ಮೇಲ್ನೋಟಕ್ಕೆ ಅದು ಕಾರು ಅಪಘಾತದಂತೆ (Crime) ಕಾಣಿಸಿತ್ತು. ಬೆಂಕಿ ಬಿದ್ದ ಕಾರಿನೊಳಗೆ ನಾಲ್ಕು ಹೆಣಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದವು. ಆದರೆ, ಪೊಲೀಸರು ತನಿಖೆ ನಡೆಸಿದಾಗ ಇಡೀ ರಾಜಸ್ಥಾನವೇ (Rajasthan) ನಡುಗುವಂತಹ ಭೀಕರ ಕೊಲೆ ಕಥೆ ಹೊರಬಂದಿದೆ.
ಕೇವಲ 17 ವರ್ಷದ ಮಗನೇ ತನ್ನ ತಂದೆ ಸೇರಿದಂತೆ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿರುವುದು ಪತ್ತೆಯಾಗಿದೆ.
ಅಜ್ಮೀರ್ ಜಿಲ್ಲೆಯ ಶ್ರೀರಾಮಪುರ ಗ್ರಾಮದ ಮಾಜಿ ಸರ್ಪಂಚ್ ರಾಮ್ ಸಿಂಗ್ ಚೌಧರಿ, ಅವರ ಎರಡನೇ ಪತ್ನಿ ಸುಗ್ಯಾನ್, ತಾಯಿ ಪುಸಿ ದೇವಿ ಮತ್ತು ಸೊಸೆ ಮಹಿಮಾ ಕೊಲೆಯಾದವರು.
ಕೊಲೆ ಮಾಡಿ ಸುಮ್ಮನೆ ಕುಳಿತಿದ್ದ ಮಗ!
ಕಾರಿಗೆ ಬೆಂಕಿ ಬಿದ್ದು ನಾಲ್ವರು ಸತ್ತಿದ್ದಾರೆ ಎಂದು ತಿಳಿದಾಗ ಇಡೀ ಕುಟುಂಬ ಕಣ್ಣೀರಿಡುತ್ತಿತ್ತು. ಆದರೆ, ರಾಮ್ ಸಿಂಗ್ ಅವರ 17 ವರ್ಷದ ಮಗ ಮಾತ್ರ ಏನೂ ತಿಳಿಯದವನಂತೆ ಅತ್ಯಂತ ಶಾಂತನಾಗಿ ಕುಳಿತಿದ್ದ. ತಾಯಿ ಪಕ್ಕದಲ್ಲೇ ಕುಳಿತು ಚಹಾ ಕುಡಿಯುತ್ತಾ ಅವಳನ್ನು ಸಮಾಧಾನ ಮಾಡುತ್ತಿದ್ದ. ಸಾವು-ನೋವಿನ ಮನೆಯಲ್ಲಿ ಈ ಹುಡುಗನಿಗೆ ಯಾವುದೇ ಬೇಸರ ಇಲ್ಲದಿದ್ದನ್ನು ಗಮನಿಸಿದ ಪೊಲೀಸರಿಗೆ ಮೊದಲ ಅನುಮಾನ ಶುರುವಾಯಿತು.
ಆರಂಭದಲ್ಲಿ, ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಕಾರಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ ಎಂದು ಕುಟುಂಬಸ್ಥರು ಸುಳ್ಳು ಹೇಳಿದ್ದರು. ಆದರೆ, ತನಿಖೆ ನಡೆಸಿದಾಗ ಕಾರಿನ ಮುಂಭಾಗದ ಸೀಟಿನಲ್ಲಿ ಯಾರೂ ಇರಲಿಲ್ಲ ಎಂಬುದು ಗೊತ್ತಾಯಿತು. ಎಲ್ಲಾ ನಾಲ್ಕು ಶವಗಳು ಕಾರಿನ ಹಿಂಭಾಗದಲ್ಲೇ ಇದ್ದವು. ಜೊತೆಗೆ, ಒಬ್ಬ ಮಹಿಳೆಯ ದೇಹದ ಮೇಲೆ ಚಾಕುವಿನಿಂದ ಇರಿದ ಗಾಯಗಳಿರುವುದು ಪತ್ತೆಯಾದಾಗ ಇದು ಅಪಘಾತವಲ್ಲ, ಕೊಲೆ ಎಂಬುದು ಖಾತ್ರಿಯಾಯಿತು.
ಕ್ರೈಮ್ ಶೋ ನೋಡಿ 5 ತಿಂಗಳ ಸ್ಕೆಚ್!
ರಾಮ್ ಸಿಂಗ್ ಎರಡನೇ ಮದುವೆಯಾಗಿದ್ದರಿಂದ ಮನೆಯಲ್ಲಿ ಸದಾ ಜಗಳ ನಡೆಯುತ್ತಿತ್ತು. ರಾಮ್ ಸಿಂಗ್ ತನ್ನ ಮೊದಲ ಪತ್ನಿಯನ್ನು ಸರಿಯಾಗಿ ನೋಡಿಕೊಳ್ಳದ ಕಾರಣ ಮಕ್ಕಳಿಗೂ ತಂದೆಯ ಮೇಲೆ ಸಿಟ್ಟಿತ್ತು. ಇದೇ ಕಾರಣಕ್ಕೆ ಮಗ ಕಳೆದ 5 ತಿಂಗಳಿನಿಂದ ಕೊಲೆ ಮಾಡಲು ಪ್ಲಾನ್ ಮಾಡಿದ್ದ. ಸದಾ ಟಿವಿಯಲ್ಲಿ ಕ್ರೈಮ್ ಶೋಗಳನ್ನು ನೋಡುತ್ತಿದ್ದ ಆತ, ಕೊಲೆ ಮಾಡಿದ ಬಳಿಕ ಪೊಲೀಸರಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂಬುದನ್ನು ಕರಗತ ಮಾಡಿಕೊಂಡಿದ್ದ.
ನಡುರಾತ್ರಿ ನಡೆದ ಹತ್ಯಾಕಾಂಡ
ಘಟನೆಯ ದಿನ ರಾತ್ರಿ ತಂದೆ ರಾಮ್ ಸಿಂಗ್ ಮತ್ತು ಅವರ ಎರಡನೇ ಪತ್ನಿ ಸುಗ್ಯಾನ್ ನಿದ್ರಿಸುತ್ತಿದ್ದರು. ಈ ಹುಡುಗ ಬೆಳಗಿನ ಜಾವ 4 ಗಂಟೆಯವರೆಗೂ ಮೊಬೈಲ್ನಲ್ಲಿ ಗೇಮ್ ಆಡುತ್ತಾ ಎಚ್ಚರವಾಗಿದ್ದ. ಎಲ್ಲರೂ ಮಲಗಿದ್ದಾಗ ತಂದೆಯ ಕೋಣೆಗೆ ನುಗ್ಗಿ, ಅವರ ಕಿವಿಯ ಬಳಿ ಚಾಕುವಿನಿಂದ ಬಲವಾಗಿ ಇರಿದು ಕೊಂದಿದ್ದ.
ಈ ವೇಳೆ ಪಕ್ಕದಲ್ಲೇ ಮಲಗಿದ್ದ ಸಾಕುತಾಯಿ ಸುಗ್ಯಾನ್ ಎಚ್ಚರಗೊಂಡು ಕಿರುಚಾಡಿದ್ದಾಳೆ. ಅವಳ ಕಿರುಚಾಟ ಕೇಳಿ ಅಜ್ಜಿ ಪುಸಿ ದೇವಿ ಮತ್ತು ಸೊಸೆ ಮಹಿಮಾ ಓಡಿ ಬಂದಿದ್ದಾರೆ. ಆಗ ಹುಡುಗನಿಗೆ ಸಹಾಯ ಮಾಡಲು ಅವನ ತಾಯಿ (ರಾಮ್ ಸಿಂಗ್ ಮೊದಲ ಪತ್ನಿ) ಮತ್ತು ಸೋದರಿ ಕೂಡ ಕೋಣೆಗೆ ನುಗ್ಗಿದ್ದಾರೆ. ಎಲ್ಲರೂ ಸೇರಿ ಉಳಿದ ಮೂವರನ್ನು ಕೂಡ ಉಸಿರುಗಟ್ಟಿಸಿ, ಇರಿದು ಕೊಂದಿದ್ದಾರೆ.
ಆಸ್ತಿ ವಿವಾದ ಹಾಗೂ ಶವ ದಹನ!
ಸೊಸೆ ಮಹಿಮಾ ಇಡೀ ಕುಟುಂಬದ ಹಣಕಾಸು ಮತ್ತು ಆಸ್ತಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಳು. ಅವಳು ಮತ್ತು ಎರಡನೇ ಪತ್ನಿ ಸೇರಿ ಆಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳಬಹುದು ಎಂಬ ಭೀತಿ ಮೊದಲ ಪತ್ನಿ ಹಾಗೂ ಮಗನಿಗಿತ್ತು. ಹೀಗಾಗಿ ಎಲ್ಲರನ್ನೂ ಮುಗಿಸಿದ ಇಡೀ ಕುಟುಂಬ, ಸಾಕ್ಷ್ಯ ನಾಶ ಮಾಡಲು ಶವಗಳನ್ನು ಕಾರಿನಲ್ಲಿ ಕೂರಿಸಿ ಬೆಂಕಿ ಹಚ್ಚಿತ್ತು.
ಆದರೆ, ಕಳೇಬರದ ಮೇಲಿದ್ದ ಇರಿತದ ಗಾಯಗಳು ಹಾಗೂ ಮಗನ ಅತಿಯಾದ ಶಾಂತ ನಡವಳಿಕೆ ಹಂತಕರ ಭೀಕರ ಪ್ಲಾನ್ ಅನ್ನು ಸಂಪೂರ್ಣವಾಗಿ ಉಲ್ಟಾ ಮಾಡಿದೆ. ಸದ್ಯ ಪೊಲೀಸರು ಅಪ್ರಾಪ್ತ ಹುಡುಗ ಸೇರಿದಂತೆ ಹತ್ಯೆಗೆ ಸಹಕರಿಸಿದವರನ್ನು ಬಂಧಿಸಿದ್ದಾರೆ.
ಕ್ರೈಮ್ ಶೋ ನೋಡಿ ತಂದೆ ಸೇರಿ ನಾಲ್ವರನ್ನು ಕೊಲೆ ಮಾಡಿ ಸುಟ್ಟ ಅಪ್ರಾಪ್ತ ಮಗ!
WhatsApp Group
Join Now