ತುಮಕೂರು ಜಿಲ್ಲೆಯ (Tumkur) ಶಿರಾ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿಯೇ ನಾಡಬಾಂಬ್ ಸ್ಫೋಟಿಸಿಕೊಂಡು (Bomb Blast) ಪಾಗಲ್ ಪ್ರೇಮಿ ನಾಗೇಂದ್ರ ಆತ್ಮಹತ್ಯೆ (Crime) ಮಾಡಿಕೊಂಡ ಭೀಕರ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೀಗ ನೊಂದ ಯುವತಿ ರಮ್ಯಾ ಪೊಲೀಸರಿಗೆ ಒಂದೊಂದೇ ಆಘಾತಕಾರಿ ಸತ್ಯಗಳನ್ನು ಬಿಚ್ಚಿಟ್ಟಿದ್ದಾಳೆ.
ಆಸ್ಪತ್ರೆಯ ಚಿಕಿತ್ಸೆ ನಡುವೆಯೇ ಕಳ್ಳಂಬೆಳ್ಳ ಪೊಲೀಸ್ ಠಾಣೆಗೆ ಬರೋಬ್ಬರಿ ನಾಲ್ಕು ಪುಟಗಳ ಸುದೀರ್ಘ ದೂರು ನೀಡಿರುವ ರಮ್ಯಾ, ಮೃತರಾಗಿದ್ದ ನಾಗೇಂದ್ರ ತನಗೆ ನೀಡುತ್ತಿದ್ದ ನರಕಯಾತನೆಯನ್ನು ಎಳೆಎಳೆಯಾಗಿ ವಿವರಿಸಿದ್ದಾಳೆ. ಈ ದೂರಿನ ಆಧಾರದ ಮೇಲೆ ಸದ್ಯ ಪೊಲೀಸರು ಮೃತ ನಾಗೇಂದ್ರನ ವಿರುದ್ಧ ಕೊಲೆ ಯತ್ನ ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆಯಡಿ ಅಧಿಕೃತವಾಗಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಪ್ರೀತಿ ಮರೆಯಲ್ಲಿದ್ದ ಕ್ರೂರ ಮುಖ, ಊರು ಬಿಟ್ಟರೂ ಬಿಡದ ಕಿರುಕುಳ!
ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ರಮ್ಯಾ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದ ನಾಗೇಂದ್ರ ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಪ್ರೀತಿ ಆರಂಭವಾದ ಎರಡು ವರ್ಷದ ಬಳಿಕ ನಾಗೇಂದ್ರನ ಅಸಲಿ ನಡವಳಿಕೆ ಹೊರಬಿದ್ದಿತ್ತು.
ಸಣ್ಣಪುಟ್ಟ ವಿಚಾರಗಳಿಗೂ ರಮ್ಯಾಳನ್ನು ಮನಬಂದಂತೆ ಹೊಡೆಯುವುದು, ಸಾರ್ವಜನಿಕವಾಗಿ ಬೈಯುವುದನ್ನು ಆತ ರೂಢಿ ಮಾಡಿಕೊಂಡಿದ್ದ. ಆತನ ಈ ವಿಕೃತ ನಡವಳಿಕೆಯಿಂದ ಬೇಸತ್ತ ರಮ್ಯಾ, ಆತನಿಂದ ಸಂಪೂರ್ಣವಾಗಿ ದೂರಾಗಿದ್ದಳು. ಆತನ ಫೋನ್ ನಂಬರ್ ಕೂಡ ಬ್ಲಾಕ್ ಮಾಡಿದ್ದಳು.
ಆದರೆ, ರಮ್ಯಾ ಎಷ್ಟೇ ದೂರ ಹೋದರೂ ಬಿಡದ ನಾಗೇಂದ್ರ, ಆಕೆ ಇದ್ದ ಜಾಗಕ್ಕೆ ಹುಡುಕಿಕೊಂಡು ಬಂದು ಗಲಾಟೆ ಮಾಡಿ ಹಲ್ಲೆ ನಡೆಸುತ್ತಿದ್ದ. ಆತನ ಕಾಟ ತಡೆಯಲಾರದೆ ರಮ್ಯಾ ತನ್ನ ಸ್ವಗ್ರಾಮವನ್ನೂ ತೊರೆದು ಬೆಂಗಳೂರಿಗೆ ಬಂದಿದ್ದರೂ, ಈ ಪಾಗಲ್ ಪ್ರೇಮಿ ಅಲ್ಲಿಗೂ ಬೆನ್ನತ್ತಿ ಬಂದು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಿನಿಮೀಯ ಶೈಲಿಯಲ್ಲಿ ಕಿಡ್ನಾಪ್; ರಸ್ತೆಯುದ್ದಕ್ಕೂ ಜಗಳ!
ಮದುವೆಗೆ ಒಪ್ಪದ ಹಾಗೂ ತನ್ನನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದ ಪ್ರೇಯಸಿಯ ಮುಗಿಸಲು ಸಂಚು ರೂಪಿಸಿದ್ದ ನಾಗೇಂದ್ರ, ಮುಂಚಿತವಾಗಿಯೇ ಅತ್ಯಂತ ಅಪಾಯಕಾರಿ ನಾಡಬಾಂಬ್ ತಯಾರಿಸಿಕೊಂಡು ಬೆಂಗಳೂರಿಗೆ ಬಂದಿದ್ದ. ಇತ್ತೀಚೆಗೆ ಆಸ್ಪತ್ರೆಯ ಬಳಿ ಬಂದ ಆತ, ರಮ್ಯಾಳನ್ನು ಬಲವಂತವಾಗಿ ಬಾಡಿಗೆ ಕಾರೊಂದರಲ್ಲಿ ಕಿಡ್ನಾಪ್ ಮಾಡಿದ್ದ.
ಈ ಬಗ್ಗೆ ರಮ್ಯಾ ಸ್ನೇಹಿತೆ ಬೆಂಗಳೂರಿನಲ್ಲಿ ಪೊಲೀಸರಿಗೆ ದೂರು ಕೂಡ ನೀಡಿದ್ದರು. ಬೆಂಗಳೂರಿನಿಂದ ಕಾರು ಹತ್ತಿದ ಸಮಯದಿಂದಲೂ ನಾಗೇಂದ್ರ ದಾರಿಯುದ್ದಕ್ಕೂ ರಮ್ಯಾ ಜೊತೆ ಭೀಕರವಾಗಿ ಜಗಳವಾಡುತ್ತಲೇ ಬಂದಿದ್ದ.
ನಿನ್ನ ಸಾಯಿಸಿ ನಾನು ಸಾಯ್ತೀನಿ’ ಎಂದು ಚಾಕುವಿನಿಂದ ಇರಿದು ಬಾಂಬ್ ಬ್ಲಾಸ್ಟ್!
ಕಾರು ತುಮಕೂರು ದಾಟಿ ಶಿರಾ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ ನಾಗೇಂದ್ರನ ಸ್ಯಾಡಿಸಂ ಮಿತಿ ಮೀರಿತ್ತು. “ಇವತ್ತು ನಿನ್ನನ್ನು ಸಾಯಿಸಿ, ನಾನು ಸಾಯುತ್ತೇನೆ” ಎಂದು ಅರಚಾಡಿದ ನಾಗೇಂದ್ರ, ತಾನು ತಂದಿದ್ದ ಚಾಕುವಿನಿಂದ ರಮ್ಯಾಳ ತಲೆ ಹಾಗೂ ಕೈ ತೋಳುಗಳಿಗೆ ಮನಬಂದಂತೆ ಇರಿದಿದ್ದಾನೆ. ಕಾರಿನ ಒಳಗೇ ರಕ್ತದ ಮಡುವಿನಲ್ಲಿ ಯುವತಿ ಕಿರುಚಾಡುತ್ತಿದ್ದನ್ನು ಹಾಗೂ ನಾಗೇಂದ್ರನ ಕೈಯಲ್ಲಿದ್ದ ಬಾಂಬ್ ನೋಡಿ ಭಯಭೀತನಾದ ಕಾರು ಚಾಲಕ, ತಕ್ಷಣವೇ ಹೆದ್ದಾರಿ ಬದಿಯಲ್ಲಿ ವಾಹನ ನಿಲ್ಲಿಸಿ ಜೀವ ಉಳಿಸಿಕೊಳ್ಳಲು ಹೊರಗೆ ಓಡಿಹೋಗಿದ್ದಾನೆ.
ಚಾಲಕ ಕೆಳಗಿಳಿಯುತ್ತಿದ್ದಂತೆ ಕಾರಿನ ಒಳಗೇ ನಾಗೇಂದ್ರ ನಾಡಬಾಂಬ್ ಸ್ಫೋಟಿಸಿಕೊಂಡಿದ್ದಾನೆ. ಸ್ಫೋಟದ ತೀವ್ರತೆಗೆ ನಾಗೇಂದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ರಮ್ಯಾ ತಲೆಗೆ ಗಂಭೀರ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಸದ್ಯ ಈ ಪ್ರಕರಣ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದು, ಕಳ್ಳಂಬೆಳ್ಳ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಕಾರಿನಲ್ಲಿ ನಾಡಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಸ್ಪೋಟಕ ವಿಚಾರ ಬಿಚ್ಚಿಟ್ಟ ಸಂತ್ರಸ್ತೆ.!
WhatsApp Group
Join Now