ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಡಿ.ಕೆ. ಶಿವಕುಮಾರ್ ಭಾನುವಾರ (ಜೂನ್.7) ತವರು ಕ್ಷೇತ್ರಕ್ಕೆ ಹೋಗಿದ್ದರು. ಅಂದು ಕನಕಪುರದಲ್ಲಿ ನಡೆದ ಘಟನೆಯೊಂದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿ ಕಚ್ಚಿ ಎಸೆದ ಸೇಬು ಹಣ್ಣುಗಳನ್ನು ಪಡೆಯಲು ಬೆಂಬಲಿಗರು ಮುಗಿಬಿದ್ದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಕನಕಪುರ ಕ್ಷೇತ್ರಕ್ಕೆ ಡಿ.ಕೆ. ಶಿವಕುಮಾರ್ ಅವರು ಕೃತಜ್ಞತಾ ಪ್ರವಾಸ ಹಮ್ಮಿಕೊಂಡಿದ್ದರು. ಈ ವೇಳೆ ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಾರ್ವಜನಿಕರಿಂದ ಅವರಿಗೆ ಅದ್ದೂರಿ ಸ್ವಾಗತ ದೊರೆಯಿತು. ಆದರೆ, ಈ ಪ್ರವಾಸದ ವೇಳೆ ನಡೆದ ಘಟನೆಯ ಬಗ್ಗೆ ನೆಟ್ಟಿಗರಿಂದ ಹಾಗೂ ವಿರೋಧ ಪಕ್ಷದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹಾರೋಹಳ್ಳಿ ಗ್ರಾಮಕ್ಕೆ ತಲುಪಿದಾಗ ಸಿಎಂ ಅವರನ್ನು ಸ್ವಾಗತಿಸಲು ಭಾರಿ ಜನಸಮೂಹವೇ ನೆರೆದಿತ್ತು. ಈ ವೇಳೆ ತಮಗೆ ಹಾಕಲಾಗಿದ್ದ ಬೃಹತ್ ಸೇಬಿನ ಹಾರದಿಂದ ಹಣ್ಣೊಂದನ್ನು ಕಿತ್ತುಕೊಂಡ ಡಿ.ಕೆ. ಶಿವಕುಮಾರ್, ಒಂದು ಭಾಗವನ್ನು ಕಚ್ಚಿ ಉಳಿದ ಸೇಬು ಹಣ್ಣನ್ನು ನೆರೆದಿದ್ದ ಅಭಿಮಾನಿಗಳತ್ತ ಎಸೆದರು. ಬಳಿಕ ಮತ್ತೊಂದು ಸೇಬು ಹಣ್ಣನ್ನು ಇದೇ ರೀತಿ ಕಚ್ಚಿ ಜನರತ್ತ ಎಸೆದು, ಕೈಬೀಸುತ್ತಾ ಮುಂದೆ ಸಾಗಿದರು. ಸಿಎಂ ಎಸೆದ ಹಣ್ಣನ್ನು ಹಿಡಿಯಲು ಬೆಂಬಲಿಗರು ಪರಸ್ಪರ ಮುಗಿಬೀಳುತ್ತಿರುವುದು ವಿಡಿಯೊದಲ್ಲಿ ಕಾಣಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಬಿಜೆಪಿ ಎಕ್ಸ್ ಖಾತೆಯಲ್ಲಿ ವಿಡಿಯೊವನ್ನು ಹಂಚಿಕೊಂಡು ಅದನ್ನು ಅಹಂಕಾರದ ಪರಮಾವಧಿ ಎಂದು ಟೀಕಿಸಿದೆ. ‘ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕರು ಗೌರವವನ್ನು ಅಪೇಕ್ಷಿಸುತ್ತಾರೆಯೇ ಹೊರತು ಇಂತಹ ಅತಿರೇಕದ ನಡವಳಿಕೆಗಳನ್ನಲ್ಲ. ಇದು ನಾಯಕರ ಅಹಂಕಾರದ ಪರಮಾವಧಿಯಾಗಿದೆ. ರಾಜಕೀಯ ಸಿದ್ದಾಂತಗಳು ಯಾವುದೇ ಇರಲಿ, ಅಧಿಕಾರದಲ್ಲಿರುವವರು ಸಾರ್ವಜನಿಕ ಜೀವನದಲ್ಲಿ ಕನಿಷ್ಠ ಸೌಜನ್ಯ ಹಾಗೂ ಘನತೆಯನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ’ ಎಂದು ಟೀಕಿಸಿದೆ.