“ಭಾರತದ ಪ್ರಜಾಪ್ರಭುತ್ವವನ್ನು ಹಾಳುಗೆಡವುವ ಮೂಲಕ ದೀರ್ಘಾವಧಿ ಪ್ರಧಾನಿಯಾಗಿ ಮುಂದುವರಿದಿರುವ ನರೇಂದ್ರ ಮೋದಿ ಅವರ ಸಾಧನೆಯ ಬಗ್ಗೆ ಬಿಜೆಪಿ ಸಂಭ್ರಮಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅತಿ ದೊಡ್ಡ ಅಣಕ” ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸದಸ್ಯ ಸಿದ್ದರಾಮಯ್ಯ (Siddaramaiah) ಆಕ್ರೋಶ ಹೊರಹಾಕಿದ್ದಾರೆ.
ಮಧ್ಯಪ್ರದೇಶದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕೃತಗೊಂಡಿರುವ ಹಿನ್ನೆಲೆಯಲ್ಲಿ ಅವರು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ನಾಮಪತ್ರ ತಿರಸ್ಕಾರದ ಹಿಂದೆ ರಾಜಕೀಯ ಷಡ್ಯಂತ್ರ!
“ಮಧ್ಯಪ್ರದೇಶದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ಸಲ್ಲಿಕೆಯಲ್ಲಿ ಯಾವುದೇ ಲೋಪದೋಷಗಳಿರಲಿಲ್ಲ. ಆದರೂ ಮೋದಿಯವರ ಕಪಿಮುಷ್ಠಿಯಲ್ಲಿರುವ ಚುನಾವಣಾ ಆಯೋಗವು ಇಲ್ಲದ ತಪ್ಪುಗಳನ್ನು ಸೃಷ್ಟಿ ಮಾಡಿ ನಾಮಪತ್ರವನ್ನು ತಿರಸ್ಕರಿಸಿದೆ. ಇದು ಸ್ಪಷ್ಟ ಚುನಾವಣಾ ಅಕ್ರಮ ಮತ್ತು ರಾಜಕೀಯ ಷಡ್ಯಂತ್ರ” ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕಾನೂನಿನ ಚೌಕಟ್ಟಿನಡಿ ಮೀನಾಕ್ಷಿ ನಟರಾಜನ್ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. ಕೇವಲ ಒಂದು ಖಾಸಗಿ ದೂರಿನ ಶೋಕಾಸ್ ನೋಟಿಸ್ ಬಂದಿರುವುದನ್ನು ಅಫಿಡವಿಟ್‌ನಲ್ಲಿ ಸೇರಿಸುವ ಅಗತ್ಯವಿಲ್ಲ ಎಂದು ಆಯೋಗದ ನಿಯಮಗಳಲ್ಲೇ ಇದ್ದರೂ, ಪಕ್ಷಪಾತ ಧೋರಣೆಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ದೂರಿದ್ದಾರೆ.
ಕುದುರೆ ವ್ಯಾಪಾರ ನಡೆಯದಿದ್ದಾಗ ಆಯೋಗದ ದುರುಪಯೋಗ
“ಮಧ್ಯಪ್ರದೇಶದಲ್ಲಿ ಕೇವಲ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಸಂಖ್ಯಾಬಲ ಇದ್ದರೂ ಬಿಜೆಪಿ 3ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಕೋಟ್ಯಂತರ ರೂಪಾಯಿ ಹಣದ ಆಮಿಷ ಒಡ್ಡಿ ಕಾಂಗ್ರೆಸ್ ಶಾಸಕರನ್ನು ಖರೀದಿಸಲು (ಕುದುರೆ ವ್ಯಾಪಾರ) ಜಾಲ ಹೆಣೆದಿತ್ತು. ಆದರೆ ಕಾಂಗ್ರೆಸ್ ಶಾಸಕರು ಒಗ್ಗಟ್ಟಾಗಿದ್ದರಿಂದ ಬಿಜೆಪಿಯ ಆಟ ನಡೆಯಲಿಲ್ಲ.
ಯಾವಾಗ ಕುದುರೆ ವ್ಯಾಪಾರ ಕೈಕೊಟ್ಟಿತೋ, ಆಗ ಕೊನೆಯ ಅಸ್ತ್ರವಾಗಿ ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರವನ್ನೇ ತಿರಸ್ಕರಿಸುವಂತೆ ಮಾಡಿದೆ” ಎಂದು ಸಿದ್ದರಾಮಯ್ಯ ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಬಿಜೆಪಿಯದ್ದು ಮತಗಳ್ಳತನದ ದಂಧೆ
ಬಿಜೆಪಿಯ ಚುನಾವಣಾ ತಂತ್ರಗಳನ್ನು ಕಠಿಣ ಪದಗಳಲ್ಲಿ ಟೀಕಿಸಿರುವ ಅವರು, “ಬಿಜೆಪಿ ದೇಶದಲ್ಲಿ ಮತಗಳ್ಳತನವನ್ನು ಅಧಿಕೃತ ದಂಧೆಯನ್ನಾಗಿಸಿಕೊಂಡಿದೆ. ಈಗ ರಾಜ್ಯಸಭೆ ಚುನಾವಣೆಯಲ್ಲೂ ಅಕ್ರಮ ಎಸಗುವ ಮೂಲಕ ‘ಸ್ಥಾನಗಳ್ಳತನ’ಕ್ಕೆ ಇಳಿದಿದೆ. ಮತದಾರರ ದಿಕ್ಕು ತಪ್ಪಿಸುವುದು, ಪ್ರಾದೇಶಿಕ ಪಕ್ಷಗಳನ್ನು ಒಡೆಯುವುದು, ಕುದುರೆ ವ್ಯಾಪಾರ ಮತ್ತು ಸ್ವತಂತ್ರ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವುದೇ ಬಿಜೆಪಿಯ ಕೆಲಸ ಎಂದು ಸಿದ್ದರಾಮಯ್ಯ ಕಿಡಿಕಾರಿದ್ರು
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕೃತಕವಾಗಿ ಸಂಖ್ಯಾಬಲ ಹೆಚ್ಚಿಸಿಕೊಂಡು, ತನ್ನ ಸಂವಿಧಾನ ವಿರೋಧಿ ಮಸೂದೆಗಳನ್ನು ಯಾವುದೇ ಪ್ರತಿರೋಧವಿಲ್ಲದೆ ಜಾರಿಗೊಳಿಸುವುದು ಇವರ ಅಸಲಿ ಗುರಿಯಾಗಿದೆ” ಎಂದು ಕಿಡಿಕಾರಿದ್ದಾರೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲಿನ ಇಂತಹ ದಾಳಿಗಳ ವಿರುದ್ಧ ಕಾಂಗ್ರೆಸ್ ಪಕ್ಷವು ನಾಗರಿಕರ ಪರವಾಗಿ ನಿರಂತರ ಹೋರಾಟ ನಡೆಸಲಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.