ರಾಜಸ್ಥಾನದಲ್ಲಿ ಲಂಚ ಪಡೆಯುವಾಗ ಬೆಂಗಳೂರಿನ ಪೊಲೀಸರು ಅಲ್ಲಿನ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ACB) ಸಿಕ್ಕಿಬಿದ್ದಿರುವ ಪ್ರಕರಣ ಇಡೀ ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ಉಂಟುಮಾಡಿದೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ‘ಇದು ಯಾರಿಗೂ ಗೌರವ ತರುವ ವಿಚಾರ ಅಲ್ಲ.
ಲಂಚ ಆರೋಪ ಎದುರಿಸುತ್ತಿರುವ ಪೊಲೀಸರನ್ನು ಈಗಾಗಲೇ ಅಮಾನತು ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.
‘ರಕ್ಷಕರೇ ಭಕ್ಷಕರಾದರೆ ಸರಿಯಲ್ಲ. ಈ ಪ್ರಕರಣದಲ್ಲಿ ಕೇವಲ ಕೆಳಹಂತದ ಸಿಬ್ಬಂದಿ ಮಾತ್ರ ಇದ್ದಾರೋ ಅಥವಾ ಇಲಾಖೆಯ ಮೇಲಧಿಕಾರಿಗಳು ಭಾಗಿಯಾಗಿದ್ದಾರಾ ಎಂಬ ಬಗ್ಗೆಯೂ ಸಂಪೂರ್ಣ ಪರಿಶೀಲನೆ ನಡೆಸುತ್ತೇವೆ. ಇಡೀ ವ್ಯವಸ್ಥೆ ತುಕ್ಕು ಹಿಡಿದಿದೆ, ಇದನ್ನು ಸರಿಪಡಿಸಲು ಸ್ವಲ್ಪ ಸಮಯ ಹಿಡಿಯುತ್ತದೆ. ಬೇರು ಮಟ್ಟದಲ್ಲಿ ಎಲ್ಲ ಕಡೆಯೂ ಏನಾದರೂ ಸಮಸ್ಯೆ ಇದ್ದೇ ಇರುತ್ತದೆ. ಆದರೆ, ನಾವು ಬೇರು ಮಟ್ಟದಿಂದಲೇ ವ್ಯವಸ್ಥೆಯನ್ನು ಸರಿಪಡಿಸಿ, ಪೊಲೀಸ್ ಠಾಣೆಗಳಲ್ಲಿ ಜನಸ್ನೇಹಿ ವ್ಯವಸ್ಥೆಯನ್ನು ರೂಪಿಸುತ್ತೇವೆ” ಎಂದು ಗೃಹ ಸಚಿವರು ಭರವಸೆ ನೀಡಿದ್ದಾರೆ.
ಅಸಮರ್ಥ ಗೃಹ ಸಚಿವ ಎಂಬ ಬಿಜೆಪಿ ಟೀಕೆಗೆ ಪ್ರಿಯಾಂಕ್ ಖರ್ಗೆ ತಿರುಗೇಟು
ಗೃಹ ಇಲಾಖೆಯನ್ನು ನಿಭಾಯಿಸಲು ಪ್ರಿಯಾಂಕ್ ಖರ್ಗೆ ಅಸಮರ್ಥರು ಎಂಬ ಬಿಜೆಪಿಯ ಟೀಕೆಗೆ ಸಚಿವರು ತೀವ್ರ ಕಿಡಿಕಾರಿದ್ದಾರೆ. “ನಾನು ಯಾವಾಗಲೂ ಜವಾಬ್ದಾರಿ ಮತ್ತು ಹೊಣೆಗಾರಿಕೆ ತೆಗೆದುಕೊಳ್ಳಲು ಸಿದ್ಧನಿದ್ದೇನೆ. ಆದರೆ ಆರ್. ಅಶೋಕ್, ಆರಗ ಜ್ಞಾನೇಂದ್ರ, ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದಾಗ ರಾಜ್ಯದಲ್ಲಿ ಏನೇನಾಯ್ತೋ ಅದಕ್ಕೆಲ್ಲ ಅವರೇ ಹೊಣೆ ಹೊರುತ್ತಾರಾ? ಅವರ ಅವಧಿಯಲ್ಲಿ ಎಲ್ಲ ಠಾಣೆಗಳನ್ನೂ ಅವರು ಸರಿಯಾಗಿ ನಿಭಾಯಿಸುತ್ತಿದ್ದರಾ? ಆಗ ಲಂಚ ಅನ್ನೋದು ಇರಲೇ ಇಲ್ವಾ? ಆಗಿನ ಆಪಾದನೆಗಳನ್ನು ಸ್ವೀಕರಿಸಲು ಅವರು ರೆಡಿ ಇದ್ದರೆ, ಈಗಿನ ಹೊಣೆಗಾರಿಕೆ ಹೊರಲು ನಾನೂ ರೆಡಿ” ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ. ವಿಪಕ್ಷ ನಾಯಕ ಆರ್. ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ‘ಅಶೋಕ್ ಜವಾಬ್ದಾರಿಯಿಂದ ಒಂದೂ ಸಲ ಮಾತಾಡಿಲ್ಲ. ಅವರ ಶಿರಹಟ್ಟಿ ಶಾಸಕ ಲಂಚ ತಗೊಂಡು ಟ್ರ್ಯಾಪ್ ಆದರಲ್ಲ, ಅದನ್ನು ಅಶೋಕ್ ಒಪ್ಪಿಕೊಂಡರಾ? ಬೇಜವಾಬ್ದಾರಿ ಹೇಳಿಕೆ ಕೊಡೋಕೆ ಮಾತ್ರ ವಿಪಕ್ಷ ನಾಯಕರು ಇರುವುದಲ್ಲ’ ಎಂದಿದ್ದಾರೆ.
ಅಕ್ರಮ ವಲಸಿಗರ ವಿಚಾರ: ‘ಅಸಮರ್ಥ ಗೃಹ ಸಚಿವ ಅಮಿತ್ ಶಾಗೆ ಹೇಳಿ’
ಅಕ್ರಮ ವಲಸಿಗರ ವಿಚಾರವಾಗಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಪ್ರಿಯಾಂಕ್ ಖರ್ಗೆ, “ಬಿಜೆಪಿಯವರು ಅಸಮರ್ಥ ಗೃಹ ಸಚಿವ ಅಂತ ಹೇಳುತ್ತಿರುವುದು ನನಗಲ್ಲ, ಅದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಲ್ಲಬೇಕು. ದೇಶದೊಳಗೆ ಅಕ್ರಮ ವಲಸಿಗರು ಹೇಗೆ ನುಸುಳಿ ಬರುತ್ತಿದ್ದಾರೆ? ಅಕ್ರಮ ವಲಸಿಗರಿಗೂ ಬಿಜೆಪಿಯವರಿಗೂ ನಂಟಿದೆ, ಬಿಜೆಪಿಯವರೇ ಅವರನ್ನು ದೇಶದೊಳಗೆ ಕರೆದುಕೊಂಡು ಬರುತ್ತಿರುವುದು. ಕರ್ನಾಟಕ ರಾಜ್ಯವು ಯಾವುದೇ ವಿದೇಶದ ಜತೆಗೂ ಗಡಿ ಹಂಚಿಕೊಂಡಿಲ್ಲ. ಅಕ್ರಮ ವಲಸಿಗರು ನುಸುಳುವ ಗಡಿಗಳನ್ನು ಹಂಚಿಕೊಂಡಿರುವುದೆಲ್ಲ ಬಿಜೆಪಿ ಆಡಳಿತವಿರುವ ರಾಜ್ಯಗಳೇ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಧರ್ಮಸ್ಥಳ ಬುರುಡೆ ಕೇಸ್: ಎಸ್‌ಐಟಿ ವರದಿ ಕೋರ್ಟ್‌ಗೆ ಸಲ್ಲಿಕೆ
ಧರ್ಮಸ್ಥಳ ಬುರುಡೆ ಪ್ರಕರಣದ ಮಧ್ಯಂತರ ವರದಿಯನ್ನು ಬಹಿರಂಗಪಡಿಸಬೇಕೆಂಬ ಬಿಜೆಪಿಯ ಒತ್ತಾಯಕ್ಕೆ ಉತ್ತರಿಸಿದ ಗೃಹ ಸಚಿವರು, “ನಾವು ಈ ವರದಿಯನ್ನು ಯಾರಿಗೆ ಬಹಿರಂಗ ಪಡಿಸಬೇಕು? ಬಿಜೆಪಿಯವರಿಗೆ ತೋರಿಸಬೇಕಾ? ಬಿಜೆಪಿಯವರನ್ನು ಕೇಳಿ ನಾವು ಸರ್ಕಾರ ನಡೆಸಬೇಕಾ? ಅವರಿಗೆ ಕಾಮನ್ ಸೆನ್ಸ್ ಇದೆಯಾ? ಸದ್ಯ ಎಸ್‌ಐಟಿ (SIT) ವಿಚಾರಣೆ ನ್ಯಾಯಾಲಯದಲ್ಲಿದೆ. ನಾವು ವರದಿಯನ್ನು ನೇರವಾಗಿ ಕೋರ್ಟ್‌ಗೆ ಸಲ್ಲಿಕೆ ಮಾಡುತ್ತೇವೆ. ಕೋರ್ಟ್ ಏನು ನಿರ್ದೇಶನ ನೀಡುತ್ತದೋ ಅದರಂತೆ ನಡೆದುಕೊಳ್ಳುತ್ತೇವೆ ಹೊರತು, ಬಿಜೆಪಿ ಹೇಳಿದ ಹಾಗೆ ಕೇಳಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಗ್ಯಾರಂಟಿಗಳಿಗೆ ಮರು ಅರ್ಜಿ: ನಿಲ್ಲಿಸುತ್ತಿಲ್ಲ, ಪರಿಷ್ಕರಣೆ ಮಾತ್ರ
ಗ್ಯಾರಂಟಿ ಯೋಜನೆಗಳಿಗೆ ಸಾರ್ವಜನಿಕರು ಮರು ಅರ್ಜಿ ಹಾಕಬೇಕು ಎಂಬ ಗೊಂದಲಕ್ಕೆ ಸ್ಪಷ್ಟನೆ ನೀಡಿದ ಸಚಿವರು, “ನಾವು ಯಾವುದೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಿಲ್ಲ. ಗ್ಯಾರಂಟಿ ಸೌಲಭ್ಯಗಳು ಕೇವಲ ಅರ್ಹರಿಗೆ ಮಾತ್ರ ತಲುಪಬೇಕು ಎಂಬ ಉದ್ದೇಶದಿಂದ ಪರಿಷ್ಕರಣೆ ಮಾಡಲಾಗುತ್ತಿದೆ ಅಷ್ಟೇ. ಇದಕ್ಕೆ ಬಿಜೆಪಿಯವರಿಗೆ ಯಾಕೆ ಆತಂಕ? ಮತ್ತೊಮ್ಮೆ ಎಲ್ಲರಿಂದ ಅರ್ಜಿ ಹಾಕಿಸಿಕೊಂಡಾಗ ಅರ್ಹರನ್ನು ಪರಿಶೀಲನೆ ಮಾಡಲು ಸರ್ಕಾರಕ್ಕೆ ಸುಲಭವಾಗುತ್ತದೆ. ಬಿಜೆಪಿಯವರಿಗೆ ಅಷ್ಟೊಂದು ಸಮಸ್ಯೆಯಿದ್ದರೆ ಅವರ ಕಾರ್ಯಕರ್ತರಿಗೆ ಗ್ಯಾರಂಟಿ ಸೌಲಭ್ಯಗಳು ಬೇಡ ಅಂತ ಬಿಡಲು ಹೇಳಲಿ, ಗ್ಯಾರಂಟಿ ಬೇಡ ಅಂತ ಬಿಜೆಪಿ ಅಧಿಕೃತವಾಗಿ ಅಭಿಯಾನ ಮಾಡಲಿ. ಅವರಿಗೆ ಬೇಡ ಅಂದರೆ ತಗೊಳ್ಳುವುದು ಬೇಡ, ರಾಜ್ಯದ ಬೇರೆ ಜನ ತಗೋತಾರೆ” ಎಂದಿದ್ದಾರೆ.
ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಕೌಂಟರ್: ‘ನಾವು ಕೇಂದ್ರಕ್ಕೆ ಕೈಚಾಚಿಲ್ಲ’
ಗ್ಯಾರಂಟಿ ಯೋಜನೆಗಳ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಿರುವ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಗ್ಯಾರಂಟಿಗಳಿಗಾಗಿ ನಾವೇನು ಕೇಂದ್ರ ಸರ್ಕಾರದ ಬಳಿ ಭಿಕ್ಷೆ ಬೇಡಿದ್ದೀವಾ ಅಥವಾ ಕೈ ಚಾಚಿದ್ದೀವಾ? ಯೋಜನೆಗಳನ್ನು ನಡೆಸಲು ಅಂದಿನ ಸಿಎಂ ಸಿದ್ದರಾಮಯ್ಯ ಆಗಲೀ ಈಗಿನ ಸಿಎಂ ಡಿ.ಕೆ. ಶಿವಕುಮಾರ್ ಆಗಲೀ ನಿರ್ಮಲಾ ಸೀತಾರಾಮನ್ ಬಳಿ ಹೋಗಿ ಕೇಳಿಕೊಂಡಿದ್ದಾರಾ? ನಾವು ಕೇಳುತ್ತಿರುವುದು ಕೇಂದ್ರದ ಪುರಸ್ಕಾರ ಯೋಜನೆಗಳಿಗೆ ಬರಬೇಕಾದ ನಮ್ಮ ನ್ಯಾಯಯುತ ಪಾಲನ್ನು ಮಾತ್ರ’ ಎಂದಿದ್ದಾರೆ.
‘ನಾವು ತೆರಿಗೆ ಕಟ್ಟುತ್ತಿದ್ದೀವಿ, ಅದಕ್ಕೆ ತಕ್ಕಂತೆ ನಮ್ಮ ಪಾಲಿನ ಫಲ ಕೊಡಿ ಎನ್ನುತ್ತಿದ್ದೀವಿ ವಿನಃ ಗ್ಯಾರಂಟಿಗಳಿಗೆ ದುಡ್ಡು ಕೊಡಿ ಎಂದು ಕೇಳುತ್ತಿಲ್ಲ. ಕರ್ನಾಟಕದ ಬಗ್ಗೆ ಇಷ್ಟೆಲ್ಲ ಮಾತಾಡುವವರು ಆಂಧ್ರಪ್ರದೇಶಕ್ಕೆ ಕೊಡಬೇಕಾದ 10-15 ಲಕ್ಷ ಕೋಟಿ ರೂಪಾಯಿ ಬಾಕಿ ಬಗ್ಗೆ ಯಾಕೆ ಮಾತಾಡುತ್ತಿಲ್ಲ? ಮೊದಲು ಮಹಾರಾಷ್ಟ್ರದಲ್ಲಿನ ‘ಲಾಡ್ಲಿ ಬೆಹೆನ್’ ಯೋಜನೆ ನಿಲ್ಲಿಸಲಿ. ಗುಜರಾತ್, ಮಧ್ಯಪ್ರದೇಶ, ಯುಪಿ ರಾಜ್ಯಗಳಲ್ಲಿ ಬಿಜೆಪಿ ಗ್ಯಾರಂಟಿ ಕೊಟ್ಟರೆ ಅದು ‘ಮಾಸ್ಟರ್ ಸ್ಟ್ರೋಕ್’, ಅದೇ ನಾವು ಕೊಟ್ಟರೆ ನಿಮಗೆ ತೊಂದರೆನಾ? ನಮಗೆ ಬರಬೇಕಾದ ಅನುದಾನವನ್ನು ನ್ಯಾಯಯುತವಾಗಿ ಕೊಡಲಿ. ಉತ್ತರ ಪ್ರದೇಶಕ್ಕೆ (UP) ಅತಿ ಹೆಚ್ಚು ದುಡ್ಡು ಕೊಡುತ್ತಾರೆ, ಆದರೆ ಅತಿ ಹೆಚ್ಚು ತೆರಿಗೆ ಕೊಡುವ ನಮಗೆ ಮಾತ್ರ ಅನ್ಯಾಯ ಮಾಡಲಾಗುತ್ತಿದೆ” ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜಸ್ಥಾನದಲ್ಲಿ ಲಂಚ ಪಡೆಯುವಾಗ ಸಿಕ್ಕಿಬಿದ್ದ ಬೆಂಗಳೂರು ಪೊಲೀಸ್, ‘ಸಸ್ಪೆಂಡ್ ಮಾಡಿದ್ದೀವಿ’ ಎಂದ ಪ್ರಿಯಾಂಕ್ ಖರ್ಗೆ
WhatsApp Group
Join Now