ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಬಿರುಕು ಮೂಡಿಸಲು ಕಾಂಗ್ರೆಸ್ ಯತ್ನ : ಎಚ್‌ಡಿಕೆ ಆರೋಪ

Spread the love

ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದಲ್ಲಿ ಬಿರುಕು ಮೂಡಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ರಾಜ್ಯಸಭೆ ಟಿಕೆಟ್‌ಗೆ ದೇವೇಗೌಡರು ಅರ್ಜಿಯನ್ನೇ ಹಾಕಿರಲಿಲ್ಲ. ಇದುವರೆಗೆ ದೇವೇಗೌಡರ ಬಗ್ಗೆ ಇಲ್ಲದ ಅನುಕಂಪ ಕಾಂಗ್ರೆಸ್‌ಗೆ ಈಗ ಬಂದಿದೆಯೇ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ತಾಲೂಕಿನ ತಗ್ಗಹಳ್ಳಿಯಲ್ಲಿ ರಾಜ್ಯಸಭೆ ಪ್ರವೇಶಕ್ಕೆ ದೇವೇಗೌಡರಿಗೆ ಬಿಜೆಪಿ ಟಿಕೆಟ್ ಸಿಗದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಟಿಕೆಟ್ ಕೊಡುವಂತೆ ದೇವೇಗೌಡರು ಯಾರ ಬಳಿಯೂ ಅರ್ಜಿ ಹಾಕಿರಲಿಲ್ಲ. ಬಿಜೆಪಿ ಪಕ್ಷದಲ್ಲೇ 60 ಜನ ಶಾಸಕರಿರುವಾಗ ನಾವು ಕೇಳುವುದು ಎಷ್ಟರಮಟ್ಟಿಗೆ ಸರಿ. 70 ವರ್ಷದ ಗೌಡರ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಹೇಗೆ ನಡೆಸಿಕೊಂಡಿದೆ ಎನ್ನುವುದು ಗೊತ್ತಿದೆ. ಈಗ ದೇವೇಗೌಡರ ಬಗ್ಗೆ ಅನುಕಂಪದ ಮಾತುಗಳನ್ನಾಡುತ್ತಿದ್ದಾರೆ. ಮುಂಬರುವ ಚುನಾವಣೆ ಬಗ್ಗೆ ಮೈತ್ರಿಪಕ್ಷದ ಬಗ್ಗೆ ಅವರಿಗೆ ಆತಂಕವಿದೆ. ಅದಕ್ಕಾಗಿ ಮೈತ್ರಿಯಲ್ಲಿ ಬಿರುಕು ಮೂಡುವಂತೆ ಮಾಡಲು ಒಕ್ಕಲಿಗರಿಗೆ ಅನ್ಯಾಯ ಎಂದು ಬೊಗಳೆ ಬಿಡುತ್ತಿದ್ದಾರೆ ಎಂದು ದೂಷಿಸಿದರು.

ಈ ಹಿಂದೆಯೂ ದೇವೇಗೌಡರು ಕಾಂಗ್ರೆಸ್ ಬೆಂಬಲದಿಂದ ರಾಜ್ಯಸಭೆಗೆ ಹೋಗಿರಲಿಲ್ಲ. ದೇವೇಗೌಡರ ವಿರುದ್ಧ ಮತ್ತೊಬ್ಬ ಅಭ್ಯರ್ಥಿ ನಿಲ್ಲುವ ಅವಕಾಶ ಇರಲಿಲ್ಲ. ಹಾಗಾಗಿ ಅವರನ್ನು ಅನಿವಾರ್ಯವಾಗಿ ಬೆಂಬಲಿಸಬೇಕಾಯಿತು. ದೇವೇಗೌಡರದ್ದು ಹೋರಾಟದ ಬದುಕು. ಅಧಿಕಾರ ಕೇಳಿಕೊಂಡು ಇನ್ನೊಬ್ಬರ ಮನೆ ಬಾಗಿಲಿಗೆ ಎಂದೂ ಹೋಗಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಪ್ರಧಾನಿ ಸ್ಥಾನವನ್ನೇ ಬಿಟ್ಟು ಬಂದರು ಎಂದರು.

ರಾಜ್ಯದಲ್ಲಿ ಒಕ್ಕಲಿಗ ಮುಖ್ಯಮಂತ್ರಿ ಇರಬೇಕಾದರೆ ರಾಜ್ಯಸಭೆ ತೆಗೆದುಕೊಂಡು ಏನು ಮಾಡುತ್ತೀರಾ. ಏನು ಮಾಡುವರೆಂದು ಎರಡು ತಿಂಗಳು ಕಾದು ನೋಡೋಣ ಎಂದ ಕುಮಾರಸ್ವಾಮಿ, ನಾನು ಸಲಹೆ ನೀಡುವಷ್ಟು ದೊಡ್ಡವನಲ್ಲ. ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿ ಏನು ಹರಿದಿದ್ದಾರೆ ಎಂದು ಅವರೇ (ಡಿ.ಕೆ.ಶಿವಕುಮಾರ್) ಹೇಳಿದ್ದಾರೆ. ಎಲ್ಲದಕ್ಕೂ ಸಾಕ್ಷಿ ಗುಡ್ಡೆ ಕೇಳುತ್ತಾರೆ. ಹಾಗಾಗಿ ನಾನೇನು ಹರಿದಿಲ್ಲ, ನಮ್ಮ ಬಳಿ ಏನು ಸಲಹೆ ಕೇಳುತ್ತಾರೆ ಎಂದು ವ್ಯಂಗ್ಯವಾಡಿದರಲ್ಲದೇ, ‘ಅತಿ ವಿನಯಂ ಧೂರ್ತ ಲಕ್ಷಣಂ’ ಎಂದು ಮೂದಲಿಸಿದರು.

ಗೇಮ್ ಪ್ಲಾನ್ ಇಲ್ಲ

ಮುಂದಿನ 2028ರ ಚುನಾವಣೆಯಲ್ಲಿ ಗೆದ್ದು ನಾನು ಸಿಎಂ ಆಗುವುದಕ್ಕಿಂತ ಹೆಚ್ಚಾಗಿ ರಾಜ್ಯದ ಜನರನ್ನು ಉಳಿಸಬೇಕಿದೆ. ಆ ಶಕ್ತಿ ಮೈತ್ರಿ ಪಕ್ಷಗಳಿಗೆ ತರುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ವಿಧಾನ ಪರಿಷತ್‌ಗೆ ಜೆಡಿಎಸ್‌ನಿಂದ ಅಭ್ಯರ್ಥಿ ಹಾಕಿರುವ ವಿಚಾರದ ಬಗ್ಗೆ ಕೇಳಿದಾಗ, ನಮಗೂ ಎರಡು ಮತ ಬೇಕು, ಕಾಂಗ್ರೆಸ್‌ನವರಿಗೂ ಎರಡು ಮತ ಬೇಕು. ಇದರಲ್ಲಿ ಯಾವುದೇ ಗೇಮ್ ಪ್ಲಾನ್ ಇಲ್ಲ. ನಾವು ಬಿಜೆಪಿಯಿಂದ ಉಚ್ಚಾಟನೆಯಾಗಿರುವ ಯತ್ನಾಳ್ ಅವರನ್ನು ಕೇಳುತ್ತೇವೆ. ಅವರಿಗೆ ಹಣ ಬಲ ಇದೆ, ನೋಡೋಣ ಏನಾಗುತ್ತೆ ಎಂದರು.

WhatsApp Group Join Now

Spread the love

Leave a Reply