ಬೆಂಗಳೂರು: ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತುಳಸಿನಗರದಲ್ಲಿ ನಡೆದ ಯುವತಿ ಭವಾನಿ ಭೀಕರ ಕೊಲೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ!
ಮೊಬೈಲ್ ಶೋ ರೂಂ ಉದ್ಯೋಗಿ ಭವಾನಿ ಮತ್ತು ಚಂದ್ರಶೇಖರ್ ಕೇವಲ ಲಿವ್-ಇನ್ನಲ್ಲಷ್ಟೇ ಅಲ್ಲ, ಒಂದು ವರ್ಷದ ಹಿಂದೆಯೇ ಯಾರಿಗೂ ತಿಳಿಯದಂತೆ ಕದ್ದುಮುಚ್ಚಿ ಮದುವೆಯಾಗಿದ್ದರು ಎಂಬ ಸತ್ಯದ ಜೊತೆಗೆ, ಈ ಹತ್ಯೆಯ ಹಿಂದಿನ ಅಸಲಿ ಕಾರಣ ಈಗ ಸಾರ್ವಜನಿಕವಾಗಿ ತಲ್ಲಣ ಸೃಷ್ಟಿಸಿದೆ.
ಮಾಗಡಿ ಸಮೀಪದ ಗೆಜ್ಜರಗುಪ್ಪೆ ಗ್ರಾಮದ ನಿವಾಸಿ ಭವಾನಿ (22) ಕೊಲೆಯಾದ ದುರ್ದೈವಿಯಾಗಿದ್ದು, ಪ್ರಾಣಕ್ಕಿಂತ ಹೆಚ್ಚಾಗಿ ನಂಬಿದವನೇ ಆಕೆಯ ಬಾಳಿಗೆ ಕಂಟಕನಾಗಿದ್ದಾನೆ.
ಬದುಕಿನ ಆಸರೆಯಾಗಿದ್ದವಳಿಗೆ ಸಿಕ್ಕಿತ್ತು ಬಿಗ್ ಶಾಕ್!
ಕಡು ಬಡತನದ ಕುಟುಂಬದಲ್ಲಿ ಹುಟ್ಟಿದ ಭವಾನಿ, ಹೆತ್ತವರಿಗೆ ಆಸರೆಯಾಗಲು ಬೆಂಗಳೂರಿಗೆ ಬಂದು ಮೊಬೈಲ್ ಶೋ ರೂಂ ಒಂದರಲ್ಲಿ ಬಿಲ್ಲಿಂಗ್ ಕೆಲಸ ಮಾಡುತ್ತಿದ್ದಳು. ಬಂದ ಸಂಬಳದಲ್ಲಿ ತನಗಿಟ್ಟುಕೊಂಡು ಉಳಿದ ಹಣವನ್ನು ಊರಿಗೆ ಕಳುಹಿಸುತ್ತಿದ್ದಳು. ಇದೇ ವೇಳೆ ಪರಿಚಯವಾದ ಚಂದ್ರಶೇಖರ್ ಅಲಿಯಾಸ್ ಚಂದನ್ ಜೊತೆ ಪ್ರೇಮಾಂಕುರವಾಗಿ, ಒಂದು ವರ್ಷದ ಹಿಂದೆ ರಹಸ್ಯವಾಗಿ ಮದುವೆಯಾಗಿ ಜೊತೆಯಲ್ಲೇ ವಾಸವಿದ್ದರು. ಆದರೆ, ಇತ್ತೀಚೆಗಷ್ಟೇ ತಾನು ನಂಬಿದ ಗಂಡನಿಗೆ ಈಗಾಗಲೇ ಮದುವೆಯಾಗಿ 6 ವರ್ಷದ ಒಂದು ಮಗುವಿದೆ ಎಂಬ ಆಘಾತಕಾರಿ ಸತ್ಯ ಭವಾನಿಗೆ ಗೊತ್ತಾಗಿದೆ!
‘ನಾನು ಮತ್ತೊಬ್ಬನನ್ನು ಮದುವೆಯಾಗ್ತೀನಿ’ ಅಂದಿದ್ದೇ ಮುಳುವಾಯ್ತಾ?
ತನಗೆ ವಂಚಿಸಿದ ಗಂಡನ ಅಸಲಿ ಮುಖವಾಡ ಕಳಚುತ್ತಿದ್ದಂತೆ ಭವಾನಿ ಕಠಿಣ ನಿರ್ಧಾರಕ್ಕೆ ಬಂದಿದ್ದಾಳೆ. “ನೀನು ನನಗೆ ಮೋಸ ಮಾಡಿದ್ದೀಯಾ, ನಾನು ಎಲ್ಲರಿಗೂ ಗೊತ್ತಾಗೋ ಹಾಗೆ ಸಮಾಜದ ಮುಂದೆ ಮತ್ತೊಬ್ಬನನ್ನು ಮದುವೆಯಾಗ್ತೀನಿ” ಎಂದು ಚಂದನ್ ಮುಖಕ್ಕೇ ಹೊಡೆದಂತೆ ಹೇಳಿದ್ದಾಳೆ. ಅದರಂತೆ ಮಗಳ ನೋವಿಗೆ ಸ್ಪಂದಿಸಿದ ಪೋಷಕರು ಮುಂದಿನ ವಾರವೇ ಆಕೆಗೆ ಎಂಗೇಜ್ಮೆಂಟ್ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.
ಇನ್ಸ್ಟಾಗ್ರಾಂನಲ್ಲಿ ಮದುವೆ ಫೋಟೋ ಲೀಕ್ ಮಾಡಿ ಸೈಕೋ ಆಟ!
ಭವಾನಿ ಕೈಬಿಟ್ಟು ಹೋಗುತ್ತಾಳೆ ಎಂದು ಸೈಕೋ ತರ ಆಡಿದ ಚಂದ್ರಶೇಖರ್, ತಾನೇ ಮನೆ ಮಾಡಿಕೊಟ್ಟಿದ್ದ ಬ್ಯಾಡರಹಳ್ಳಿಯ ತಿಗಳರಪಾಳ್ಯದ ರೂಮ್ಗೆ ಬಂದು ಜಗಳ ಆಡಿದ್ದಾನೆ. “ನೀನಿಲ್ಲದೆ ನಾನು ಬದುಕಲ್ಲ, ಬದುಕಿದ್ರೆ ಒಟ್ಟಿಗೆ ಬದುಕೋಣ, ಇಲ್ಲಾಂದ್ರೆ ಇಬ್ಬರೂ ಸಾಯೋಣ” ಎಂದು ಬ್ಲ್ಯಾಕ್ಮೇಲ್ ಮಾಡಿದ್ದಾನೆ. ಆದರೆ ಇದಕ್ಕೆ ಭವಾನಿ ಒಪ್ಪದಿದ್ದಾಗ, ಇಬ್ಬರೂ ಮದುವೆಯಾಗಿದ್ದ ಫೋಟೋವನ್ನು ಆಕೆಯ ಇನ್ಸ್ಟಾಗ್ರಾಂ ಖಾತೆಯಲ್ಲೇ ಅಪ್ಲೋಡ್ ಮಾಡಿ ವಿಕೃತ ಆನಂದ ಪಟ್ಟಿದ್ದಾನೆ.
ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯ: ಇನ್ಸ್ಟಾದಲ್ಲಿ ಫೋಟೋ ನೋಡಿ ಭವಾನಿ ಪೋಷಕರು ಫೋನ್ ಮಾಡಿದಾಗ ವಿಷಯ ಮನೆಯವರಿಗೂ ಗೊತ್ತಾಯ್ತು ಎಂದು ಭವಾನಿ ಚಂದನ್ ಜೊತೆ ತೀವ್ರವಾಗಿ ಗಲಾಟೆ ಮಾಡಿದ್ದಾಳೆ. ಇದರಿಂದ ಮತ್ತಷ್ಟು ಉದ್ರಿಕ್ತನಾದ ಚಂದ್ರಶೇಖರ್, ಭವಾನಿಯ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಬಾಗಿಲು ಒಡೆದು ನೋಡಿದಾಗ ಸಿಕ್ತು ಹೆಣ!
ಮಗಳು ಸತತವಾಗಿ ಫೋನ್ ಸ್ವೀಕರಿಸದಿದ್ದಾಗ ಗಾಬರಿಗೊಂಡ ಪೋಷಕರು ಮನೆ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಮಾಲೀಕರು ಸ್ಥಳಕ್ಕೆ ಬಂದು ನೋಡಿದಾಗ ಒಳಗಡೆಯಿಂದ ಚಂದನ್ ನರಳಾಡುತ್ತಿರುವ ಸದ್ದು ಕೇಳಿಸಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ, ಬಾಗಿಲು ಒಡೆದು ಒಳಹೋದಾಗ ಭವಾನಿ ಶವವಾಗಿ ಬಿದ್ದಿರುವುದು ಬೆಳಕಿಗೆ ಬಂದಿದೆ.
ಸದ್ಯ ವಿಷ ಸೇವಿಸಿ ನರಳಾಡುತ್ತಿದ್ದ ಹಂತಕ ಚಂದ್ರಶೇಖರ್ನನ್ನು ಆಸ್ಪತ್ರೆಗೆ ದಾಖಲಿಸಿರುವ ಬ್ಯಾಡರಹಳ್ಳಿ ಪೊಲೀಸರು, ಮೃತ ಭವಾನಿ ಪೋಷಕರು ನೀಡಿದ ದೂರಿನ ಮೇರೆಗೆ ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ತಿರುವು ಪಡೆದ ಬ್ಯಾಡರಹಳ್ಳಿ ಹತ್ಯಾಕಾಂಡಕ : ಮೊದಲ ಹೆಂಡತಿ ವಿಷಯ ಗೊತ್ತಾಗಿ ಭವಾನಿ ಬೇರೆ ಮದುವೆಗೆ ಒಪ್ಪಿದ್ದಕ್ಕೇ ಕೊಲೆ ಮಾಡಿದ್ನಾ ವಂಚಕ ಪ್ರಿಯಕರ?!
WhatsApp Group
Join Now