ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರೂಲ್ಸ್‌ ತಿರುಪತಿಯಲ್ಲಿ ನಡೆಯಲ್ಲ, ಮೊದಲ ಆರತಿ ವಿಚಾರವಾಗಿ ಸಿಡಿದೆದ್ದ ಟಿಟಿಡಿ

Spread the love

ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಮಂಗಳಾರತಿ ಪ್ರೋಟೋಕಾಲ್ ಬದಲಾವಣೆ ಹಾಗೂ ವಿಐಪಿ ಪ್ರವೇಶಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಪ್ರಸ್ತಾವನೆಗೆ ಟಿಟಿಡಿ ಮಂಡಳಿ ಆಕ್ಷೇಪಣೆ ವ್ಯಕ್ತಡಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ತಿರುಪತಿ ದೇವಸ್ಥಾನದ ವ್ಯವಹಾರಗಳನ್ನು ನೋಡಿಕೊಳ್ಳುವ ಟಿಟಿಡಿ ಮಂಡಳಿಯ ಸದಸ್ಯ ಭಾನು ಪ್ರಕಾಶ್ ರೆಡ್ಡಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ‘ಅತ್ಯಂತ ಪವಿತ್ರವಾದ ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿರುವ ತಿರುಪತಿಯನ್ನು ರಾಜಕೀಯ ಕ್ಷೇತ್ರವನ್ನಾಗಿ ಮಾಡಬೇಡಿ. ಆರತಿಯ ಪ್ರಸ್ತುತ ಪ್ರೋಟೋಕಾಲ್‌ಗಳನ್ನು ನಿಮಗಾಗಿ ಬದಲಾಯಿಸಲಾಗುವುದಿಲ್ಲ,’ ಎಂದು ಹೇಳುವ ಮೂಲಕ ಕರ್ನಾಟಕದ ಸಿಎಂ ಡಿ.ಕೆ.ಶಿವಕುಮಾರ್ ಅವರ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಡಿಕೆ ಶಿವಕುಮಾರ್ ಪ್ರಸ್ತಾವನೆ ಏನು?

ಬೆಂಗಳೂರಿನಲ್ಲಿ ನಡೆದ ಷಣ್ಮುಖ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್ ಅವರು, ‘ತಿರುಪತಿಯಲ್ಲಿ ಪ್ರತಿದಿನ ನಡೆಯುವ ಮೊದಲ ಆರತಿಯ ಹಕ್ಕು ಕರ್ನಾಟಕಕ್ಕೆ ಸೇರಿದ್ದಾಗಿದೆ. ಸದ್ಯ ದೇಗುಲದ ಒಳ ಮುಖ್ಯದ್ವಾರದ ಬಳಿ ತೆರಳಿ ಪೂಜೆ ಮಾಡಲು ರಾಜ್ಯದ ಮುಖ್ಯಮಂತ್ರಿಗಳಿಗೆ ಮಾತ್ರ ಅವಕಾಶವಿದೆ. ಇಲ್ಲವೇ ಸರ್ಕಾರದ ವಿಶೇಷ ಅಧಿಕಾರಿಯೊಬ್ಬರು ಈ ಆರತಿಯನ್ನು ಸ್ವೀಕರಿಸುತ್ತಾರೆ. ಇನ್ಮುಂದೆ ರಾಜ್ಯದ ಸಚಿವರು, ಶಾಸಕರು, ಸಂಸದರು, ನ್ಯಾಯಾಧೀಶರು ಹಾಗೂ ಹಿರಿಯ ಅಧಿಕಾರಿಗಳು ತಿರುಪತಿಗೆ ಭೇಟಿ ನೀಡಿದಾಗ ಈ ಅವಕಾಶ ಸಿಗುವಂತೆ ಅಧಿಕೃತ ಆದೇಶ ಹೊರಡಿಸಲಾಗುವುದು,’ ಎಂದು ತಿಳಿಸಿದ್ದರು.

ಅನೇಕ ಶಾಸಕರು, ಜನಪ್ರತಿನಿಧಿಗಳು ತಿರುಪತಿಗೆ ಹೋದಾಗ ದರ್ಶನ ಸಿಗದೇ ವಾಪಸ್‌ ಬಂದಿದ್ದಾರೆ. ಈಗ ದೇವರ ಮುಂದೆ ನಿಂತು ಆರತಿ ಪಡೆಯಲು ಅವಕಾಶ ನೀಡಲಾಗುವುದು. ಈ ರಾಜ್ಯದ ಸೇವೆ ಮಾಡುವವರಿಗೆ ದೇವರಲ್ಲಿ ಪ್ರಾರ್ಥನೆ ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ,’ ಎಂದು ಕರ್ನಾಟಕ ಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದರು. ಆದರೆ ಇದಕ್ಕೆ ಟಿಟಿಡಿ ಆಕ್ಷೇಪ ವ್ಯಕ್ತಪಡಿಸಿದೆ.

ಸಿಎಂ ಡಿ.ಕೆ.ಶಿವಕುಮಾರ್ ಪ್ರಸ್ತಾವನೆ ಟಿಟಿಡಿ ಆಕ್ಷೇಪ

ಡಿ.ಕೆ.ಶಿವಕುಮಾರ್ ಅವರ ಈ ಪ್ರಸ್ತಾವನೆಗೆ ಆಂಧ್ರಪ್ರದೇಶದ ಆಡಳಿತಾರೂಢ ಬಿಜೆಪಿ ವಕ್ತಾರರೂ ಆಗಿರುವ ಟಿಟಿಡಿಯ ಮಂಡಳಿಯ ಸದಸ್ಯ ಜಿ.ಭಾನುಪ್ರಕಾಶ್ ರೆಡ್ಡಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ‘ತಿರುಪತಿಯಲ್ಲಿ ಬೆಳಗಿನ ಪ್ರಥಮ ಆರತಿಯ ಗೌರವವು ಮೈಸೂರು ಮಹಾರಾಜರ ಕುಟುಂಬಕ್ಕೆ ಇರುವ ಐತಿಹಾಸಿಕ ಮತ್ತು ಸಾಂಪ್ರದಾಯಿಕ ಹಕ್ಕಾಗಿದೆ. ಆ ಸಂಸ್ಥಾನವು ನೀಡಿದ ಅಪಾರ ಕೊಡುಗೆ ಮತ್ತು ದಾನ ಧರ್ಮಗಳನ್ನು ಗೌರವಿಸಿ ಈ ವಿಶೇಷ ಸೌಲಭ್ಯವನ್ನು ಮೈಸೂರು ಅರಸರಿಗೆ ಮತ್ತು ಅವರ ಪ್ರತಿನಿಧಿಗಳಿಗೆ ನೀಡಿತ್ತು. 1956ರಲ್ಲಿ ಕರ್ನಾಟಕ ಏಕೀಕರಣದ ಬಳಿಕ ರಾಜ್ಯ ಸರ್ಕಾರದ ಒಬ್ಬ ವಿಶೇಷ ಪ್ರತಿನಿಧಿಗೆ ಮಾತ್ರ ಇದನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ,’ ಎಂದು ಹೇಳಿದರು.

‘ನಿಯಮಗಳನ್ನು ಬದಲಾಯಿಸಲು ಸಾಧ್ಯವಿಲ್ಲ’

‘ಈ ಸಾಂಪ್ರದಾಯವನ್ನು ಕರ್ನಾಟಕ ಸರ್ಕಾರದ ಶಿಫಾರಸ್ಸಿನ ಮೇರೆಗೆ ಅಲ್ಲಿನ ರಾಜಕಾರಣಿಗಳಿಗೆ, ಶಾಸಕರಿಗೆ ಅಥವಾ ಅಧಿಕಾರಿಗಳಿಗೆ ವಿಸ್ತರಿಸಲು ಸಾಧ್ಯವೇ ಇಲ್ಲ. ಕರ್ನಾಟಕದ ಸಚಿವ ಸಂಪುಟವಾಗಲಿ ಅಥವಾ ಸರ್ಕಾರವಾಗಲಿ ಆಂಧ್ರಪ್ರದೇಶದಲ್ಲಿರುವ ಟಿಟಿಡಿ ನಿಯಮಗಳನ್ನು ಬದಲಾಯಿಸಲು ಸಾಧ್ಯವಿಲ್ಲ,’ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

‘ಕರ್ನಾಟಕದ ರಾಜಕಾರಣಿಗಳಿಗೆ ಈ ವಿಶೇಷ ಸೌಲಭ್ಯ ನೀಡಿದರೆ, ಮುಂದಿನ ದಿನಗಳಲ್ಲಿ ನೆರೆರಾಜ್ಯಗಳಾದ ತಮಿಳುನಾಡು, ತೆಲಂಗಾಣ ಮತ್ತು ಕೇರಳ ಕೂಡ ಇದೇ ರೀತಿಯ ಸೌಲಭ್ಯಗಳನ್ನು ತಮ್ಮ ಜನಪ್ರತಿನಿಧಿಗಳಿಗೆ ಕೇಳಲು ಶುರುಮಾಡುತ್ತವೆ. ಇದರಿಂದ ದೇವಸ್ಥಾನದ ಪಾವಿತ್ರ್ಯತೆ ಹಾಳಾಗುವುದಲ್ಲದೆ ಸಾಮಾನ್ಯ ಭಕ್ತರಿಗೆ ತೊಂದರೆಯಾಗುತ್ತದೆ,’ ಎಂದು ಹೇಳಿದರು.

‘ತಿರುಪತಿಯನ್ನ ರಾಜಕೀಯ ಕ್ಷೇತ್ರ ಮಾಡಬೇಡಿ’

‘ತಿರುಮಲ ಪವಿತ್ರ ಆಧ್ಯಾತ್ಮಿಕ ಕೇಂದ್ರವಾಗಿದ್ದು, ಶಾಸಕರು ಹಾಗೂ ಸಚಿವರಿಗಾಗಿ ಇದನ್ನು ರಾಜಕೀಯ ಕ್ಷೇತ್ರವನ್ನಾಗಿ ಮಾಡಬೇಡಿ. ಅಲ್ಲದೆ ಡಿ.ಕೆ.ಶಿವಕುಮಾರ್ ತಮ್ಮ ಹೇಳಿಕೆಯನ್ನು ತಕ್ಷಣವೇ ಹಿಂಪಡೆಯಬೇಕು,’ ಎಂದು ಭಾನುಪ್ರಕಾಶ್ ರೆಡ್ಡಿ ಅವರು ಎಚ್ಚರಿಕೆಯ ಸೂಚನೆ ನೀಡಿದ್ದಾರೆ.

‘ಈ ಪ್ರಸ್ತಾವನೆಯು ಟಿಟಿಡಿ ನಿಯಮಗಳು ಹಾಗೂ ಸಂಪ್ರದಾಯಗಳಿಗೆ ವಿರುದ್ಧವಾಗಿದೆ. ಆದ್ದರಿಂದ ಇದನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ. ಇದನ್ನು ಟಿಟಿಡಿ ಟ್ರಸ್ಟ್ ಬೋರ್ಡ್ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಿ ಕರ್ನಾಟಕ ಸರ್ಕಾರದ ಈ ಪ್ರಸ್ತಾವನೆಯನ್ನು ತಿರಸ್ಕರಿಸುವ ಕುರಿತು ನಿರ್ಣಯ ಕೈಗೊಳ್ಳಲಾಗುವುದು,’ ಎಂದು ಭಾನುಪ್ರಕಾಶ್ ರೆಡ್ಡಿ ತಿಳಿಸಿದ್ದಾರೆ. ಒಟ್ಟಿನಲ್ಲಿ ತಿರುಪತಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಇದನ್ನು ರಾಜಕೀಯ ಕ್ಷೇತ್ರ ಮಾಡಬೇಡಿ. ಇದೆಲ್ಲಾ ಏನೇ ಇದ್ದರೂ ನಿಮ್ಮ ರಾಜ್ಯದಲ್ಲಿ ಇಟ್ಟುಕೊಳ್ಳಿ. ಇಲ್ಲಿ ಡಿಕೆಶಿ ಹೇಳಿದಂತೆ ನಡೆಯಲ್ಲ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ. ಇದು ಇದೀಗ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.

WhatsApp Group Join Now

Spread the love

Leave a Reply