ನಿಮ್ಮ ಕುತಂತ್ರ ನೋಡಿ ಚಾಣಕ್ಯ ಶಾಕ್‌ ಆಗ್ತಿದ್ದ.! ಅಮಿತ್ ಶಾಗೆ ಪ್ರಿಯಾಂಕಾ ಗಾಂಧಿ ಟಾಂಗ್

Spread the love

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಕುರಿತ ಚರ್ಚೆಯ ವೇಳೆ ಕಾಂಗ್ರೆಸ್‌ನ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ‘ಚಾಣಕ್ಯ’ನ ಹೆಸರು ಉಲ್ಲೇಖಿಸಿ ಕಾಲೆಳೆದಿದ್ದಾರೆ.

ಗುರುವಾರ ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಪಕ್ಷವು ಮಹಿಳಾ ಮೀಸಲಾತಿಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ.

ಆದರೆ, ಇಲ್ಲಿ ಚರ್ಚೆ ನಡೆಯುತ್ತಿರುವುದು ಮೀಸಲಾತಿಯ ಬಗ್ಗೆ ಅಲ್ಲ, ಬದಲಾಗಿ ಈ ಮಸೂದೆಯಲ್ಲಿ ಅಡಗಿರುವ ರಾಜಕೀಯ ದುರುದ್ದೇಶದ ಬಗ್ಗೆ ಎಂದು ಗುಡುಗಿದರು.

ಮಹಿಳಾ ಮೀಸಲಾತಿ ಎಂಬುದು ಎನ್‌ಡಿಎ ಸರ್ಕಾರದ ಪಾಲಿಗೆ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ಬಳಸುತ್ತಿರುವ ರಾಜಕೀಯ ಟ್ರಂಪ್ ಕಾರ್ಡ್ ಆಗಿದೆ. ಬಿಜೆಪಿ ಸಂವಿಧಾನಕ್ಕೆ ಧಕ್ಕೆ ತರುವ ಮೂಲಕ ತನ್ನ ಪಕ್ಷದ ಬುನಾದಿಯನ್ನು ಭದ್ರಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ತಮ್ಮ ಮಾತಿಗೆ ಅಮಿತ್ ಶಾ ಹಾಗೂ ಇತರ ಬಿಜೆಪಿ ಸಂಸದರು ನಗುತ್ತಿರುವುದನ್ನು ಗಮನಿಸಿದ ಪ್ರಿಯಾಂಕಾ ಗಾಂಧಿ, “ನೀವೆಲ್ಲರೂ ಸಂಪೂರ್ಣವಾಗಿ ಪ್ಲಾನ್ ಮಾಡಿಕೊಂಡೇ ಬಂದಿದ್ದೀರಿ. ಇಂದು ಒಂದು ವೇಳೆ ಚಾಣಕ್ಯ ಬದುಕಿದ್ದರೆ, ಆತನೂ ಕೂಡ ನಿಮ್ಮ ಕುತಂತ್ರವನ್ನು ನೋಡಿ ಆಘಾತಕ್ಕೊಳಗಾಗುತ್ತಿದ್ದ ಎಂದು ಚಾಟಿ ಬೀಸಿದರು. ಪ್ರಿಯಾಂಕಾ ಅವರ ಈ ಮಾತು ಕೇಳಿ ಅಮಿತ್ ಶಾ, ಕಿರಣ್ ರಿಜಿಜು ಸೇರಿದಂತೆ ಹಲವು ಬಿಜೆಪಿ ಸಂಸದರು ಜೋರಾಗಿ ನಕ್ಕರು.

ಮಹಿಳೆಯರಿಗೆ ಯಾರು ಸುಳ್ಳು ಹೇಳುತ್ತಿದ್ದಾರೆ ಎಂಬುದನ್ನು ಗ್ರಹಿಸುವ ಶಕ್ತಿ ಇರುತ್ತದೆ. ಹಾಗಾಗಿ ಬಿಜೆಪಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಪ್ರಧಾನಿಯವರು ತಾವೇ ಮಹಿಳಾ ಮೀಸಲಾತಿಯ ಅತಿ ದೊಡ್ಡ ಬೆಂಬಲಿಗರು ಹಾಗೂ ಪ್ರತಿಪಾದಕರು ಎಂಬಂತೆ ಮಾತನಾಡಿದರು.

2023ರಲ್ಲಿ ರಾಹುಲ್ ಗಾಂಧಿ ಪತ್ರ ಬರೆದ ಬಳಿಕ ಈ ಮಸೂದೆ ಅಂಗೀಕಾರವಾದಾಗ, ಕಾಂಗ್ರೆಸ್ ತನ್ನ ಸಿದ್ಧಾಂತಕ್ಕೆ ಅನುಗುಣವಾಗಿ ಅದನ್ನು ಸಂಪೂರ್ಣವಾಗಿ ಬೆಂಬಲಿಸಿತ್ತು” ಎಂದು ಸ್ಪಷ್ಟಪಡಿಸಿದರು.

WhatsApp Group Join Now

Spread the love

Leave a Reply