ಜೆಡಿಎಸ್ ಕಾರ್ಯಕರ್ತರಿಗೆ ನನ್ನ ಮನೆ ಬಾಗಿಲು ಸದಾ ತೆರೆದಿದೆ : JDS ಕಾರ್ಯಕರ್ತರಿಗೂ ಮುಕ್ತ ಕರೆ ನೀಡಿದ ಸಿಎಂ ಡಿ.ಕೆ.ಶಿವಕುಮಾರ್

Spread the love

ಜನತಾದಳದ ಕಾರ್ಯಕರ್ತರಿಗೂ ಈ ಡಿ.ಕೆ. ಶಿವಕುಮಾರ್ ಇದ್ದಾನೆ. ನನ್ನ ಮನೆ ಬಾಗಿಲು ನಿಮಗೂ ತೆರೆದಿದೆ. ನೀವು ನನ್ನನ್ನು ಬಳಸಿಕೊಂಡು, ಸಹಾಯ ಪಡೆಯಬಹುದು ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಜೆಡಿಎಸ್ ನವರಿಗೆ ಮುಕ್ತ ಕರೆ ನೀಡಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಡಿ.ಕೆ.ಶಿವಕುಮಾರ್ ಅವರು ಇದೇ ಮೊದಲ ಬಾರಿಗೆ ತವರು ಕ್ಷೇತ್ರ ಕನಕಪುರದ ವಿವಿಧ ಭಾಗಗಳಿಗೆ ಭೇಟಿ ನೀಡಿ ಜನರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.

ನಿಮಗೆ ಒಳ್ಳೆಯದು ಮಾಡಲು ನಾನು ಸಿದ್ಧನಾಗಿದ್ದೇ‌ನೆ. ದೇವರು ವರ, ಶಾಪ ನೀಡುವುದಿಲ್ಲ‌. ಅವಕಾಶ ಮಾತ್ರ ನೀಡುತ್ತಾನೆ. ನೀವು ಸಿಕ್ಕಂತಹ ಅವಕಾಶವನ್ನು ಬಳಸಿಕೊಳ್ಳಬೇಕು‌‌. ಬಿಜೆಪಿಯನ್ನು ದೂರ ಇಡಬೇಕು ಎಂದು ಹಿಂದೆ ಅನಿತಾ ಕುಮಾರಸ್ವಾಮಿ ಹಾಗೂ ಕುಮಾರಸ್ವಾಮಿ ಅವರಿಗೆ ನಾವು ಬೆಂಬಲ ನೀಡಿದ್ದೆವು. ಈ ಹಿಂದೆ ಆಗಿದ್ದನ್ನು ನಾನು ಈಗ ಚರ್ಚೆ ಮಾಡುವುದಿಲ್ಲ ಎಂದು ಹೇಳಿದರು.‌

ಈ ಕ್ಷೇತ್ರದಲ್ಲಿ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಲಾಗುವುದು. ಲೋಕಸಭೆ ಚುನಾವಣೆಯಲ್ಲಿ ನಮಗೆ ಬೆಂಬಲ ಕೊಡಲಿಲ್ಲ ಎಂದು ದೂಷಣೆ ಮಾಡುವುದಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಏನೋ ಒಮ್ಮೆ ಹೆಚ್ಚು ಕಮ್ಮಿ ಆಗಿ ತಪ್ಪಾಗಿದೆ. ಅದನ್ನು ಕ್ಷಮಿಸಿ, ಮುಂದೆ ನನ್ನನ್ನು ಯಾವ ರೀತಿ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಿಸಿದ್ದೀರೋ ಅದೇ ರೀತಿ ನಮ್ಮವರನ್ನು ಮುಂದೆಯೂ ಬೆಂಬಲಿಸಿ. ಎಲ್ಲಾರೂ ಒಂದಾಗಿ ಹೋಗೋಣ. ನಮ್ಮ ಮುಖಂಡರು ಯಾರ ವಿರುದ್ಧವೂ ದ್ವೇಷ ಸಾಧಿಸಬಾರದು. ಅವರ ಮನಪರಿವರ್ತನೆ ಆಗಲಿ ಎಂದು ಪ್ರಾರ್ಥಿಸಿ ಎಂದರು.

ನನ್ನ ಕಷ್ಟ ಕಾಲದಲ್ಲಿ ನೀವು ನನಗಾಗಿ ಪ್ರಾರ್ಥನೆ ಮಾಡಿದ್ದೀರಿ, ಹರಕೆ ಕಟ್ಟಿಕೊಂಡಿದ್ದೀರಿ, ಹೋರಾಟ ಮಾಡಿದ್ದೀರಿ, ಕೇಸ್ ಹಾಕಿಸಿಕೊಂಡಿದ್ದೀರಿ. ನಿಮ್ಮ ಶ್ರಮಕ್ಕೆ ಈಗ ಫಲ ಸಿಕ್ಕಿದೆ. ಎರಡು ದಿನ ತಡವಾದರೂ ಸಿದ್ದರಾಮಯ್ಯ ಅವರು ನುಡಿದಂತೆ ನಡೆದಿದ್ದಾರೆ. ನಾನು ಪಕ್ಷದ ಮಾರ್ಗದರ್ಶನದಂತೆ ನಡೆಯಬೇಕು. ನಾನು ಹಾಗೂ ಸಿದ್ದರಾಮಯ್ಯ ಅವರು ಸೇರಿ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ,ಸರ್ಕಾರ ರಚಿಸಲು ನೀವು ಅನುವು ಮಾಡಿಕೊಡಬೇಕು ಎಂದರು.

ನನಗೆ ಜಾತಿ, ಧರ್ಮ ಬೇಧ ಭಾವದ ಮೇಲೆ ನಂಬಿಕೆ ಇಲ್ಲ. ಕುವೆಂಪು ಅವರು ಹೇಳಿರುವಂತೆ ಈ ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ಮಾಡಬೇಕು. ಎಲ್ಲ ಸಮುದಾಯದವರನ್ನು ನಾನು ನನ್ನ ಅಣ್ಣ ತಮ್ಮಂದಿರೆಂದು ಕಂಡಿದ್ದೇನೆ ಎಂದು ಹೇಳಿದರು.

ಎಸ್ ಐಆರ್ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ನಮ್ಮ ಮತ ಇದೆ ಎಂದು ಭಾವಿಸಿ ಸುಮ್ಮನಾದರೆ ಮತ ಹೋಗುತ್ತದೆ. ಮತ್ತೊಮ್ಮೆ ಎಲ್ಲರೂ ಅರ್ಜಿ ಸಲ್ಲಿಸಬೇಕು. ನೀವು ಅರ್ಜಿ ಸಲ್ಲಿಸದಿದ್ದರೆ ಮತವೂ ಇಲ್ಲ ಜೊತೆಗೆ ಯಾವುದೇ ಸರ್ಕಾರಿ ಯೋಜನೆಗಳ ಲಾಭವೂ ಸಿಗುವುದಿಲ್ಲ. ಗೃಹಲಕ್ಷ್ಮೀ, ಗೃಹಜ್ಯೋತಿ ಯಾವುದೂ ಸಿಗುವುದಿಲ್ಲ. ನಿಮ್ಮ ಮತವನ್ನು ಕನಕಪುರ ಕ್ಷೇತ್ರದಲ್ಲಿಯೇ ಉಳಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಯಾರೂ ವ್ಯವಸಾಯ ಬಿಡಬೇಡಿ, ರೇಷ್ಮೆ ಕೃಷಿ, ತೋಟಗಾರಿಕೆ, ಹೈನುಗಾರಿಕೆ ಮಾಡಿಕೊಂಡಿರಿ. ನೀವು ಬೆಂಗಳೂರಿಗೆ ಹೋಗಿ ಬೀದಿಯಲ್ಲಿ ವ್ಯಾಪಾರ ಮಾಡಿಕೊಂಡು, ಅಂಗಡಿಗಳಲ್ಲಿ ಕೆಲಸ ಮಾಡಬೇಡಿ. ಇಲ್ಲೇ ಇದ್ದು ಸ್ವಾಭಿಮಾನದ ಬದುಕು ಸಾಗಿಸಿ. ಅದಕ್ಕಾಗಿ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರು ಕಲ್ಪಿಸಲಾಗಿದೆ. ನಿಮ್ಮ ಜಮೀನನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬೇಡಿ. ಈ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಎಂದು ಮಾಡಿದ ನಂತರ ಇಲ್ಲಿನ ಭೂಮಿ ಬೆಲೆ ಏನಾಗಿದೆ ಎಂದು ನಿಮಗೆ ಗೊತ್ತಿದೆ. ಈ ಜಿಲ್ಲೆಯ ಹೆಸರು ಬದಲಾವಣೆ ಮಾಡುವಾಗ ಬಿಜೆಪಿ ಹಾಗೂ ದಳದವರು ಟೀಕೆ ಮಾಡಿದರು. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಅದೇ ರೀತಿ ಅವರ ಟೀಕೆಗಳು ಸತ್ತಿವೆ. ನೀವೆಲ್ಲರೂ ಬೆಂಗಳೂರು ಜಿಲ್ಲೆಯ ಮಕ್ಕಳು ಎಂದರು.

ನನ್ನನ್ನು ಜನ ಬಂಡೆ ಎಂದು ಕರೆಯುತ್ತಾರೆ. ಆದರೆ ಕಲ್ಲು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ನೀವು ನನ್ನನ್ನು ಪೂಜಿಸಬೇಡಿ. ಈ ಕಲ್ಲನ್ನು ವಿಧಾನಸೌಧಕ್ಕೆ ಪ್ರವೇಶಿಸುವ ಮೆಟ್ಟಿಲಾಗಿ ಮಾಡಿಕೊಳ್ಳಿ ಎಂದು ತಿಳಿಸಿದರು.

WhatsApp Group Join Now

Spread the love

Leave a Reply