ಚುಡಾಯಿಸಲು ಬಂದವನ ಕಣ್ಣಿಗೆ ಖಾರದ ಪುಡಿ ಎರಚಿ, ಸಾರ್ವಜನಿಕವಾಗಿ ‘ಧರ್ಮದೇಟು’ ಕೊಟ್ಟ ಗಟ್ಟಿಗಿತ್ತಿ!

Spread the love

ರಾಯಚೂರು: ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿ, ಚುಡಾಯಿಸಲು ಯತ್ನಿಸಿದ ರೋಮಿಯೋಗೆ ಮಹಿಳೆಯೇ ಸಾರ್ವಜನಿಕವಾಗಿ ಹಿಗ್ಗಾಮುಗ್ಗಾ ಥಳಿಸಿ ತಕ್ಕ ಪಾಠ ಕಲಿಸಿರುವ ಘಟನೆ ರಾಯಚೂರು ನಗರದಲ್ಲಿ ನಡೆದಿದೆ. ಕಿರುಕುಳ ನೀಡಿದ ವ್ಯಕ್ತಿಯ ಕಣ್ಣಿಗೆ ನೇರವಾಗಿ ಖಾರದ ಪುಡಿ ಎರಚಿ, ಬಳಿಕ ಕಟ್ಟಿಗೆಯಿಂದ ಧರ್ಮದೇಟು ನೀಡಿದ ಗಟ್ಟಿಗಿತ್ತಿಯ ಧೈರ್ಯದ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

ಸಿನಿಮೀಯ ಶೈಲಿಯಲ್ಲಿ ಪಾಠ ಕಲಿಸಿದ ಮಹಿಳೆ!

ರಾಯಚೂರು ಬಸ್ ನಿಲ್ದಾಣದ ಆವರಣದಲ್ಲಿ ರಾಜು ಬೊಮ್ಮನಾಳ ಎಂಬಾತ ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿ, ಪೀಡಿಸುತ್ತಿದ್ದ ಎನ್ನಲಾಗಿದೆ. ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಮಹಿಳೆಯರು ಹೆದರಿ ಅಲ್ಲಿಂದ ಹೊರಟುಹೋಗುತ್ತಾರೆ. ಆದರೆ, ಈ ಮಹಿಳೆ ಧೈರ್ಯಗೆಡದೆ ಆತನಿಗೆ ಅಲ್ಲೇ ಬುದ್ಧಿ ಕಲಿಸಲು ನಿರ್ಧರಿಸಿದರು.

ತಕ್ಷಣವೇ ಪಕ್ಕದಲ್ಲೇ ಇದ್ದ ಹೋಟೆಲ್‌ಗೆ ಓಡಿದ ಮಹಿಳೆ, ಅಲ್ಲಿಂದ ಖಾರದ ಪುಡಿಯನ್ನು ತಂದು ಯಾರಿಗೂ ತಿಳಿಯದಂತೆ ರಾಜು ಬೊಮ್ಮನಾಳನ ಕಣ್ಣಿಗೆ ನೇರವಾಗಿ ಎರಚಿದ್ದಾರೆ. ಖಾರದ ಪುಡಿಯ ಉರಿಯಿಂದಾಗಿ ಆತ ಕಣ್ಣು ಕಾಣಿಸದೆ ಒದ್ದಾಡುತ್ತಿದ್ದಂತೆ, ಅಲ್ಲೇ ಬಿದ್ದಿದ್ದ ಗಟ್ಟಿ ಮುಟ್ಟಾದ ಕಟ್ಟಿಗೆಯನ್ನು ಕೈಗೆತ್ತಿಕೊಂಡ ಮಹಿಳೆ ಆತನಿಗೆ ಸಾರ್ವಜನಿಕವಾಗಿಯೇ ಧರ್ಮದೇಟು ನೀಡಲು ಆರಂಭಿಸಿದರು.

“ಬೇಕಿದ್ದರೆ ಕೇಸ್ ಹಾಕಲಿ, ಇವನನ್ನು ಬಿಡಲ್ಲ!” ಎಂದು ಸವಾಲು ಹಾಕಿದ ಗಟ್ಟಿಗಿತ್ತಿ

ಮಹಿಳೆ ತೀವ್ರ ಆಕ್ರೋಶದಿಂದ ವ್ಯಕ್ತಿಯನ್ನು ತಳಿಸುತ್ತಿದ್ದಾಗ ಬಸ್ ನಿಲ್ದಾಣದಲ್ಲಿದ್ದ ಕೆಲವರು ಜಗಳ ಬಿಡಿಸಲು ಬಂದಿದ್ದಾರೆ. ಈ ವೇಳೆ ಮತ್ತಷ್ಟು ಗರಂ ಆದ ಮಹಿಳೆ,

“ನನ್ನ ಮೇಲೆ ಯಾರಾದರೂ ಬೇಕಿದ್ದರೆ ಪೊಲೀಸ್ ಕೇಸ್ ಹಾಕಲಿ, ಅದಕ್ಕೆ ನಾನು ಹೆದರಲ್ಲ. ಆದರೆ ಹೆಣ್ಣುಮಕ್ಕಳ ಜೊತೆ ಅಸಭ್ಯವಾಗಿ ಆಡುವ ಇವನನ್ನು ಮಾತ್ರ ನಾನು ಸುಮ್ಮನೆ ಬಿಡಲ್ಲ” ಎಂದು ಬಹಿರಂಗವಾಗಿಯೇ ಸವಾಲು ಹಾಕಿದ್ದಾರೆ.

ತಪ್ಪು ಮಾಡಿದ ವ್ಯಕ್ತಿಗೆ ಸ್ಥಳದಲ್ಲೇ ಪ್ರತ್ಯಕ್ಷ ಸಾಕ್ಷಿಯಾಗಿ ತಕ್ಕ ಪಾಠ ಕಲಿಸಿದ ಮಹಿಳೆಯ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ಅಲ್ಲಿದ್ದ ಸಾರ್ವಜನಿಕರು ಹಾಗೂ ನೆಟ್ಟಿಗರು ಮುಕ್ತಕಂಠದಿಂದ ಮೆಚ್ಚಿಕೊಂಡಿದ್ದಾರೆ.

ಸ್ಥಳಕ್ಕೆ ಪೊಲೀಸರ ಭೇಟಿ:

ಈ ಇಡೀ ಹಲ್ಲೆ ಹಾಗೂ ಹೈಡ್ರಾಮಾ ಘಟನೆಯು ರಾಯಚೂರಿನ ಸದರಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಷಯ ತಿಳಿದ ಸದರಬಜಾರ್ ಪೊಲೀಸರು ತಕ್ಷಣವೇ ಬಸ್ ನಿಲ್ದಾಣದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

WhatsApp Group Join Now

Spread the love

Leave a Reply