ್ಮಜಾರಾವ್ ಕುಟುಂಬ ಬೆಚ್ಚಿಬಿದ್ದಿದೆ. ಅದಕ್ಕೆ ಹೇಳಿದ್ದು, ಯಾರನ್ನೂ ನಂಬದ ಕಾಲವಿದು!
ಕಣ್ಣು ಕಾಣದ ಸ್ನೇಹಿತೆಯ ಮನೆಯಲ್ಲಿ ಚಿನ್ನ ಕದ್ದ ಖತರ್ನಾಕ್ ದಂಪತಿ! ಒಂದು ವರ್ಷದ ಬಳಿಕ ಪ್ರಕರಣ ಬಯಲು, ಅರೆಸ್ಟ್!
WhatsApp Group
Join Now